ಬೆಂಗಳೂರು: ಹನೂರು ಬಳಿ ಇತ್ತೀಚೆಗೆ ನಡೆದ ಅರಣ್ಯ ಎನ್‌ಕೌಂಟರ್ ಪ್ರಕರಣದ ಕುರಿತು ಗಂಭೀರ ಅನುಮಾನಗಳಿದ್ದು, ಸರ್ಕಾರ ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಿ ಸದನಕ್ಕೆ ಸ್ಪಷ್ಟ ಉತ್ತರ ನೀಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹಿಸಿದರು.
ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಿದ ಅವರು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಾಡಂಚಿನ ಜನರು ಹಾಗೂ ಅರಣ್ಯಾಧಿಕಾರಿಗಳ ನಡುವಿನ ಸಂಘರ್ಷ ನಿರಂತರವಾಗಿ ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದರು. ಶಿವಮೊಗ್ಗ, ಉತ್ತರ ಕನ್ನಡ, ಮಡಿಕೇರಿ ಹಾಗೂ ಕರಾವಳಿ ಭಾಗಗಳಲ್ಲಿಯೂ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಹೇಳಿದರು.
ಹನೂರು ಎನ್‌ಕೌಂಟರ್ ಕುರಿತು ಅಧಿಕಾರಿಗಳು ಆತ್ಮರಕ್ಷಣೆಗಾಗಿ ಗುಂಡಿನ ದಾಳಿ ನಡೆಸಲಾಗಿದೆ ಎಂದು ಹೇಳುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಹೀಗಾಗಿ ಪ್ರಕರಣದ ಕುರಿತು ಗಂಭೀರ ಚರ್ಚೆ ನಡೆಸಿ, ವಾಸ್ತವಾಂಶಗಳನ್ನು ಜನತೆ ಹಾಗೂ ಸದನದ ಮುಂದೆ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
“ಹನೂರು ಎನ್‌ಕೌಂಟರ್‌ಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ? ಅವರನ್ನು ಅಮಾನತು ಮಾಡುತ್ತೀರಾ ಅಥವಾ ಬೇರೆ ಯಾವುದೇ ಕಾನೂನು ಕ್ರಮ ಕೈಗೊಳ್ಳುತ್ತೀರಾ? ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ಸರ್ಕಾರ ಎಷ್ಟು ಪರಿಹಾರ ನೀಡಲಿದೆ?” ಎಂದು ವಿಜಯೇಂದ್ರ ಪ್ರಶ್ನಿಸಿದರು.
ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಜನರು ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳ ನಡುವಿನ ಸಂಘರ್ಷದ ಸಂದರ್ಭದಲ್ಲಿ ಅಧಿಕಾರ ದುರುಪಯೋಗವಾಗಿದೆಯೇ ಎಂಬ ಅನುಮಾನ ಮೂಡಿರುವುದರಿಂದ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.
ಘಟನೆಯ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ಸತ್ಯಾಸತ್ಯತೆಗಳನ್ನು ಬಹಿರಂಗಪಡಿಸುವುದರ ಜತೆಗೆ, ಮೃತರ ಕುಟುಂಬಕ್ಕೆ ನ್ಯಾಯ ಒದಗಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳ ವಿರುದ್ಧ ಕಾನೂನುಬದ್ಧ ಕ್ರಮ ಹಾಗೂ ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವ ಕುರಿತು ಸರ್ಕಾರ ಸದನದಲ್ಲಿ ಸ್ಪಷ್ಟ ಉತ್ತರ ನೀಡಬೇಕು ಎಂದು ವಿಜಯೇಂದ್ರ ಆಗ್ರಹಿಸಿದರು.











