ನವದೆಹಲಿ: ಬಿಡದಿ ಭೈರಮಂಗಲದಲ್ಲಿ ತಮ್ಮ ಭೂಮಿ ಉಳಿಸಿಕೊಳ್ಳಲು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಪೊಲೀಸರು ನಡೆಸಿದ ಅಮಾನುಷ ದಬ್ಬಾಳಿಕೆಯನ್ನು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತೀವ್ರವಾಗಿ ಖಂಡಿಸಿದ್ದಾರೆ. “ಹಿರಣ್ಯಾಕ್ಷನ ಪಾಪದ ಕೊಡ ತುಂಬುತ್ತಿದೆ” ಎಂದು ಅವರು ಗುಡುಗಿದ್ದಾರೆ.
ಮಾಧ್ಯಮ ಹೇಳಿಕೆಯಲ್ಲಿ ಮಾತನಾಡಿದ ಕುಮಾರಸ್ವಾಮಿ, “ಕರ್ನಾಟಕದಲ್ಲಿ ನಾಗರಿಕ ಸರಕಾರವಿದೆಯೋ ಅಥವಾ ರಾಕ್ಷಸ ಸರಕಾರವಿದೆಯೋ?” ಎಂದು ಖಾರವಾಗಿ ಪ್ರಶ್ನಿಸಿದರು. ರೈತರು ತಮ್ಮ ಭೂಮಿಯನ್ನು ಉಳಿಸಿಕೊಳ್ಳಲು ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದಾಗ, ಬಲಪ್ರಯೋಗದ ಮೂಲಕ ಅವರನ್ನು ಹತ್ತಿಕ್ಕಲು ಪ್ರಯತ್ನಿಸಿದ ಪೊಲೀಸರ ಕೃತ್ಯವನ್ನು ಅವರು ಖಂಡನಾರ್ಹ ಎಂದು ತಿಳಿಸಿದರು.
ಧರಣಿ ಕೂರಲು ಪೆಂಡಾಲ್ ಹಾಕಲು ಯತ್ನಿಸಿದಾಗ ಅದನ್ನು ಕಿತ್ತುಹಾಕಿ, ಅನ್ನದಾತರನ್ನು ಉರಿಬಿಸಿಲಿನಲ್ಲಿ ಕೂರಿಸಿದ ಪೊಲೀಸರ ವರ್ತನೆ ಅಕ್ಷಮ್ಯ ಎಂದು ಸಚಿವರು ಹೇಳಿದರು. “ಇಂತಹ ಕೃತ್ಯಗಳನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಬಿಡದಿ ಭೂಮಿ ‘ರಿಯಲ್ ಎಸ್ಟೇಟ್ ವ್ಯಾಪಾರಿ’ಗಳ ಕಪಿಮುಷ್ಟಿಗೆ ಸಿಲುಕಿದೆ. ನೆನಪಿರಲಿ, ಹಿರಣ್ಯಾಕ್ಷನ ಪಾಪದ ಕೊಡ ತುಂಬುತ್ತಿದೆ” ಎಂದು ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ಘಟನೆಯನ್ನು ‘ದೈವದ್ರೋಹ’ಕ್ಕೂ ಮೀರಿದ್ದು ಎಂದು ವರ್ಣಿಸಿದ ಕುಮಾರಸ್ವಾಮಿ, ಮುಖ್ಯಮಂತ್ರಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.











