ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ತಿನ ಕರ್ನಾಟಕ ಆಗ್ನೇಯ ಪದವೀಧರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆ-2026ರ ಮತ ಎಣಿಕೆ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಕೆ.ಎಂ. ಸುರೇಶ ಅವರು ಗೆಲುವು ಸಾಧಿಸಿದ್ದಾರೆ.
ಬೆಂಗಳೂರು ಶಿಕ್ಷಕರ ಕ್ಷೇತ್ರ ಹಾಗೂ ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಬೆಂಗಳೂರು ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರು ಈ ಮಾಹಿತಿ ನೀಡಿದರು. ಬೆಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ವೀದಿಯಲ್ಲಿರುವ ಸರ್ಕಾರಿ ಕಲಾ ಕಾಲೇಜಿನಲ್ಲಿ ಅಕ್ಟೋಬರ್ 27ರಂದು ಪ್ರಾರಂಭವಾದ ಒಟ್ಟು 10 ಸುತ್ತುಗಳ ಮತ ಎಣಿಕೆ ಕಾರ್ಯ ಇಂದು ಬೆಳಿಗ್ಗೆ ಪೂರ್ಣಗೊಂಡಿತು. ಚುನಾಯಿತ ಅಭ್ಯರ್ಥಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.
ಮತ ಎಣಿಕೆ ಅಂತ್ಯದಲ್ಲಿ ಕೆ.ಎಂ. ಸುರೇಶ ಅವರು 66,020 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶಶಿ ಹುಲಿಕುಂಟೆಮಠ ಅವರನ್ನು 23,098 ಮತಗಳ ಅಂತರದಿಂದ ಸೋಲಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆಮಠ ಅವರು 42,922 ಮತಗಳನ್ನು ಪಡೆದರು.

ಇತರ ಅಭ್ಯರ್ಥಿಗಳು ಪಡೆದ ಮತಗಳು ಹೀಗಿವೆ:
- ಸರ್ವ ಜನತಾ ಪಾರ್ಟಿ ಅಭ್ಯರ್ಥಿ ಸಿ.ಜಿ. ಪಾಟೀಲ್ – 162
- ಕಪನಿಗೌಡ – 156
- ಚಿಕ್ಕರಾಜು ಎಸ್. ವೈ. ಯಾದವ್ – 377
- ಲಕ್ಷ್ಮಯ್ಯ ಆರ್. – 387
- ಲಕ್ಷ್ಮಿಕಾಂತ ಎಸ್. ಯಾದವ್ – 369
- ಶಶಿ ಹುಲಿಕಟ್ಟಿ – 449
- ಸೈಯದ್ ಅಫಕ್ ಅಹ್ಮದ್ – 113
- ಅಡ್ವಕೇಟ್ ಬಾರಿದ್ – 1,107
ಮತ ಎಣಿಕೆ ಪ್ರಕ್ರಿಯೆಯಲ್ಲಿ ಒಟ್ಟು 1,12,062 ಮತಗಳು ಮಾನ್ಯವಾಗಿದ್ದು, 20,076 ಮತಗಳು ಅಮಾನ್ಯವೆಂದು ತಿರಸ್ಕೃತಗೊಂಡಿವೆ.
ಅಕ್ಟೋಬರ್ 23ರಂದು ನಡೆದ ಈ ಕ್ಷೇತ್ರದ ಮತದಾನದಲ್ಲಿ ಒಟ್ಟು 1,83,888 ಮತದಾರರ ಪೈಕಿ 1,35,321 ಮಂದಿ ಮತ ಚಲಾಯಿಸಿದ್ದು, ಶೇ.73.58ರಷ್ಟು ಮತದಾನವಾಗಿತ್ತು. ಮತ ಚಲಾಯಿಸಿದವರಲ್ಲಿ 78,070 ಪುರುಷರು ಹಾಗೂ 57,251 ಮಹಿಳೆಯರು ಇದ್ದರು ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.











