ಬೆಂಗಳೂರು: ಹಾಲಿನ ದರ ಏರಿಕೆಯನ್ನು ಸಮರ್ಥಿಸಿಕೊಂಡಿರುವ ರಾಜ್ಯ ಸರ್ಕಾರ, ಪ್ರತಿ ಲೀಟರ್ಗೆ 8 ರೂಪಾಯಿ ಹೆಚ್ಚಳ ಮಾಡಲಾಗಿದ್ದು, ಇದರಲ್ಲಿ 7 ರೂಪಾಯಿ ನೇರವಾಗಿ ರೈತರ ಜೇಬಿಗೆ ಸೇರಲಿದೆ. ಉಳಿದ 1 ರೂಪಾಯಿ ಕೆಎಂಎಫ್ ನಿರ್ವಹಣಾ ವೆಚ್ಚಕ್ಕೆ ಬಳಕೆಯಾಗಲಿದೆ. ಈ ಕ್ರಮ ಗ್ರಾಮೀಣ ಆರ್ಥಿಕತೆಯನ್ನು ಬಲಗೊಳಿಸಿ ಉದ್ಯೋಗ ಸೃಷ್ಟಿ ಮಾಡುವುದರ ಜೊತೆಗೆ ಯುವಕರ ನಗರಗಳಿಗೆ ವಲಸೆಯನ್ನು ತಡೆಯುವ ಗುರಿಯನ್ನು ಹೊಂದಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ದರ ಪರಿಷ್ಕರಣೆಯಿಂದ ಜಿಲ್ಲಾ ಹಾಲು ಒಕ್ಕೂಟಗಳು ರೈತರಿಗೆ ನೀಡುವ ಖರೀದಿ ದರ 35 ರೂಪಾಯಿಯಿಂದ 42 ರೂಪಾಯಿಗೆ ಏರಿಕೆಯಾಗಲಿದೆ. ಸರ್ಕಾರ ನೀಡುತ್ತಿರುವ 5 ರೂಪಾಯಿ ಪ್ರೋತ್ಸಾಹಧನವೂ ಮುಂದುವರಿಯಲಿದ್ದು, ರೈತರಿಗೆ ಪ್ರತಿ ಲೀಟರ್ಗೆ ಒಟ್ಟು 47 ರೂಪಾಯಿ ಸಿಗಲಿದೆ. ದಿನಕ್ಕೆ 10 ಲೀಟರ್ ಹಾಲು ಪೂರೈಸುವ ಸಣ್ಣ ಹೈನುಗಾರನಿಗೆ ಮಾಸಿಕ ಸರಾಸರಿ 2,100 ರೂಪಾಯಿ ಹೆಚ್ಚುವರಿ ಆದಾಯ ಲಭಿಸಲಿದೆ.
ಒಟ್ಟಾರೆಯಾಗಿ ರಾಜ್ಯದ ಗ್ರಾಮೀಣ ಭಾಗದ ಹಾಲು ಉತ್ಪಾದಕ ಕುಟುಂಬಗಳಿಗೆ ವಾರ್ಷಿಕ 1,850 ಕೋಟಿಯಿಂದ 2,100 ಕೋಟಿ ರೂಪಾಯಿ ಹೆಚ್ಚುವರಿ ಹರಿದುಬರಲಿದೆ. ಇದೇ ವೇಳೆ ದಿನಕ್ಕೆ ಒಂದು ಲೀಟರ್ ಹಾಲು ಬಳಸುವ ಸಾಮಾನ್ಯ ಗ್ರಾಹಕನ ಮಾಸಿಕ ಬಜೆಟ್ನಲ್ಲಿ 240 ರೂಪಾಯಿ ಹೊರೆ ಬೀಳಲಿದೆ ಎಂದು ಸರ್ಕಾರ ತಿಳಿಸಿದೆ.
ಕಳೆದ ಐದು ವರ್ಷಗಳಲ್ಲಿ ರಾಗಿ ಹುಲ್ಲು ಸೇರಿದಂತೆ ಅಗತ್ಯ ಪಶು ಆಹಾರಗಳ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಶೇ. 29ರಿಂದ ಶೇ. 54ರಷ್ಟು ಏರಿಕೆಯಾಗಿದೆ. ಡೀಸೆಲ್, ಪ್ಯಾಕೇಜಿಂಗ್ ಮತ್ತು ವಿದ್ಯುತ್ ದರ ಹೆಚ್ಚಳದಿಂದ ಹೈನುಗಾರಿಕೆ ನಷ್ಟದ ಹಾದಿ ಹಿಡಿದಿತ್ತು. ರಾಜ್ಯದಲ್ಲಿ ಉಂಟಾದ ಬರ ಪರಿಸ್ಥಿತಿಯಿಂದಾಗಿ ದೈನಂದಿನ ಹಾಲು ಸಂಗ್ರಹದಲ್ಲಿ ಸುಮಾರು 10 ಲಕ್ಷ ಲೀಟರ್ ಕೊರತೆ ಎದುರಾಗಿತ್ತು. ನೆರೆಯ ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕೇರಳಗಳಲ್ಲಿ ಹಾಲಿನ ದರ ಹೆಚ್ಚಿದ್ದು, ರಾಜ್ಯದ ಗಡಿ ಭಾಗದಿಂದ ಹಾಲು ಹೊರರಾಜ್ಯಗಳಿಗೆ ಸೋರಿಕೆಯಾಗುವ ಆತಂಕವೂ ಇತ್ತು. ದರ ಏರಿಕೆಯ ನಂತರವೂ ನಂದಿನಿ ಅತ್ಯಂತ ಕಡಿಮೆ ಬೆಲೆಯ ಬ್ರ್ಯಾಂಡ್ ಆಗಿ ಉಳಿದಿದೆ ಎಂದು ಸರ್ಕಾರ ಹೇಳಿದೆ.
5 ಲಕ್ಷ ಸ್ವಯಂ ಉದ್ಯೋಗಗಳ ನಿರೀಕ್ಷೆ
ಹಾಲಿನ ದರ ಹೆಚ್ಚಳದಿಂದ ಗ್ರಾಮೀಣ ಪ್ರದೇಶದ ಆರ್ಥಿಕತೆಗೆ ಭಾರೀ ಉತ್ತೇಜನ ದೊರೆಯಲಿದ್ದು, ಪ್ರತಿ ಪಂಚಾಯಿತಿ ಮಟ್ಟದಲ್ಲಿ ಸರಾಸರಿ ಒಂದು ಸಾವಿರ ಹಾಗೂ ಇಡೀ ರಾಜ್ಯದಲ್ಲಿ ಬರೋಬ್ಬರಿ 5 ಲಕ್ಷ ಸ್ವಯಂ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.
ಗ್ರಾಮೀಣ ಭಾಗದ ಯುವಕರು ಉದ್ಯೋಗ ಹುಡುಕಿಕೊಂಡು ನಗರಗಳಿಗೆ ವಲಸೆ ಹೋಗುವುದನ್ನು ತಪ್ಪಿಸಿ, ಗ್ರಾಮ ಮಟ್ಟದಲ್ಲೇ ಸ್ವಾವಲಂಬನೆ ಮತ್ತು ಸ್ವಯಂ ಉದ್ಯೋಗಕ್ಕೆ ಆದ್ಯತೆ ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ. ಪದವಿ ಮುಗಿಸಿ ನಗರಗಳಿಗೆ ಬಂದು 20ರಿಂದ 30 ಸಾವಿರ ರೂಪಾಯಿ ಸಂಬಳಕ್ಕೆ ದುಡಿಯುವವರು ಅನೇಕರಿದ್ದಾರೆ. ಆದರೆ ಹೈನುಗಾರಿಕೆಯನ್ನು ಉದ್ಯಮವಾಗಿ ಅಳವಡಿಸಿಕೊಂಡರೆ ಸ್ವಂತ ಊರಿನಲ್ಲೇ ತಿಂಗಳಿಗೆ 50 ಸಾವಿರಕ್ಕೂ ಹೆಚ್ಚು ಗಳಿಸುವ ಅವಕಾಶ ಲಭಿಸಲಿದೆ. ಸರ್ಕಾರ ಹೈನುಗಾರಿಕೆಯನ್ನು ಪ್ರೋತ್ಸಾಹಿಸಲು ಯುವಕರಿಗೆ ಸಹಕಾರ ಬ್ಯಾಂಕ್ಗಳ ಮೂಲಕ ಶೇ. 3ರಷ್ಟು ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನೂ ಒದಗಿಸುತ್ತಿದೆ.












