ಬೆಂಗಳೂರು: ನಗರದ ಐತಿಹಾಸಿಕ ವಿಧಾನಸೌಧದ ಆವರಣದಲ್ಲಿ ಆಗಸ್ಟ್ 15ರಂದು ನಡೆಯಲಿರುವ ರಾಜ್ಯದ ಮೊದಲ ಸಾರ್ವಜನಿಕ ‘ಸ್ವಾತಂತ್ರ್ಯ ಹಬ್ಬ–2026’ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಭದ್ರತೆ ಹಾಗೂ ಸಂಚಾರ ವ್ಯವಸ್ಥೆ ಕುರಿತು ಗೃಹ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ಅವರು ಪೊಲೀಸ್ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುವ ನಿರೀಕ್ಷೆಯಿರುವ ಹಿನ್ನೆಲೆಯಲ್ಲಿ ಭದ್ರತೆ, ಸಂಚಾರ ನಿರ್ವಹಣೆ, ಸಾರ್ವಜನಿಕರ ಪ್ರವೇಶ ಮತ್ತು ನಿರ್ಗಮನ, ವಾಹನ ನಿಲುಗಡೆ ಹಾಗೂ ಜನದಟ್ಟಣೆ ನಿಯಂತ್ರಣಕ್ಕೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ವಿಧಾನಸೌಧದಲ್ಲಿ ಬೆಳಿಗ್ಗೆ 11ರಿಂದ ರಾತ್ರಿ 10ರವರೆಗೆ ನಡೆಯಲಿರುವ ಸ್ವಾತಂತ್ರ್ಯ ಹಬ್ಬದಲ್ಲಿ ‘ದಿ ಪೀಪಲ್ಸ್ ಇಂಡಿಯಾ ಪೆರೇಡ್’, ವಿಧಾನಸೌಧದ ವಿಶೇಷ ಪ್ರವಾಸ, ಮಕ್ಕಳಿಗಾಗಿ ‘ಮಕ್ಕಳ ಮೇಳ’, ರಸಪ್ರಶ್ನೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಗೀತ ಕಚೇರಿ ಹಾಗೂ ವಿವಿಧ ಜಿಲ್ಲೆಗಳ ಆಹಾರ ಮತ್ತು ಕರಕುಶಲ ಪ್ರದರ್ಶನಗಳು ನಡೆಯಲಿವೆ.
ಸಂಜೆಯ ಸಂಗೀತ ಕಾರ್ಯಕ್ರಮ ಹಾಗೂ ರಾತ್ರಿ ಪಟಾಕಿ ಪ್ರದರ್ಶನಕ್ಕೆ ಹೆಚ್ಚಿನ ಜನರು ಸೇರುವ ಸಾಧ್ಯತೆ ಇರುವುದರಿಂದ ಈ ಅವಧಿಯಲ್ಲಿ ವಿಶೇಷ ಭದ್ರತೆ ಮತ್ತು ಸಂಚಾರ ವ್ಯವಸ್ಥೆ ಕಲ್ಪಿಸುವಂತೆ ಪ್ರಿಯಾಂಕ್ ಖರ್ಗೆ ನಿರ್ದೇಶನ ನೀಡಿದರು.

ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಸುಗಮ ಸಂಚಾರ ವ್ಯವಸ್ಥೆ, ಪಾದಚಾರಿಗಳ ಸುರಕ್ಷತೆ, ತುರ್ತು ಸೇವೆಗಳಿಗೆ ಅಗತ್ಯ ವ್ಯವಸ್ಥೆ ಹಾಗೂ ಜನದಟ್ಟಣೆ ನಿಯಂತ್ರಣಕ್ಕೆ ಸಮರ್ಪಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಚಿವರು ಹೇಳಿದರು.
ಸಾರ್ವಜನಿಕರ ಸುರಕ್ಷತೆಯಲ್ಲಿ ಯಾವುದೇ ಲೋಪವಾಗದಂತೆ ಪೊಲೀಸ್ ಇಲಾಖೆ, ಜಿಬಿಎ ಹಾಗೂ ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ಸೂಚಿಸಿದರು.
ಸಭೆಯಲ್ಲಿ ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸೇರಿದಂತೆ ಪೊಲೀಸ್ ಇಲಾಖೆ, ಜಿಬಿಎ ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.











