ಬೆಂಗಳೂರು: ಸರ್ವರ್ ಸಮಸ್ಯೆಯಿಂದ ನಿತ್ಯವೂ ಜನರು ಪರದಾಡುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ರೇಷನ್ ಕಾರ್ಡ್ ಇ-ಕೆವೈಸಿ (e-KYC) ಗಡುವನ್ನು ವಿಸ್ತರಿಸಲಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆದೇಶದಂತೆ ಇ-ಕೆವೈಸಿ ಪ್ರಕ್ರಿಯೆಯ ಗಡುವು ಅಕ್ಟೋಬರ್ 20ರವರೆಗೆ ವಿಸ್ತರಿಸಲಾಗಿದೆ.
ಹಲವು ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ವರ್ ಸಮಸ್ಯೆಯಿಂದ ಜನರು ದಿನನಿತ್ಯ ಹೋಗಿ ಬರುತ್ತಿದ್ದರು. ಇದರಿಂದ ಜನರಿಗೆ ತೊಂದರೆಯಾಗುತ್ತಿದ್ದು, ಸರ್ಕಾರ ಗಡುವನ್ನು ಹಿಗ್ಗಿಸುವ ನಿರ್ಧಾರ ಕೈಗೊಂಡಿದೆ. ಈಗ ಅಕ್ಟೋಬರ್ 20ರವರೆಗೆ ಸಮಯವಿರುವುದರಿಂದ, ರೇಷನ್ ಕಾರ್ಡ್ ಹೊಂದಿರುವವರು ತ್ವರಿತವಾಗಿ ಇ-ಕೆವೈಸಿ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಇದೇ ವೇಳೆ, ಅಕ್ಟೋಬರ್ 1ರಿಂದ ನ್ಯಾಯಬೆಲೆ ಅಂಗಡಿಗಳ ಕಾರ್ಯಾಚರಣೆ ವೇಳಾಪಟ್ಟಿಯಲ್ಲೂ ಬದಲಾವಣೆ ಮಾಡಲಾಗಿದೆ. ಹೊಸ ವ್ಯವಸ್ಥೆಯ ಪ್ರಕಾರ ಅಂಗಡಿಗಳು ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಮತ್ತು ಸಂಜೆ 4 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ತೆರೆದಿರುತ್ತವೆ. ದೈನಂದಿನ ಕೂಲಿ ಕಾರ್ಮಿಕರು ಮತ್ತು ಬಡವರು ಕೆಲಸ ಮುಗಿಸಿ ಬರುವಾಗ ಸೌಲಭ್ಯವಾಗುವಂತೆ ಈ ಬದಲಾವಣೆ ಮಾಡಲಾಗಿದೆ ಎಂದು ಇಲಾಖೆ ತಿಳಿಸಿದೆ.
ರೇಷನ್ ಕಾರ್ಡ್ ಇ-ಕೆವೈಸಿ ಕಡ್ಡಾಯವಾಗಿದ್ದು, ಗಡುವು ಮೀರಿದರೆ ರೇಷನ್ ಪಡೆಯುವಲ್ಲಿ ತೊಂದರೆಯಾಗಬಹುದು. ಆದ್ದರಿಂದ ಸಾರ್ವಜನಿಕರು ಸಮಯವಿರುವಾಗಲೇ ತಮ್ಮ ರೇಷನ್ ಕಾರ್ಡ್‌ಗಳ ಇ-ಕೆವೈಸಿ ಪೂರ್ಣಗೊಳಿಸಿಕೊಳ್ಳಬೇಕು ಎಂದು ಆಹಾರ ಇಲಾಖೆ ಮನವಿ ಮಾಡಿದೆ.











