ಬೆಂಗಳೂರು: ವಿದ್ಯಾರ್ಥಿಗಳಿಗೆ ವಿದ್ಯೆ, ಬುದ್ಧಿಯ ಜೊತೆಗೆ ಕನ್ನಡದ ಮನಸ್ಸನ್ನೂ ಕಟ್ಟಬೇಕು ಎಂದು ಆಳ್ವಾಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮೋಹನ್ ಆಳ್ವ ಅಭಿಪ್ರಾಯಪಟ್ಟರು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್‌ಜಿಯುಹೆಚ್‌ಎಸ್) ಹಾಗೂ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ಸಹಯೋಗದಲ್ಲಿ ಶನಿವಾರ ನಡೆದ ಪ್ರಥಮ ಕನ್ನಡ ಸಮಗ್ರ ವೈದ್ಯಕೀಯ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಮೂರು ದಶಕಗಳ ಇತಿಹಾಸ ಹೊಂದಿರುವ ಈ ವಿಶ್ವವಿದ್ಯಾಲಯ ಸುಮಾರು ನಾಲ್ಕು ಲಕ್ಷ ವಿದ್ಯಾರ್ಥಿಗಳು ಹಾಗೂ ಹದಿನಾರು ಸಾವಿರಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಒಳಗೊಂಡಿದೆ. ಇಂತಹ ದೊಡ್ಡ ವ್ಯವಸ್ಥೆಯು ವಿದ್ಯಾರ್ಥಿಗಳಲ್ಲಿ ಕನ್ನಡ ಪ್ರೇಮವನ್ನು ಬಿತ್ತುವ ಕೆಲಸವನ್ನು ಹೆಗಲ ಮೇಲೆ ಹೊತ್ತು ಮಾಡಬೇಕು ಎಂದು ಮೋಹನ್ ಆಳ್ವ ತಿಳಿಸಿದರು.
“ಆರೋಗ್ಯ ವಿಜ್ಞಾನ ಮತ್ತು ವೈದ್ಯಕೀಯ ಕ್ಷೇತ್ರ ಅಪರೂಪದ್ದು. ವೈದ್ಯಕೀಯ ವಿದ್ಯಾರ್ಥಿಗಳನ್ನು ಇತರ ಕ್ಷೇತ್ರದ ವಿದ್ಯಾರ್ಥಿಗಳೊಂದಿಗೆ ಹೋಲಿಸಬಾರದು. ವೈದ್ಯಕೀಯ ವೃತ್ತಿಯಲ್ಲಿ ಇರುವುದು ಪೂರ್ವಜನ್ಮದ ಪುಣ್ಯ ಎಂದು ನಾನು ಭಾವಿಸುತ್ತೇನೆ. ಈ ಕ್ಷೇತ್ರದಲ್ಲಿರುವವರು ಜ್ಞಾನದ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಜೊತೆಗೆ ಭಾಷಾ ಕೌಶಲ್ಯ ಮತ್ತು ಸಂವಹನ ಕೌಶಲ್ಯವನ್ನೂ ಅಭಿವೃದ್ಧಿಪಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಮುಂಚೂಣಿಯಲ್ಲಿ ನಿಂತು ಕನ್ನಡ ಪ್ರೇಮವನ್ನು ಬಿತ್ತಬೇಕು” ಎಂದು ಅವರು ಹೇಳಿದರು.
ವಿಶ್ವವಿದ್ಯಾಲಯ ಇಲ್ಲಿಯವರೆಗೆ 11 ಕುಲಪತಿಗಳನ್ನು ಕಂಡಿದೆ. ಕಳೆದ 30 ವರ್ಷಗಳಲ್ಲಿ ಇಂತಹ ವಿಭಿನ್ನ ಪ್ರಯೋಗವನ್ನು ಯಾರೂ ಮಾಡಿರಲಿಲ್ಲ. ಕುಲಪತಿ ಡಾ. ಭಗವಾನ್ ಬಿ.ಸಿ. ಅತ್ಯಂತ ಶ್ರದ್ಧೆಯಿಂದ ಈ ಸಮ್ಮೇಳನವನ್ನು ಯಶಸ್ವಿಗೊಳಿಸಿದ್ದಾರೆ ಎಂದು ಮೋಹನ್ ಆಳ್ವ ಪ್ರಶಂಸಿಸಿದರು.
“ಈ ಸಮ್ಮೇಳನ ಈ ವರ್ಷಕ್ಕೆ ಮಾತ್ರ ಸೀಮಿತವಾಗಬಾರದು. ಪ್ರತಿವರ್ಷವೂ ಇದೇ ಆಸಕ್ತಿ, ಪ್ರೀತಿಯಿಂದ ನಡೆಯಬೇಕು. ಮುಂದಿನ ವರ್ಷದ ವೈದ್ಯಕೀಯ ಸಾಹಿತ್ಯ ಸಮ್ಮೇಳನವನ್ನು ಮೂಡಬಿದರೆಯಲ್ಲಿ ನಡೆಸುವುದಾದರೆ ಅದರ ಸಂಪೂರ್ಣ ಜವಾಬ್ದಾರಿಯನ್ನು ನಾನು ನಿರ್ವಹಿಸುತ್ತೇನೆ” ಎಂದು ಅವರು ಘೋಷಿಸಿದರು.
ಕುಲಪತಿ ಡಾ. ಭಗವಾನ್ ಬಿ.ಸಿ. ಮಾತನಾಡಿ, “ಇದು ಕೇವಲ ಆರಂಭ. ಮುಂದೆಯೂ ಇದು ನಿರಂತರವಾಗಿ ಮುಂದುವರಿಯುವ ವಾತಾವರಣ ಸೃಷ್ಟಿಯಾಗಬೇಕು. ಅದಕ್ಕೆ ಅಗತ್ಯವಿರುವ ಎಲ್ಲಾ ಪ್ರಯತ್ನಗಳನ್ನು ವಿಶ್ವವಿದ್ಯಾಲಯ ಮಾಡಲಿದೆ. ಮೋಹನ್ ಆಳ್ವರಂತಹ ಸಾಹಿತ್ಯಪ್ರಿಯರು, ಕನ್ನಡಪ್ರಿಯರು ಜೊತೆಗೆ ನಿಂತರೆ ಇಂತಹ ಕನ್ನಡದ ಕೆಲಸ ಕಷ್ಟವೇನಲ್ಲ” ಎಂದು ಹೇಳಿದರು.
ನಾಡೋಜ ಡಾ. ಹಂಪನಾ ಹಾಗೂ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ ಸಹ ಕಾರ್ಯಕ್ರಮದಲ್ಲಿ ಮಾತನಾಡಿದರು.











