ಎರಡು ಕಂತುಗಳಲ್ಲಿ ₹5,000; ಮೊದಲ ಕಂತು ₹2,500 ಈಗಾಗಲೇ ಬಿಡುಗಡೆ
ಕೇಂದ್ರ ಕೊಡದಿದ್ದರೂ ನುಡಿದಂತೆ ನಾವು ಕೊಡುತ್ತೇವೆ
ಬೆಂಗಳೂರು: ರಾಜ್ಯದ ರೈತರಿಗೆ ಬರ ಪರಿಹಾರದ ಕುರಿತು ಯಾವುದೇ ಗೊಂದಲ ಬೇಡ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಪ್ರತಿಯೊಬ್ಬ ಅರ್ಹ ರೈತನಿಗೂ ಎರಡು ಕಂತುಗಳಲ್ಲಿ ₹5,000 ಬಿಡುಗಡೆ ಮಾಡಲಾಗುವುದು. ಮೊದಲ ಕಂತಿನ ₹2,500 ಈಗಾಗಲೇ ಅನೇಕ ರೈತರ ಖಾತೆಗೆ ತಲುಪಿದೆ ಎಂದು ಅವರು ತಿಳಿಸಿದರು.
ಸದಾಶಿವನಗರದ ನಿವಾಸದ ಬಳಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ‘‘ಪ್ರತಿ ರೈತರಿಗೂ ಒಂದು ನಿರ್ದಿಷ್ಟ ಮೊತ್ತವನ್ನು ನಿಗದಿಪಡಿಸಲಾಗಿದೆ. ಸರಿಯಾದ ಖಾತೆಗಳಿಗೆ ಹಣ ತಲುಪಿದೆ. ಹಣ ತಲುಪದ ರೈತರ ಖಾತೆಯಲ್ಲಿರುವ ಅಡಚಣೆಗಳನ್ನು ನಿವಾರಿಸಿ ಪಾವತಿ ಮಾಡಲಾಗುವುದು. ಆದ್ದರಿಂದ ರೈತರು ಆತಂಕ ಪಡುವ ಅಗತ್ಯವಿಲ್ಲ’’ ಎಂದು ಹೇಳಿದರು.
‘‘ಒಂದು ಪಕ್ಷ ರೈತರಿಗೆ ತಲುಪಬೇಕಾದ ಮೊತ್ತದಲ್ಲಿ ಹೆಚ್ಚು-ಕಮ್ಮಿ ಇದ್ದರೆ ಅದನ್ನು ಸರಿಪಡಿಸಲಾಗುವುದು. ಕೇಂದ್ರ ಸರ್ಕಾರ ಪರಿಹಾರ ಬಿಡುಗಡೆ ಮಾಡದೇ ಇದ್ದರೂ ನಮ್ಮ ಸರ್ಕಾರ ನುಡಿದಂತೆ ಎರಡು ಕಂತುಗಳಲ್ಲಿ ₹5,000 ಪಾವತಿ ಮಾಡುತ್ತದೆ’’ ಎಂದು ಅವರು ಭರವಸೆ ನೀಡಿದರು.
ತಾಂತ್ರಿಕ ಸಮಸ್ಯೆಗಳ ಬಗ್ಗೆ ಮಾತನಾಡಿದ ಸಿಎಂ, ‘‘ಒಂದೇ ಬಟನ್ನಿಂದ ಎಲ್ಲಾ ರೈತರ ಖಾತೆಗೂ ಹಣ ವರ್ಗಾವಣೆಯಾಗುತ್ತಿದೆ. ಆದರೆ ಕೆಲವು ಬ್ಯಾಂಕ್ ಖಾತೆಗಳು ಸರಿಯಾಗಿಲ್ಲ ಹಾಗೂ ಸಾಲದ ಬಾಬತ್ತಿಗೆ ಲಿಂಕ್ ಆಗಿವೆ. ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ಪರಿಹಾರ ಮೊತ್ತವನ್ನು ಶೀಘ್ರವಾಗಿ ಪಾವತಿಸಲಾಗುವುದು’’ ಎಂದು ಹೇಳಿದರು.











