ಮೈಸೂರು: “ನನ್ನ ಅಧಿಕಾರಾವಧಿಯಲ್ಲಿ ಜನರ ಹೃದಯದಲ್ಲಿ ಉಳಿಯುವಂತಹ ಕೆಲಸ ಮಾಡುತ್ತೇನೆ. ಸಿದ್ದರಾಮಯ್ಯ ಅವರೊಂದಿಗೆ ಕೆಲಸ ಮಾಡಿದ್ದೇನೆ. ಅವರಿಗೆ ಮಾತ್ರವಲ್ಲ, ಯಾರಿಗೂ ಕೆಟ್ಟದ್ದನ್ನು ಬಯಸುವ ವ್ಯಕ್ತಿ ನಾನಲ್ಲ. ಮುಂದೆಯೂ ಯಾರಿಗೂ ಕೆಟ್ಟದ್ದನ್ನು ಬಯಸುವುದಿಲ್ಲ. ಇದು ನನ್ನ ಬದ್ಧತೆ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಮಾನಸಗಂಗೋತ್ರಿ ಸೆನೆಟ್ ಭವನದಲ್ಲಿ ಬುಧವಾರ ನಡೆದ ಸಂಶೋಧಕಿ ರಮ್ಯಾ ವಿರಚಿತ ‘ಚಲಿಸುವ ಬಂಡೆ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
“ರಾಜಕಾರಣದಲ್ಲಿ ಈಜುವುದು ಸುಲಭವಲ್ಲ. ಈಜಿ ದಡ ಸೇರುವುದು ಇನ್ನೂ ಕಷ್ಟ. ಕೆಲವರು ಎಲ್ಲದರಲ್ಲೂ ನಕಾರಾತ್ಮಕ ಅಂಶಗಳನ್ನೇ ಹುಡುಕುತ್ತಾರೆ. ನನಗೆ ಒಂದು ತಿಂಗಳು ಅಥವಾ ಆರು ತಿಂಗಳು ಆಡಳಿತ ಮಾಡಲು ಅವಕಾಶ ನೀಡಿ, ಏನು ಮಾಡುತ್ತಾರೆ ಎಂದು ನೋಡೋಣ ಎನ್ನುವವರೂ ಇದ್ದಾರೆ. ವಿರೋಧ ಪಕ್ಷದವರಿಗೆ ನನ್ನ ಬೆಳವಣಿಗೆಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕೆಲವರಿಗೆ ನನ್ನ ಹೆಸರು ಹೇಳಲೂ ಆಗುತ್ತಿಲ್ಲ. ಆದರೆ ನಾನು ಟೀಕೆಗಳಿಗೆ ಬಗ್ಗುವ ವ್ಯಕ್ತಿಯಲ್ಲ. ತಾಳ್ಮೆಯಿಂದ ಇದ್ದೇನೆ. ನನಗೆ ಈ ರಾಜ್ಯದ ಜನರ ಮೇಲೆ ನಂಬಿಕೆ ಇದೆ. ಯಾರಿಗೂ ಮೋಸ ಮಾಡಬೇಕು, ತೊಂದರೆ ಕೊಡಬೇಕು ಎಂಬ ಉದ್ದೇಶ ನನಗಿಲ್ಲ” ಎಂದು ಅವರು ಹೇಳಿದರು.
ಕುಮಾರಸ್ವಾಮಿ ಅವರೊಂದಿಗೆ ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ, ಪಕ್ಷದವರು ಕೈಜೋಡಿಸಬೇಕು ಎಂದಾಗ ಅವರಿಗೆ ತೊಂದರೆಯಾಗಬಾರದು ಎಂದು ಬಯಸಿದ್ದೇನೆ ಎಂದು ಸ್ಪಷ್ಟಪಡಿಸಿದರು. “ನನ್ನ ಆತ್ಮಸಾಕ್ಷಿ ಒಪ್ಪಿದರೆ ಸಾಕು. ಆತ್ಮಸಾಕ್ಷಿಗಿಂತ ದೊಡ್ಡದು ಯಾವುದೂ ಇಲ್ಲ. ನನಗೆ ಸಿಕ್ಕಿರುವ ಅಧಿಕಾರಾವಧಿಯಲ್ಲಿ ಯಾರಿಗೂ ಅನಗತ್ಯ ತೊಂದರೆಯಾಗಬಾರದು. ಜನರಿಗೆ ಸಹಾಯ ಬೇಕಿದ್ದರೆ ಮಾಡಿಕೊಡಲು ಸಿದ್ಧನಿದ್ದೇನೆ. ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಕೆಲಸ ಮಾಡುತ್ತೇನೆ” ಎಂದು ಭರವಸೆ ನೀಡಿದರು.
ಪದವಿ ಪಡೆದಿದ್ದು ಬದುಕಿನ ಅತ್ಯಂತ ಸಂತೋಷದ ಕ್ಷಣ
“ನಾನು ಎಸ್.ಎಂ. ಕೃಷ್ಣ ಅವರ ಸಂಪುಟದಲ್ಲಿ ಸಚಿವನಾದಾಗಲೂ, ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಎರಡು ಬಾರಿ ಸಚಿವನಾದಾಗಲೂ, ಈಗ ಮುಖ್ಯಮಂತ್ರಿಯಾದಾಗಲೂ ಸಿಗದಷ್ಟು ಸಂತೋಷ 48ನೇ ವಯಸ್ಸಿನಲ್ಲಿ ಮೈಸೂರು ವಿಶ್ವವಿದ್ಯಾಲಯದ ಮುಕ್ತ ವಿಶ್ವವಿದ್ಯಾಲಯದ ಮೂಲಕ ಪದವಿ ಪಡೆದಾಗ ಸಿಕ್ಕಿತ್ತು. ಅದು ನನ್ನ ಬದುಕಿನ ಐತಿಹಾಸಿಕ ದಿನ” ಎಂದು ಸ್ಮರಿಸಿದರು.
ಪದವಿ ಅಂತಿಮ ವರ್ಷದಲ್ಲೇ ಚುನಾವಣೆಗೆ ಟಿಕೆಟ್ ಸಿಕ್ಕಿದ್ದು, ರಾಜೀವ್ ಗಾಂಧಿ ಅವರು ಗುರುತಿಸಿ ಅವಕಾಶ ನೀಡಿದ್ದು ಸೇರಿದಂತೆ ತಮ್ಮ ಆರಂಭಿಕ ರಾಜಕೀಯ ಪಯಣವನ್ನು ನೆನಪಿಸಿಕೊಂಡರು. ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ರಾಜಕೀಯ ಕಾರಣಗಳಿಂದ ವೇದಿಕೆಗೆ ಕರೆಯದಿದ್ದರೂ, ವೇದಿಕೆಯ ಕೆಳಗೇ ನಿಂತು ಪ್ರಮಾಣಪತ್ರ ಪಡೆದುಕೊಂಡಿದ್ದನ್ನು ವಿವರಿಸಿದರು.
ಜೈಲಿನಲ್ಲೂ ಆತ್ಮವಿಶ್ವಾಸ ಕಳೆದುಕೊಳ್ಳಲಿಲ್ಲ
“ನಾನು ಜೈಲಿಗೆ ಹೋದಾಗಲೂ ಆತ್ಮವಿಶ್ವಾಸ ಕಳೆದುಕೊಳ್ಳಲಿಲ್ಲ. ಜೈಲಿನಿಂದ ಹೊರಬಂದು ಪಕ್ಷವನ್ನು ಸಂಘಟಿಸಿ, ರಾಜ್ಯದಲ್ಲಿ ಅಧಿಕಾರಕ್ಕೆ ತರುತ್ತೇನೆ ಎಂಬ ವಿಶ್ವಾಸ ನನಗಿತ್ತು. ಕನಕಪುರ ಕ್ಷೇತ್ರದ ಜನರು ನಾನು ಚುನಾವಣೆಗೆ ಹೋಗದಿದ್ದರೂ 1.23 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ ದೊಡ್ಡ ಸಂದೇಶ ನೀಡಿದರು. ಅವರ ಪ್ರೀತಿ, ಆಶೀರ್ವಾದವೇ ನನ್ನನ್ನು ಈ ಹಂತಕ್ಕೆ ತಂದಿದೆ” ಎಂದು ಹೇಳಿದರು.
ನನ್ನ ಬದುಕು ತೆರೆದ ಪುಸ್ತಕ
“ನನ್ನ ಬದುಕು ತೆರೆದ ಪುಸ್ತಕ. ಯಾವುದೇ ರಹಸ್ಯಗಳಿಲ್ಲ. ಎಲ್ಲ ಜಾತಿ, ಧರ್ಮಗಳ ಜನರನ್ನು ಪ್ರೀತಿಸುತ್ತೇವೆ, ಗೌರವಿಸುತ್ತೇವೆ. ಮಾನವ ಧರ್ಮಕ್ಕೆ ಜಯವಾಗಲಿ. ಜಾತಿ ಅಥವಾ ಬಣ್ಣದ ಆಧಾರದಲ್ಲಿ ಮನುಷ್ಯರನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಮನುಷ್ಯತ್ವವೇ ಮುಖ್ಯ” ಎಂದು ಅವರು ಒತ್ತಿ ಹೇಳಿದರು.
ಮಧ್ಯಮ ವರ್ಗದ ಕುಟುಂಬದಿಂದ ಬಂದು, ಹಳ್ಳಿಯಲ್ಲಿ ಬೆಳೆದು, ಕೋಳಿ ಫಾರಂ, ಕೃಷಿ, ಚಿತ್ರಮಂದಿರಗಳನ್ನು ನಡೆಸಿ, ಹಂತಹಂತವಾಗಿ ರಾಜಕೀಯಕ್ಕೆ ಬಂದಿದ್ದನ್ನು ವಿವರಿಸಿದರು. ಬಂಗಾರಪ್ಪ, ಎಸ್.ಎಂ. ಕೃಷ್ಣ, ರಾಜೀವ್ ಗಾಂಧಿ, ವೀರಪ್ಪ ಮೊಯಿಲಿ ಸೇರಿದಂತೆ ಹಿರಿಯರು ಗುರುತಿಸಿ ಬೆಳೆಸಿದ್ದನ್ನು ನೆನಪಿಸಿಕೊಂಡರು.
ಆಯುಧಗಳಿಂದಲ್ಲ, ಅಕ್ಷರಗಳಿಂದ ಗೆಲ್ಲಬಹುದು
“ಪುಸ್ತಕಗಳು ಕೇವಲ ಜ್ಞಾನವನ್ನಷ್ಟೇ ನೀಡುವುದಿಲ್ಲ. ಬದುಕನ್ನು ನೋಡುವ ದೃಷ್ಟಿಕೋನವನ್ನೂ ನೀಡುತ್ತವೆ. ಆಯುಧಗಳಿಂದಲ್ಲ, ಮನಸ್ಸುಗಳು ಮತ್ತು ಅಕ್ಷರಗಳಿಂದ ಗೆಲ್ಲಲು ಸಾಧ್ಯ ಎಂದು ಗಾಂಧೀಜಿ ಹೇಳಿದ್ದಾರೆ. ನಾವು ಕಟ್ಟುವ ಕಟ್ಟಡಗಳು ಹಳೆಯದಾಗಬಹುದು. ಸಂಪತ್ತು ಬೇರೆಯವರ ಪಾಲಾಗಬಹುದು. ಆದರೆ ಹಂಚುವ ಜ್ಞಾನವನ್ನು ಇಡೀ ಜಗತ್ತಿಗೆ ಹಂಚಬಹುದು” ಎಂದು ಅವರು ಅಭಿಪ್ರಾಯಪಟ್ಟರು.
ರಮ್ಯಾ ಅವರು ತಮ್ಮ ಜೀವನದ ಇತಿಹಾಸ, ಅಪರೂಪದ ಛಾಯಾಚಿತ್ರಗಳನ್ನು ಸಂಗ್ರಹಿಸಿ ಪುಸ್ತಕ ರೂಪಕ್ಕೆ ತಂದಿರುವುದನ್ನು ಮೆಚ್ಚಿ, “ಒಬ್ಬ ಮುಖ್ಯಮಂತ್ರಿಯಾಗಿ ಅಲ್ಲ, ಒಬ್ಬ ಅಣ್ಣನಾಗಿ ಅವರಿಗೆ ಸಂಪೂರ್ಣ ಆಶೀರ್ವಾದ ನೀಡುತ್ತೇನೆ” ಎಂದು ಹೇಳಿದರು.
ಯಶಸ್ಸಿಗೆ ಶಿಸ್ತು, ಕಠಿಣ ನಿರ್ಧಾರ, ಏಕಾಗ್ರತೆ ಮತ್ತು ರಾಜಕೀಯ ಕೌಶಲ್ಯ ಅಗತ್ಯ ಎಂದು ತಿಳಿಸಿದ ಅವರು, “ಅದೃಷ್ಟದ ಮೇಲೆ ನಂಬಿಕೆ ಇಡಬೇಡಿ. ನಿಮ್ಮ ಶ್ರಮದ ಮೇಲೆ ನಂಬಿಕೆ ಇಡಿ. ಯಶಸ್ಸಿನ ಹಿಂದೆ ಕಠಿಣ ಪರಿಶ್ರಮವಿರುತ್ತದೆ” ಎಂದು ಸಲಹೆ ನೀಡಿದರು.
ಮೈಸೂರು ಬೆಳೆಯುತ್ತಿರುವ ನಗರವೆಂದು ಗಮನಿಸಿ, ಬೆಂಗಳೂರಿನೊಂದಿಗೆ ಮೈಸೂರನ್ನೂ ಅಭಿವೃದ್ಧಿಪಡಿಸಬೇಕು ಎಂದು ಅವರು ಹೇಳಿದರು.











