ಮೈಸೂರು: ದಸರಾ ಮಹೋತ್ಸವವನ್ನು ರಾಜಕೀಯಕ್ಕೆ ಅವಕಾಶವಿಲ್ಲದಂತೆ ವೈಭವದಿಂದ ನಡೆಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಜಾತಿ-ಧರ್ಮ ಬೇಧವಿಲ್ಲದೆ ಎಲ್ಲ ಸ್ವಾಮೀಜಿಗಳು ಹಾಗೂ ಧರ್ಮಗುರುಗಳನ್ನು ಆಹ್ವಾನಿಸಬೇಕು, ಖಾಸಗಿ ಫ್ಲೆಕ್ಸ್‌ಗಳಿಗೆ ಅವಕಾಶವಿಲ್ಲ ಎಂದು ಅವರು ಸೂಚಿಸಿದ್ದಾರೆ.
ಮೈಸೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ದಸರಾ ಪ್ರಗತಿ ಪರಿಶೀಲನಾ ಸಭೆ ನಂತರ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಎಂ, “ರಾಜವಂಶಸ್ಥರಿಗೂ ಗೌರವಪೂರ್ವಕ ಆಹ್ವಾನ ನೀಡಬೇಕು. ಯಾರ ಸ್ಥಾನ, ಸ್ವಾಭಿಮಾನಕ್ಕೂ ಧಕ್ಕೆ ತರುವ ಕೆಲಸ ಆಗಬಾರದು. ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗಬೇಕು” ಎಂದರು.
ಅಂಬಾರಿ ಹೊರಲು ಐದು ಆನೆಗಳಿಗೆ ತರಬೇತಿ
ಅಂಬಾರಿ ಹೊರಲು ಧನಂಜಯ, ಏಕಲವ್ಯ ಸೇರಿದಂತೆ ಐದು ಆನೆಗಳಿಗೆ ತರಬೇತಿ ನೀಡಲಾಗಿದೆ. ಇನ್ನಷ್ಟು ತರಬೇತಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ ಗೌರವ
ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆದ್ದ ರಾಜ್ಯದ ಕ್ರೀಡಾಪಟುಗಳನ್ನು ದಸರಾ ಕ್ರೀಡಾಕೂಟಕ್ಕೆ ಆಹ್ವಾನಿಸಿ ಗೌರವಿಸಬೇಕು ಎಂದು ಸಿಎಂ ಸೂಚಿಸಿದರು.
ಸಚಿವರೆಲ್ಲರಿಗೂ ಹೊಣೆ
ದಸರಾ ಹನ್ನೊಂದು ದಿನಗಳ ಕಾಲ ದಿನಕ್ಕೆ ಇಬ್ಬರು ಸಚಿವರಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಬೆಂಬಲವಾಗಿ ಕೆಲಸ ಮಾಡಬೇಕು. ಒಬ್ಬರ ಮೇಲೆಯೇ ಒತ್ತಡ ಹೆಚ್ಚುವುದನ್ನು ತಪ್ಪಿಸುವುದು ಇದರ ಉದ್ದೇಶ ಎಂದು ಅವರು ವಿವರಿಸಿದರು.
ಖಾಸಗಿ ಫ್ಲೆಕ್ಸ್‌ಗಳಿಗೆ ಅವಕಾಶವಿಲ್ಲ
“ನಗರದಲ್ಲಿ ಎಲ್ಲಿಯೂ ಖಾಸಗಿ ಫ್ಲೆಕ್ಸ್‌ಗಳಿಗೆ ಅವಕಾಶ ನೀಡಬಾರದು. ನನ್ನ ಫೋಟೋ ಸೇರಿದಂತೆ ಯಾವುದೇ ಫೋಟೋಗಳನ್ನೂ ಹಾಕಬಾರದು. ದಸರಾ ಹಬ್ಬ ಮಾತ್ರ ವಿಜೃಂಭಿಸಬೇಕು. ದಸರಾ ಸೌಂದರ್ಯವನ್ನು ಯಾವ ಕಾರಣಕ್ಕೂ ಹಾಳುಗೆಡವಬಾರದು” ಎಂದು ಸಿಎಂ ಕಟ್ಟುನಿಟ್ಟಿನ ಸೂಚನೆ ನೀಡಿದರು.
21 ದಿನಗಳ ದೀಪಾಲಂಕಾರ
ಈ ವರ್ಷ ದೀಪಾಲಂಕಾರವನ್ನು 21 ದಿನಗಳ ಕಾಲ ವಿಶೇಷವಾಗಿ ಆಯೋಜಿಸಲಾಗುವುದು. ಯುವದಸರಾ, ಕಂಬಳ ಸೇರಿದಂತೆ ಇತರೆಡೆ ಆಹಾರ ಮೇಳಗಳನ್ನು ಏರ್ಪಡಿಸಿ, ಅಲ್ಲಲ್ಲಿ ಶೌಚಾಲಯ ಹಾಗೂ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಯುವದಸರಾಗೆ ಎರಡು ಲಕ್ಷ ಜನ ಆಗಮಿಸುವ ನಿರೀಕ್ಷೆ ಇದೆ ಎಂದರು.
ಪ್ರವಾಸಿಗರಿಂದ ಸುಲಿಗೆ ನಿಷೇಧ
ಹೋಟೆಲ್‌ಗಳು ಪ್ರವಾಸಿಗರಿಂದ ಯಾವುದೇ ಕಾರಣಕ್ಕೂ ಸುಲಿಗೆ ಮಾಡಬಾರದು. ಗೌರವಯುತ ಮೊತ್ತವನ್ನಷ್ಟೇ ವಸೂಲಿ ಮಾಡಬೇಕು ಎಂದು ಸೂಚಿಸಲಾಗಿದೆ.
ಜಂಬೂಸವಾರಿ ವ್ಯವಸ್ಥೆ
ದೇಶ-ವಿದೇಶಗಳ ರಾಯಬಾರಿಗಳಿಗೆ ಆಹ್ವಾನ ನೀಡಲಾಗಿದೆ. ಅವರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗುವುದು. ಟಿಕೆಟ್ ಖರೀದಿಸಿ ವೀಕ್ಷಣೆ ಮಾಡುವವರಿಗೆ ಸೂಕ್ತ ಆಸನಗಳು, ನಂಬರ್ ಹಾಗೂ ಹೆಸರು ಹಾಕಬೇಕು. ಯಾರೋ ಬಂದು ಕೂರುವಂತಿರಬಾರದು ಎಂದು ಸಿಎಂ ತಿಳಿಸಿದರು.
ಭೂಸೇನೆ, ವಾಯುಸೇನೆ ಹಾಗೂ ನೌಕಾಸೇನೆಯ ಮೂರು ತಂಡಗಳು ಜಂಬೂಸವಾರಿಯಲ್ಲಿ ಭಾಗವಹಿಸಲು ಒಪ್ಪಿಗೆ ನೀಡಿವೆ. ಅವರ ಶಿಸ್ತು ಎಲ್ಲರಿಗೂ ಮಾದರಿಯಾಗಬೇಕು. ಜನರಿಗೆ ವೀಕ್ಷಿಸಲು ಅಲ್ಲಲ್ಲಿ ಎಲ್‌ಇಡಿ ಪರದೆಗಳನ್ನು ಅಳವಡಿಸಿ ನೇರಪ್ರಸಾರ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ವೈವಿಧ್ಯಮಯ ಕಲಾತಂಡಗಳಿಗೆ ಅವಕಾಶ
ಮೆರವಣಿಗೆಯಲ್ಲಿ ಒಂದೇ ರೀತಿಯ ತಂಡಗಳಿಗೆ ಅವಕಾಶ ನೀಡಬಾರದು. ವೈವಿಧ್ಯಮಯ ಕಲಾತಂಡಗಳು, ಟ್ಯಾಬ್ಲೋಗಳು ಶಿಸ್ತು ಕಾಪಾಡಬೇಕು. ಕಲಾವಿದರು ಮೊಬೈಲ್ ಬಳಸಬಾರದು. ಸಮವಸ್ತ್ರಗಳು ಒಂದೇ ರೀತಿ ಇರಬೇಕು ಎಂದರು.
ಎಲ್ಲ ಧರ್ಮಗಳ ಗುರುಗಳಿಗೆ ಆಹ್ವಾನ
ಭಾನುವಾರ ಗವಿಸಿದ್ದೇಶ್ವರ ಶ್ರೀಗಳನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಲು ಜಿಲ್ಲಾಡಳಿತ ತೆರಳಲಿದೆ. ಜಾತಿ-ಧರ್ಮ ಬೇಧವಿಲ್ಲದೆ ಎಲ್ಲ ಮಠಾಧೀಶರು, ಕ್ರೈಸ್ತ, ಬೌದ್ಧ, ಸಿಖ್ ಹಾಗೂ ಅಲ್ಪಸಂಖ್ಯಾತರ ಧರ್ಮಗುರುಗಳನ್ನು ಆಹ್ವಾನಿಸಲು ಸೂಚಿಸಲಾಗಿದೆ. ಧಾರ್ಮಿಕ ಪ್ರಮುಖರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗುವುದು ಎಂದರು.
ಟಿಬೆಟಿಯನ್ನರಿಗೆ ಟ್ಯಾಬ್ಲೋ ಪ್ರದರ್ಶನಕ್ಕೆ ಅವಕಾಶ ನೀಡಲಾಗಿದೆ. ಮಂಗಳೂರು, ಕೇರಳ, ತಮಿಳುನಾಡು, ಆಂಧ್ರಪ್ರದೇಶದ ಪರಂಪರೆಯನ್ನು ಬಿಂಬಿಸುವ ಟ್ಯಾಬ್ಲೋಗಳನ್ನು ಕಳುಹಿಸುವಂತೆ ಪತ್ರ ಬರೆಯಲಾಗಿದೆ. ತುಳುನಾಡಿನ ಸಂಸ್ಕೃತಿ ಬಿಂಬಿಸಲು ಪ್ರತ್ಯೇಕ ಸ್ತಬ್ಧಚಿತ್ರ ಸಿದ್ಧಪಡಿಸಲು ಆಹ್ವಾನಿಸಲಾಗಿದೆ. ಚಿತ್ರರಂಗದವರೂ ಭಾಗವಹಿಸಲು ಆಹ್ವಾನ ನೀಡಲಾಗಿದೆ ಎಂದು ಸಿಎಂ ತಿಳಿಸಿದರು.
ಪೌರಕಾರ್ಮಿಕರಿಗೆ ಗೌರವ
ದಸರಾ ಸಂದರ್ಭದಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುವ ಪೌರಕಾರ್ಮಿಕರನ್ನು ಸೂಕ್ತವಾಗಿ ಗೌರವಿಸಲಾಗುವುದು. ಚಾಮರಾಜನಗರ, ಮಡಿಕೇರಿ, ಶ್ರೀರಂಗಪಟ್ಟಣ ದಸರಾ ಎಂದಿನಂತೆ ನಡೆಯಲಿದೆ. ಐತಿಹಾಸಿಕ ಡ್ರೋನ್ ಶೋ ಆಯೋಜಿಸಲಾಗುವುದು ಎಂದು ಸಿಎಂ ಹೇಳಿದರು.
ಎಲ್ಲಾ ಶಾಸಕರು, ವಿಧಾನಪರಿಷತ್ ಸದಸ್ಯರು ಹಾಗೂ ಸಚಿವರಿಗೆ ಕಡ್ಡಾಯವಾಗಿ ಆಹ್ವಾನ ಪತ್ರಿಕೆ ತಲುಪಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.










