ಬೆಂಗಳೂರು:ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ನ ಅಂತರರಾಷ್ಟ್ರೀಯ ಸಮಾವೇಶ ಕೇಂದ್ರದಲ್ಲಿ ನಡೆಯುತ್ತಿರುವ 69ನೇ ಕಾಮನ್‌ವೆಲ್ತ್ ಸಂಸದೀಯ ಸಮ್ಮೇಳನದ (CPC) ಉದ್ಘಾಟನಾ ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನಮಂಡಲದ ನಿಯೋಗವು ದಕ್ಷಿಣ ಆಫ್ರಿಕಾ ಗಣರಾಜ್ಯದ ರಾಷ್ಟ್ರೀಯ ಸಭೆಯ ಸಭಾಧ್ಯಕ್ಷರಾದ (ಸ್ಪೀಕರ್) ಥೋಕೊ ದಿದಿಜಾ ಅವರಿಗೆ “A Brochure on Karnataka” ಎಂಬ ವಿಶೇಷ ಕಿರುಹೊತ್ತಿಗೆಯನ್ನು ಗೌರವಪೂರ್ವಕವಾಗಿ ಹಸ್ತಾಂತರಿಸಿತು.
ಈ ನಿಯೋಗಕ್ಕೆ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಶ್ರೀ ಜಿ.ಎಸ್. ಪಾಟೀಲ್ ಹಾಗೂ ವಿಧಾನ ಪರಿಷತ್ತಿನ ಸಭಾಪತಿಗಳಾದ ಶ್ರೀ ಸಲೀಂ ಅಹಮದ್ ನೇತೃತ್ವ ವಹಿಸಿದ್ದಾರೆ.
ಕರ್ನಾಟಕದ ಭವ್ಯ ಸಂಸದೀಯ ಪರಂಪರೆ, ಆಡಳಿತ ವ್ಯವಸ್ಥೆ, ಸಾಂಸ್ಕೃತಿಕ ವೈಭವ ಮತ್ತು ರಾಜ್ಯದ ಅಭಿವೃದ್ಧಿ ಸಾಧನೆಗಳನ್ನು ಅಂತರರಾಷ್ಟ್ರೀಯ ಮಟ್ಟದ ಪ್ರತಿನಿಧಿಗಳಿಗೆ ಪರಿಚಯಿಸುವ ಉದ್ದೇಶದಿಂದ ಈ ಕಿರುಹೊತ್ತಿಗೆಯನ್ನು ಸಿದ್ಧಪಡಿಸಲಾಗಿದೆ. ಕರ್ನಾಟಕ ವಿಧಾನಮಂಡಲದ ಪರವಾಗಿ ಸಂಸದೀಯ ಸ್ನೇಹ ಮತ್ತು ಸೌಹಾರ್ದದ ಸಂಕೇತವಾಗಿ ದಕ್ಷಿಣ ಆಫ್ರಿಕಾದ ಸಂಸತ್ತಿಗೆ ಇದನ್ನು ಅರ್ಪಿಸಲಾಗಿದೆ.
ಈ ಬಾರಿಯ ಸಮ್ಮೇಳನವು “ಬದಲಾಗುತ್ತಿರುವ ವಿಶ್ವ ವ್ಯವಸ್ಥೆಯಲ್ಲಿ ಅಂತರರಾಷ್ಟ್ರೀಯ ಕಾನೂನು ಮತ್ತು ಸಂಸದೀಯ ಪ್ರಜಾಪ್ರಭುತ್ವವನ್ನು ಬಲಪಡಿಸುವುದು: ಕಾಮನ್‌ವೆಲ್ತ್ ನಾಯಕತ್ವ” ಎಂಬ ಧ್ಯೇಯದಡಿ ನಡೆಯುತ್ತಿದೆ. ಕಾಮನ್‌ವೆಲ್ತ್‌ನ 9 ಭೌಗೋಳಿಕ ಪ್ರದೇಶಗಳಿಂದ ವಿವಿಧ ಸಭಾಧ್ಯಕ್ಷರು, ಸಭಾಪತಿಗಳು ಹಾಗೂ ಸಂಸದರು ಸೇರಿದಂತೆ 800ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದು, ಇದು ಕಾಮನ್‌ವೆಲ್ತ್ ಸಮ್ಮೇಳನದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಸಮಾವೇಶವಾಗಿದೆ.
ಸಮ್ಮೇಳನದ ಭಾಗವಾಗಿ ನಡೆದ ಅಂತರ್-ಸಂಸದೀಯ ವಿಷಯಗಳು, ಆರ್ಥಿಕತೆ, ವ್ಯಾಪಾರ, ಕೃತಕ ಬುದ್ಧಿಮತ್ತೆ (AI) ಬಳಕೆ, ಮಾನವ ಹಕ್ಕುಗಳು, ಶಾಂತಿ ಸ್ಥಾಪನೆ ಹಾಗೂ ಹವಾಮಾನ ಬದಲಾವಣೆ ಮತ್ತು ಸ್ಥಿತಿಸ್ಥಾಪಕತ್ವದಲ್ಲಿ ಸಂಸದೀಯ ನಾಯಕತ್ವ ಕುರಿತ ಕಾರ್ಯಾಗಾರಗಳು ಮತ್ತು ಚರ್ಚಾಗೋಷ್ಠಿಗಳಲ್ಲಿ ಕರ್ನಾಟಕದ ನಿಯೋಗವು ಸಕ್ರಿಯವಾಗಿ ಭಾಗವಹಿಸಿದೆ.











