ಬೆಂಗಳೂರು: ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಐತಿಹಾಸಿಕ ಮಹಿಳಾ ಮೀಸಲು ವಿಧೇಯಕ ಅಂಗೀಕಾರವಾಗುವ ನಿರೀಕ್ಷೆ ಇದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಕಾಮನ್‌ವೆಲ್ತ್ ಮಹಿಳಾ ಸಂಸದೀಯಪಟುಗಳ ಭಾರತೀಯ ಪ್ರಾದೇಶಿಕ ವಿಭಾಗದ ಮೊದಲ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಡಿಸೆಂಬರ್‌ನ ಅಧಿವೇಶನ ಇತಿಹಾಸ ನಿರ್ಮಿಸಲಿದೆ. ಈ ಮೀಸಲಾತಿಯಿಂದಾಗಿ ಎಷ್ಟು ಜನರು ಸಂಸತ್ತು ಹಾಗೂ ವಿಧಾನಸಭೆಯಿಂದ ಹೊರಬರಬೇಕಾಗುವುದೋ ತಿಳಿದಿಲ್ಲ. ಆದರೆ ಶೇ. 50ರಷ್ಟು ಹೆಚ್ಚುವರಿ ಕ್ಷೇತ್ರಗಳಿರುವುದು ಎಂದು ಹೇಳಲಾಗುತ್ತಿದೆ. ಯಾವ ಕ್ಷೇತ್ರಗಳಲ್ಲಿ ಮೀಸಲಾತಿ ಬರುವುದು ಎಂದು ಇನ್ನೂ ತಿಳಿದಿಲ್ಲ” ಎಂದು ಅವರು ತಿಳಿಸಿದರು.
ಮಹಿಳಾ ಮೀಸಲಾತಿಯಿಂದ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ ಎಂದು ಅಭಿಪ್ರಾಯಪಟ್ಟ ಸಿಎಂ, “ಮಹಿಳೆಯರನ್ನು ಗೌರವಿಸುವುದು ನಮ್ಮ ಕರ್ತವ್ಯ. ಮಹಿಳೆಯರ ಬೆಂಬಲವಿಲ್ಲದೆ ಪುರುಷರು ಯಶಸ್ವಿಯಾಗಲು ಸಾಧ್ಯವಿಲ್ಲ. ಇದು ನಮ್ಮ ಪ್ರಗತಿಪರ ಸಮಾಜದ ತಳಪಾಯವೂ ಹೌದು” ಎಂದು ಹೇಳಿದರು.
“ಮಹಿಳೆಯರಿಲ್ಲದ ಪ್ರಜಾಪ್ರಭುತ್ವ ರೆಕ್ಕೆಯಿಲ್ಲದ ಹಕ್ಕಿಯಂತೆ. ಎತ್ತರಕ್ಕೇರಲು ಸಾಧ್ಯವಿಲ್ಲ” ಎಂದು ಹೋಲಿಕೆ ಮಾಡಿದ ಅವರು, ಮಹಿಳೆಯರ ಸಾಮಾಜಿಕ-ಆರ್ಥಿಕ ಪರಿಸ್ಥಿತಿಯ ಜೊತೆಗೆ ರಾಜಕೀಯ ಸಬಲೀಕರಣವೂ ಆಗಬೇಕು ಎಂದು ಒತ್ತಿ ಹೇಳಿದರು.
ರಾಜ್ಯದಲ್ಲಿ ಶೇ. 42ರಷ್ಟು ವೈದ್ಯರು ಮತ್ತು ಶೇ. 80ರಷ್ಟು ಅರೆ ವೈದ್ಯಕೀಯ ಸಿಬ್ಬಂದಿ ಮಹಿಳೆಯರು ಇದ್ದಾರೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲೂ ಶೇ. 40ರಷ್ಟು ಮಹಿಳೆಯರಿದ್ದಾರೆ ಎಂದು ಅಂಕಿ-ಅಂಶಗಳನ್ನು ನೀಡಿದ ಸಿಎಂ, ಮಹಿಳಾ ಸಬಲೀಕರಣಕ್ಕಾಗಿ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ ಐದು ಗ್ಯಾರಂಟಿ ಯೋಜನೆಗಳಲ್ಲಿ ನಾಲ್ಕು ಮಹಿಳೆಯರನ್ನು ಸಶಕ್ತಗೊಳಿಸುವ ಯೋಜನೆಗಳಾಗಿವೆ ಎಂದು ನೆನಪಿಸಿದರು.
ರಾಜೀವ್ ಗಾಂಧಿ ಅವರು 1988-89ರಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ. 50ರ ಮೀಸಲಾತಿ ಜಾರಿಗೆ ತಂದಿದ್ದರು. ಆ ನಂತರ ಎಲ್ಲಾ ಸ್ಥಳೀಯಾಡಳಿತ ಸಂಸ್ಥೆಗಳಲ್ಲೂ ಮೀಸಲಾತಿ ಜಾರಿಯಾಯಿತು. ಈ ಅವಕಾಶವನ್ನು ಮಹಿಳೆಯರು ಸದುಪಯೋಗಪಡಿಸಿಕೊಳ್ಳಬೇಕು. ಮಹಿಳೆಯರು ಆಯ್ಕೆಯಾದ ನಂತರ ಅವರ ಪತಿ ಅಥವಾ ಪುತ್ರ ಅಧಿಕಾರ ಚಲಾಯಿಸಬಾರದು ಎಂದು ಸ್ಪಷ್ಟಪಡಿಸಿದರು.
“ಮಹಿಳೆಯರು ಕೇವಲ ಹುದ್ದೆಗಳನ್ನು ಅಲಂಕರಿಸುವುದಷ್ಟೇ ಅಲ್ಲ. ತೀರ್ಮಾನಗಳಲ್ಲಿ ತಮ್ಮ ಅಭಿಪ್ರಾಯ ಮಂಡಿಸಬೇಕು. ಶಾಸನ ರೂಪಿಸುವಲ್ಲಿ ಕೊಡುಗೆ ನೀಡಬೇಕು. ಆಡಳಿತಕ್ಕೆ ಹೊಸ ದಿಶೆ ನೀಡಬೇಕು” ಎಂದು ಅವರು ಕರೆ ನೀಡಿದರು.
ಪಂಚಾಯಿತಿ ಮಟ್ಟದಲ್ಲಿ 15 ಲಕ್ಷಕ್ಕೂ ಹೆಚ್ಚು ಮಹಿಳೆಯರು ಅಧಿಕಾರದಲ್ಲಿದ್ದಾರೆ. ಅವರು ಸುಶಿಕ್ಷಿತರಾಗಿದ್ದು, ರಸ್ತೆ, ಸೇತುವೆ, ಬಾವಿ, ಶಾಲೆಗಳ ಅಭಿವೃದ್ಧಿಯಲ್ಲಿ ಕೈಜೋಡಿಸಿದ್ದಾರೆ ಎಂದು ಹೇಳಿದ ಸಿಎಂ, ಮಹಿಳಾ ಮೀಸಲಾತಿ ವಿಧೇಯಕ ಅಂಗೀಕಾರ ಸುದೀರ್ಘ ಹೋರಾಟದ ಫಲವಾಗಿದೆ ಎಂದು ಸ್ಮರಿಸಿದರು.
ಕೊನೆಯಲ್ಲಿ ಎಲ್ಲಾ ಸಂಸದರು ಹಾಗೂ ಶಾಸಕರನ್ನು ಬೆಂಗಳೂರಿಗೆ ಸ್ವಾಗತಿಸಿದ ಅವರು, ಬೆಂಗಳೂರು ಟೆಕ್ ಸಮ್ಮಿಟ್‌ಗೆ ಭೇಟಿ ನೀಡುವಂತೆ ಮತ್ತು ಕೆಎಸ್‌ಐಸಿ ಕಾರ್ಖಾನೆಗೂ ಭೇಟಿ ನೀಡುವಂತೆ ಆಹ್ವಾನಿಸಿದರು.










