ಬೆಂಗಳೂರು: ಮುಖ್ಯಮಂತ್ರಿ ಅಧಿಕೃತ ನಿವಾಸವಾದ ಕುಮಾರಕೃಪಾ ಬಂಗಲೆಯನ್ನು ಐಷಾರಾಮಿಯಾಗಿ ನವೀಕರಿಸಲು ಆಸಕ್ತಿ ತೋರುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ, ಸಾರ್ವಜನಿಕ ರಸ್ತೆಗಳ ಸ್ವಚ್ಛತೆ ಕಾಪಾಡುವ ಕಾಳಜಿ ಇಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಟೀಕಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ದಾಬಸ್ಪೇಟೆಯ ಶಿವಗಂಗೆ ರಸ್ತೆಯಿಂದ ಜಿಂದಾಲ್ ಕ್ವಾಟ್ರಸ್ ಹಾಗೂ ಎಡೆಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಕೆಐಎಡಿಬಿ ರಸ್ತೆಯ ಸುಮಾರು ಅರ್ಧ ಕಿಲೋಮೀಟರ್ ಉದ್ದಕ್ಕೂ ಕಸದ ರಾಶಿ ಬಿದ್ದಿದೆ. ಕಾರ್ಖಾನೆಗಳು, ಹೋಟೆಲ್ಗಳು ಹಾಗೂ ಕೋಳಿ ಅಂಗಡಿಗಳ ತ್ಯಾಜ್ಯ ಕೊಳೆತು ದುರ್ವಾಸನೆ ಬೀರುತ್ತಿದೆ. ಬೀದಿನಾಯಿಗಳು ಮತ್ತು ಹಂದಿಗಳ ಹಾವಳಿಯಿಂದಾಗಿ ಸಾರ್ವಜನಿಕರು ರಸ್ತೆಯಲ್ಲಿ ಸಂಚರಿಸಲು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಇದೇನಾ ಕಾಂಗ್ರೆಸ್ನ ಬ್ರ್ಯಾಂಡ್ ಬೆಂಗಳೂರು ಎಂದು ಪ್ರಶ್ನಿಸಿರುವ ಆರ್. ಅಶೋಕ್, ಮುಖ್ಯಮಂತ್ರಿಗಳಿಗೆ ಅರಮನೆಯಂತಹ ನಿವಾಸ ನಿರ್ಮಿಸುವ ಆಸಕ್ತಿ ಇದ್ದರೆ, ಜನರಿಗೆ ಕನಿಷ್ಠ ಸ್ವಚ್ಛ ರಸ್ತೆಗಳು ಮತ್ತು ಉತ್ತಮ ಪರಿಸರ ಒದಗಿಸುವ ಜವಾಬ್ದಾರಿಯೂ ಸರ್ಕಾರಕ್ಕಿದೆ ಎಂದು ಹೇಳಿದ್ದಾರೆ.
ಒಂದೆಡೆ ಕುಮಾರಕೃಪಾ ನಿವಾಸದ ಐಷಾರಾಮಿ ನವೀಕರಣಕ್ಕೆ ಸರ್ಕಾರ ಒತ್ತು ನೀಡುತ್ತಿದ್ದರೆ, ಮತ್ತೊಂದೆಡೆ ಬೆಂಗಳೂರು ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಅವರು ರೀಲ್ಸ್, ಕ್ಯಾಮೆರಾ ಮತ್ತು ಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ ಜನರ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತಿಲ್ಲ ಎಂದು ಟೀಕಿಸಿದ್ದಾರೆ.
ರೀಲ್ಸ್ ಮಾಡುವುದರಿಂದ ರಸ್ತೆಗಳು ಸ್ವಚ್ಛವಾಗುವುದಿಲ್ಲ, ಕ್ಯಾಮೆರಾ ಮುಂದೆ ದೊಡ್ಡ ಮಾತುಗಳನ್ನಾಡುವುದರಿಂದ ಜನರ ಬದುಕು ಸುಧಾರಿಸುವುದಿಲ್ಲ. ಸಚಿವರು ಮೊದಲು ತಮ್ಮ ಇಲಾಖೆಯ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿಗಳ ನಿವಾಸದ ಸೌಂದರ್ಯೀಕರಣಕ್ಕೆ ತೋರುವ ಕಾಳಜಿಯ ಸ್ವಲ್ಪ ಭಾಗವನ್ನಾದರೂ ಬೆಂಗಳೂರಿನ ಜನರ ಬದುಕಿನ ಗುಣಮಟ್ಟ ಸುಧಾರಿಸಲು ತೋರಿಸಬೇಕು. ಜನರ ತೆರಿಗೆ ಹಣವನ್ನು ಬಂಗಲೆಗಳ ನವೀಕರಣಕ್ಕೆ ಬಳಸುವ ಮೊದಲು ಸಾರ್ವಜನಿಕರ ಬದುಕು ಸುಧಾರಿಸುವತ್ತ ಸರ್ಕಾರ ಗಮನಹರಿಸಬೇಕು ಎಂದು ಆರ್. ಅಶೋಕ್ ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿಗಳಿಗೆ ಕುಮಾರಕೃಪಾ ನಿವಾಸ ಮುಖ್ಯವಾಗಿದ್ದರೆ, ಜನರಿಗೆ ಸ್ವಚ್ಛ ರಸ್ತೆಗಳು ಮತ್ತು ಉತ್ತಮ ಪರಿಸರ ಮುಖ್ಯ. ಆದರೆ ಕಾಂಗ್ರೆಸ್ ಸರ್ಕಾರ ಜನರ ಹಿತಕ್ಕಿಂತ ತನ್ನ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.










