ಸಾರ್ವಭೌಮ ಗ್ಯಾರಂಟಿ ಸಾಲವನ್ನು ಮರೆಮಾಡುವುದು ರಾಜಕೀಯ ಕುತಂತ್ರ’
ಬೆಂಗಳೂರು: ನಮ್ಮ ಮೆಟ್ರೋ (ಬಿಎಂಆರ್ಸಿಎಲ್) ಹಣಕಾಸು ವ್ಯವಸ್ಥೆಯ ಕುರಿತು ಕಾಂಗ್ರೆಸ್ ಪಕ್ಷ ಮಂಡಿಸುತ್ತಿರುವ ಅಂಕಿ-ಅಂಶಗಳನ್ನು ತೀವ್ರವಾಗಿ ಖಂಡಿಸಿದ್ದಾರೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ.
ಅವರು ಶನಿವಾರ ಎಕ್ಸ್ನಲ್ಲಿ ಪೋಸ್ಟ್ ಮಾಡಿ, “ಸತ್ಯಗಳು ತಮ್ಮಷ್ಟಕ್ಕೆ ತಾವೇ ಮಾತನಾಡುತ್ತವೆ. ರಾಜಕೀಯ ಭಾಷಣಗಳಿಂದ ಸಂಖ್ಯೆಗಳನ್ನು ಬದಲಾಯಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ತೇಜಸ್ವಿ ಸೂರ್ಯ ಅವರ ಪ್ರಕಾರ, ಕೇಂದ್ರ ಸರ್ಕಾರದ ಸಾರ್ವಭೌಮ ಗ್ಯಾರಂಟಿ ಮೂಲಕ ವ್ಯವಸ್ಥೆ ಮಾಡಲಾಗಿರುವ ₹28,958 ಕೋಟಿ ವಿದೇಶಿ ಸಾಲವನ್ನು ಅನುಕೂಲಕರವಾಗಿ ನಿರ್ಲಕ್ಷಿಸುವುದು ರಾಜಕೀಯ ಕುತಂತ್ರವೇ ಹೊರತು ಬೇರೇನೂ ಅಲ್ಲ. ಒಂದು ಕಾಲಮ್ನಿಂದ ಇನ್ನೊಂದು ಕಾಲಮ್ಗೆ ಸಾಲವನ್ನು ಸ್ಥಳಾಂತರಿಸಿದರೆ ಪಾವತಿಸುವವರು ಯಾರು ಎಂಬುದು ಬದಲಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ನಮ್ಮ ಮೆಟ್ರೋ ಬಗ್ಗೆ ಅವರು ಮಂಡಿಸಿದ ಪ್ರಮುಖ ಅಂಶಗಳು ಹೀಗಿವೆ:
- ಬಿಎಂಆರ್ಸಿಎಲ್ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ 50:50 ಸಮಾನ ಪಾಲಿನ ಜಂಟಿ ಉದ್ಯಮ.
- ಕಾಂಗ್ರೆಸ್ನ ಕ್ಲೇಮ್: ಕರ್ನಾಟಕ 84%, ಕೇಂದ್ರ 16%.
- ಬಿಎಂಆರ್ಸಿಎಲ್ನ ಅನುಮೋದಿತ ಹಣಕಾಸು ಯೋಜನೆ: ಕರ್ನಾಟಕ 46.65% (₹36,333 ಕೋಟಿ), ಕೇಂದ್ರ 53.35% (₹41,558 ಕೋಟಿ). ಇದರಲ್ಲಿ ₹28,958 ಕೋಟಿ ಸಾವಭೌಮ ಗ್ಯಾರಂಟಿ ಆಧಾರಿತ ವಿದೇಶಿ ಸಾಲಗಳೂ ಸೇರಿವೆ.
“ಕಾಂಗ್ರೆಸ್ ಮೇಲ್ಛಾವಣಿಯಿಂದ ಕೂಗಬಹುದು. ಆದರೆ ತಪ್ಪುದಾರಿಗೆಳೆಯುವ ನಿರೂಪಣೆಗಳು ಸತ್ಯಪರೀಕ್ಷೆಯನ್ನು ತಡೆದುಕೊಳ್ಳಲಾರವು” ಎಂದು ತೇಜಸ್ವಿ ಸೂರ್ಯ ಅವರು ಹೇಳಿದ್ದಾರೆ.
ಈ ಹೇಳಿಕೆಯು ನಮ್ಮ ಮೆಟ್ರೋ ಹಣಕಾಸು ಹಂಚಿಕೆಯ ಕುರಿತು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನಡೆಯುತ್ತಿರುವ ರಾಜಕೀಯ ಚರ್ಚೆಯನ್ನು ಮತ್ತೆ ಚುರುಕುಗೊಳಿಸಿದೆ.











