2027ರ ಮೇನಲ್ಲಿ ಶೇರಾಟನ್ ಗ್ರಾಂಡ್ನಲ್ಲಿ ಆಯೋಜನೆ
ಬೆಂಗಳೂರು: ಐಇಇಇ (IEEE)ನ ಪ್ರತಿಷ್ಠಿತ ರಾಡಾರ್ ಸಮ್ಮೇಳನವು (IEEE Radar Conference) ತನ್ನ 47 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಮತ್ತು ಏಷ್ಯಾ ಖಂಡದಲ್ಲಿ ಆಯೋಜನೆಯಾಗಲಿದೆ. 2027ರ ಮೇ 1ರಿಂದ 6ರವರೆಗೆ ಬೆಂಗಳೂರಿನ ವೈಟ್ಫೀಲ್ಡ್ನ ಶೇರಾಟನ್ ಗ್ರಾಂಡ್ ಹೋಟೆಲ್ ಮತ್ತು ಕಾನ್ವೆನ್ಷನ್ ಸೆಂಟರ್ನಲ್ಲಿ ಈ ಬೃಹತ್ ಅಂತಾರಾಷ್ಟ್ರೀಯ ಸಮ್ಮೇಳನ ನಡೆಯಲಿದೆ.
ಇದು 1984ರಿಂದ ನಡೆಯುತ್ತಿರುವ ಐಇಇಇ ರಾಡಾರ್ ಕಾನ್ಫರೆನ್ಸ್ನ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತ ಮತ್ತು ಏಷ್ಯಾದಲ್ಲಿ ನಡೆಯುವುದು ಎಂದು ಐಇಇಇ ಏರೋಸ್ಪೇಸ್ ಅಂಡ್ ಎಲೆಕ್ಟ್ರಾನಿಕ್ ಸಿಸ್ಟಮ್ಸ್ ಸೊಸೈಟಿ (AESS) ಉಪಾಧ್ಯಕ್ಷ ಹಾಗೂ ಸಮ್ಮೇಳನದ ಜನರಲ್ ಚೇರ್ ಪುನೀತ್ ಕುಮಾರ್ ಮಿಶ್ರಾ (ಐಎಸ್ಆರ್ಒ) ತಿಳಿಸಿದರು.
2026ನೇ ನವೆಂಬರ್ 2ರಂದು ವೈಟ್ಫೀಲ್ಡ್ನ ಶೇರಾಟನ್ ಗ್ರಾಂಡ್ನಲ್ಲಿ ನಡೆದ ‘ರಾಡಾರ್ ಇಂಡಸ್ಟ್ರಿ ಕಾನ್ಕ್ಲೇವ್ ಮತ್ತು ಸುದ್ದಿ ಗೋಷ್ಠಿ’ಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಅವರು, ಈ ಸಮ್ಮೇಳನವು ಭಾರತೀಯ ತಂತ್ರಜ್ಞಾನವನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸಲು ಮತ್ತು ಯುವ ಸಂಶೋಧಕರಿಗೆ ಅಂತಾರಾಷ್ಟ್ರೀಯ ವೇದಿಕೆ ಒದಗಿಸಲು ದೊಡ್ಡ ಅವಕಾಶವಾಗಲಿದೆ ಎಂದು ಹೇಳಿದರು.
ಸಮ್ಮೇಳನದ ವಿವರಗಳು:
ಸಮ್ಮೇಳನದ ವಿಷಯ – “Adaptive Waves, Resilient Skies: Global Innovations in Radar Technology”. ಇದರಲ್ಲಿ ಕಾನಿಟಿವ್ ರಾಡಾರ್, ಕೃತಕ ಬುದ್ಧಿಮತ್ತೆ (AI), ಸಂವಹನ ತಂತ್ರಜ್ಞಾನ, ಬಾಹ್ಯಾಕಾಶ, ಹವಾಮಾನ, ಮುಂದಿನ ತಲೆಮಾರಿನ ಉಪಗ್ರಹಗಳು, ಜಾಗತಿಕ ಭದ್ರತೆ ಮತ್ತು ಆಧುನಿಕ ಯುದ್ಧ ವ್ಯವಸ್ಥೆಗಳಲ್ಲಿ ರಾಡಾರ್ನ ಪಾತ್ರದ ಕುರಿತು ಜಾಗತಿಕ ತಜ್ಞರು ಚರ್ಚಿಸಲಿದ್ದಾರೆ.
- ಮೇ 1-2: ರಾಡಾರ್ ಬೂಟ್ ಕ್ಯಾಂಪ್
- ಮೇ 3: ವರ್ಕ್ಶಾಪ್ಗಳು / ಟ್ಯುಟೋರಿಯಲ್ಗಳು
- ಮೇ 4-6: ಮುಖ್ಯ ಸಮ್ಮೇಳನ
ಪ್ರಬಂಧ ಸಲ್ಲಿಕೆಗೆ ಕೊನೆಯ ದಿನಾಂಕ ನವೆಂಬರ್ 30, 2026 (ಹಾರ್ಡ್ ಡೆಡ್ಲೈನ್). ಸಮ್ಮೇಳನದಲ್ಲಿ ಸುಮಾರು 231 ತಜ್ಞರು ಸಂಶೋಧನಾ ಪ್ರಬಂಧಗಳನ್ನು ಮಂಡಿಸುವ ನಿರೀಕ್ಷೆಯಿದ್ದು, ಅವರಲ್ಲಿ ಅರ್ಧದಷ್ಟು ಭಾರತೀಯರು ಇರುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ.
ಯುವ ವಿಜ್ಞಾನಿಗಳಿಗೆ ವಿಶೇಷ ಅವಕಾಶ:
ಸಾಮಾನ್ಯವಾಗಿ ಪ್ರಬಂಧ ಮಂಡನೆಗೆ ಸಾವಿರ ಡಾಲರ್ಗಳಷ್ಟು ಶುಲ್ಕವಿದ್ದರೂ, ಭಾರತೀಯರಿಗೆ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. ದೇಶದ ವಿದ್ಯಾರ್ಥಿಗಳು ಮತ್ತು ಯುವ ತಂತ್ರಜ್ಞರಿಗೆ ಜಾಗತಿಕ ತಜ್ಞರೊಂದಿಗೆ ಸಂವಾದಿಸಲು ಮತ್ತು ಕಲಿಯಲು ಇದು ಅಪರೂಪದ ವೇದಿಕೆಯಾಗಲಿದೆ ಎಂದು ಪುನೀತ್ ಕುಮಾರ್ ಮಿಶ್ರಾ ಹೇಳಿದರು.
ಡಿಆರ್ಡಿಒ ಮತ್ತು ಎಲ್ಆರ್ಡಿಇ ಅಧಿಕಾರಿಗಳ ಅಭಿಪ್ರಾಯ:
ಡಿಆರ್ಡಿಒ ಪ್ರಧಾನ ನಿರ್ದೇಶಕ (ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಸಿಸ್ಟಮ್ಸ್) ಬಿ.ಕೆ. ದಾಸ್ ಮಾತನಾಡುತ್ತಾ, “ಈ ಸಮ್ಮೇಳನವು ಬೆಂಗಳೂರು ಮತ್ತು ಭಾರತದ ರಾಡಾರ್ ತಂತ್ರಜ್ಞಾನದ ಸಾಧನೆಗಳನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸಲು ಉತ್ತಮ ವೇದಿಕೆಯಾಗಲಿದೆ. ಯುದ್ಧಭೂಮಿಯಲ್ಲಿ ಸಣ್ಣ ಡ್ರೋನ್ಗಳ ಬಳಕೆ ಹೆಚ್ಚುತ್ತಿರುವುದರಿಂದ, ಭವಿಷ್ಯದ ಸವಾಲುಗಳನ್ನು ಎದುರಿಸಲು ರಾಡಾರ್ ತಂತ್ರಜ್ಞಾನ ಅತ್ಯಂತ ನಿರ್ಣಾಯಕವಾಗಿದೆ. AI ರಾಡಾರ್ ಕ್ಷೇತ್ರವನ್ನು ಸಂಪೂರ್ಣವಾಗಿ ಬದಲಾಯಿಸುತ್ತಿದೆ” ಎಂದು ಹೇಳಿದರು.
ಎಲ್ಆರ್ಡಿಇ ನಿರ್ದೇಶಕ ಶೇಖ್ ಅಲ್ತಾಫ್ ಮಾತನಾಡುತ್ತಾ, ಹಿಂದೆ ರಾಡಾರ್ ತಂತ್ರಜ್ಞಾನವನ್ನು ಮುಖ್ಯವಾಗಿ ರಕ್ಷಣೆ ಮತ್ತು ಏರೋಸ್ಪೇಸ್ ಕ್ಷೇತ್ರಗಳಲ್ಲಿ ಮಾತ್ರ ಬಳಸಲಾಗುತ್ತಿತ್ತು. ಈಗ AI ಜೊತೆಗೂಡಿ ಬಹು-ಮಾದರಿ ರಾಡಾರ್ ವ್ಯವಸ್ಥೆಗಳು ಅನಿವಾರ್ಯವಾಗಿವೆ. ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟಿಂಗ್ ವೇಗದಲ್ಲಿನ ಪ್ರಗತಿಯಿಂದ ಗುರಿ ಗುರುತಿಸುವಿಕೆ, ವರ್ಗೀಕರಣ ಮತ್ತು ನಿರ್ಧಾರ ತೆಗೆದುಕೊಳ್ಳುವಿಕೆ ಹೆಚ್ಚು ನಿಖರ ಮತ್ತು ವೇಗವಾಗಿದೆ ಎಂದು ವಿವರಿಸಿದರು.
ಈ ಸಮ್ಮೇಳನವು ಐಎಸ್ಆರ್ಒ, ಡಿಆರ್ಡಿಒ, ಬಿಇಎಲ್, ಎಲ್ಆರ್ಡಿಇ ಮತ್ತು ಇತರ ಸಂಸ್ಥೆಗಳ ಸಹಯೋಗದಲ್ಲಿ ನಡೆಯಲಿದ್ದು, ಭಾರತದ ರಾಡಾರ್ ಮತ್ತು ಏರೋಸ್ಪೇಸ್ ಸಾಮರ್ಥ್ಯವನ್ನು ಜಗತ್ತಿನೆದುರು ಪ್ರದರ್ಶಿಸುವ ಮಹತ್ವದ ಹೆಜ್ಜೆಯಾಗಲಿದೆ.











