ತಯಾರಿಕೆ, ದಾಸ್ತಾನು, ಸಾಗಣೆ, ಮಾರಾಟ ಹಾಗೂ ವಿಸರ್ಜನೆ ನಿಷೇಧ; ಮಣ್ಣಿನ ಮೂರ್ತಿಗಳಿಗೆ ಮಾತ್ರ ಅವಕಾಶ
ಬೆಂಗಳೂರು: ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಪರಿಸರ ಸಂರಕ್ಷಣೆ, ಜಲಮೂಲಗಳ ರಕ್ಷಣೆ ಮತ್ತು ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಓಪಿ) ಹಾಗೂ ರಾಸಾಯನಿಕ ಬಣ್ಣಗಳಿಂದ ತಯಾರಿಸಿದ ಗಣೇಶ ಮೂರ್ತಿಗಳ ತಯಾರಿಕೆ, ದಾಸ್ತಾನು, ಸಾಗಣೆ, ಮಾರಾಟ ಮತ್ತು ವಿಸರ್ಜನೆಗೆ ಸಂಪೂರ್ಣ ನಿಷೇಧ ಹೇರಲಾಗಿದೆ ಎಂದು ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್ ತಿಳಿಸಿದ್ದಾರೆ.
ಗಣೇಶ ಚತುರ್ಥಿ ಹಬ್ಬದ ನೆಪದಲ್ಲಿ ಪರಿಸರಕ್ಕೆ ಹಾನಿಯಾಗದಂತೆ ಆಚರಣೆ ಮಾಡುವುದು ಪಾಲಿಕೆಯ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದ್ದು, ನಿಷೇಧಿತ ಪಿಓಪಿ ಮೂರ್ತಿಗಳ ವಿರುದ್ಧ ನಿರಂತರ ನಿಗಾ ವಹಿಸುವಂತೆ ಸೂಚಿಸಲಾಗಿದೆ.
ಜಲಮೂಲಗಳ ರಕ್ಷಣೆಗೆ ಕಠಿಣ ಕ್ರಮ
ಪಿಓಪಿ ಮತ್ತು ಥರ್ಮಕೋಲ್ ಬಳಸಿ ಗಣೇಶ ಮೂರ್ತಿಗಳನ್ನು ತಯಾರಿಸುವುದು, ಸಂಗ್ರಹಿಸುವುದು ಅಥವಾ ಮಾರಾಟ ಮಾಡುವುದು ಕಾನೂನುಬಾಹಿರ. ಸಾರ್ವಜನಿಕ ಸ್ಥಳಗಳು, ಮಾರುಕಟ್ಟೆಗಳು ಮತ್ತು ವಾಣಿಜ್ಯ ಪ್ರದೇಶಗಳಲ್ಲಿ ಇಂತಹ ಮೂರ್ತಿಗಳ ಮಾರಾಟ ಹಾಗೂ ಸಾಗಣೆಗೆ ಅವಕಾಶವಿಲ್ಲ. ಸೀಸ, ಪಾದರಸ, ಕ್ಯಾಡ್ಮಿಯಂ ಸೇರಿದಂತೆ ಭಾರ ಲೋಹಗಳುಳ್ಳ ರಾಸಾಯನಿಕ ಬಣ್ಣಗಳ ಬಳಕೆಯನ್ನೂ ನಿಷೇಧಿಸಲಾಗಿದೆ. ಇಂತಹ ಮೂರ್ತಿಗಳನ್ನು ಕೆರೆ, ನದಿ, ಕಾಲುವೆ, ಬಾವಿ ಅಥವಾ ಇತರೆ ನೈಸರ್ಗಿಕ ಜಲಮೂಲಗಳಲ್ಲಿ ವಿಸರ್ಜಿಸುವುದನ್ನು ಕಟ್ಟುನಿಟ್ಟಾಗಿ ತಡೆಯಲಾಗುವುದು ಎಂದು ಆಯುಕ್ತರು ಸ್ಪಷ್ಟಪಡಿಸಿದ್ದಾರೆ.
ಮಣ್ಣಿನ ಮೂರ್ತಿಗಳಿಗೆ ಮಾತ್ರ ಪ್ರೋತ್ಸಾಹ
ಗಣೇಶ ಚತುರ್ಥಿ ಆಚರಣೆಗೆ ಪರಿಸರ ಸ್ನೇಹಿ ಮಣ್ಣಿನಿಂದ ತಯಾರಿಸಿ, ನೈಸರ್ಗಿಕ ಬಣ್ಣಗಳಿಂದ ಅಲಂಕರಿಸಿದ ಮೂರ್ತಿಗಳನ್ನು ಮಾತ್ರ ಬಳಸುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ. ಮೂರ್ತಿಗಳ ವಿಸರ್ಜನೆಗೆ ಪಾಲಿಕೆ ಗುರುತಿಸಿರುವ ಕಲ್ಯಾಣಿ, ಟ್ಯಾಂಕ್ ಅಥವಾ ಇತರೆ ಅಧಿಕೃತ ಸ್ಥಳಗಳನ್ನು ಮಾತ್ರ ಬಳಸಬೇಕು.
ಕಠಿಣ ತಪಾಸಣೆ ಮತ್ತು ಕ್ರಮ
ಪಾಲಿಕೆ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಮೂರ್ತಿ ತಯಾರಿಕಾ ಘಟಕಗಳು, ಗೋದಾಮುಗಳು, ಅಂಗಡಿಗಳು ಮತ್ತು ಮಾರುಕಟ್ಟೆಗಳಲ್ಲಿ ನಿಯಮಿತ ಹಾಗೂ ದಿಢೀರ್ ತಪಾಸಣೆ ನಡೆಸಲಾಗುವುದು. ನಿಷೇಧಿತ ಮೂರ್ತಿಗಳು ಕಂಡುಬಂದಲ್ಲಿ ತಕ್ಷಣ ವಶಪಡಿಸಿಕೊಂಡು, ಉಲ್ಲಂಘನೆ ಮಾಡಿದವರ ವಿರುದ್ಧ ದಂಡ ಮತ್ತು ಕಾನೂನು ಕ್ರಮ ಕೈಗೊಳ್ಳಲಾಗುವುದು. ಮಾರಾಟಗಾರರು ಮತ್ತು ದಾಸ್ತಾನುಗಾರರು ಪರಿಸರ ಸ್ನೇಹಿ ಮಣ್ಣಿನ ಮೂರ್ತಿಗಳನ್ನು ಮಾತ್ರ ಮಾರಾಟ ಮಾಡಬೇಕು ಎಂದು ಆಯುಕ್ತರು ಎಚ್ಚರಿಸಿದ್ದಾರೆ.
ವಿಸರ್ಜನಾ ಸ್ಥಳಗಳಲ್ಲಿ ವಿಶೇಷ ನಿಗಾ ವಹಿಸಿ, ಸ್ವಚ್ಛತೆ, ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿಗೆ ವ್ಯವಸ್ಥೆ ಮಾಡಲಾಗುವುದು. ನೈಸರ್ಗಿಕ ಜಲಮೂಲಗಳಲ್ಲಿ ನಿಷೇಧಿತ ಮೂರ್ತಿಗಳನ್ನು ವಿಸರ್ಜಿಸದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು.
ಕಾನೂನು ಹಿನ್ನೆಲೆ ಮತ್ತು ಅಧಿಕಾರಿಗಳಿಗೆ ನಿರ್ದೇಶನ
ಪರಿಸರ ಸಂರಕ್ಷಣಾ ಕಾಯ್ದೆ 1986, ಸರ್ಕಾರದ ಆದೇಶಗಳು ಮತ್ತು ನ್ಯಾಯಾಲಯದ ನಿರ್ದೇಶನಗಳ ಅನುಸಾರ ಈ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು. ತಯಾರಿಕೆ, ದಾಸ್ತಾನು, ಸಾಗಣೆ, ಮಾರಾಟ ಅಥವಾ ನೈಸರ್ಗಿಕ ಜಲಮೂಲಗಳಲ್ಲಿ ವಿಸರ್ಜನೆ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಎಲ್ಲಾ ವಲಯಗಳು ಮತ್ತು ವಾರ್ಡ್‌ಗಳಲ್ಲಿ ನಿಗಾ ವಹಿಸಿ, ಸಾರ್ವಜನಿಕ ದೂರುಗಳ ಆಧಾರದ ಮೇಲೆ ತಕ್ಷಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ವಿಸರ್ಜನಾ ಅವಧಿಯಲ್ಲಿ ಕೆರೆಗಳು, ಕಲ್ಯಾಣಿಗಳು ಮತ್ತು ಟ್ಯಾಂಕ್‌ಗಳ ಬಳಿ ವಿಶೇಷ ಕಾವಲು ಇರುತ್ತದೆ.
ಸಾರ್ವಜನಿಕರಿಗೆ ಮನವಿ
“ಗಣೇಶ ಚತುರ್ಥಿ ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಪ್ರಮುಖ ಹಬ್ಬ. ಧಾರ್ಮಿಕ ಆಚರಣೆಗಳಿಗೆ ಗೌರವ ನೀಡುವುದರ ಜೊತೆಗೆ ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನೂ ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಮಣ್ಣಿನಿಂದ ಹಾಗೂ ನೈಸರ್ಗಿಕ ಬಣ್ಣಗಳಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನೇ ಬಳಸಿ, ಪಾಲಿಕೆ ಗುರುತಿಸಿದ ಸ್ಥಳಗಳಲ್ಲಿ ಮಾತ್ರ ವಿಸರ್ಜನೆ ಮಾಡಿ ಪರಿಸರ ಸ್ನೇಹಿ ಹಬ್ಬವನ್ನು ಆಚರಿಸಬೇಕು. ಪಿಓಪಿ ಮೂರ್ತಿಗಳ ತಯಾರಿಕೆ, ದಾಸ್ತಾನು, ಸಾಗಣೆ, ಮಾರಾಟ ಮತ್ತು ವಿಸರ್ಜನೆಗೆ ಯಾವುದೇ ಅವಕಾಶವಿಲ್ಲ. ಸಾರ್ವಜನಿಕರು ಮತ್ತು ಮಾರಾಟಗಾರರು ಪಾಲಿಕೆಯ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಸಹಕರಿಸಬೇಕು” ಎಂದು ಆಯುಕ್ತ ಡಿ.ಎಸ್. ರಮೇಶ್ ಮನವಿ ಮಾಡಿದ್ದಾರೆ.











