ಮಂಡ್ಯ: ಮಂಡ್ಯ ಜಿಲ್ಲೆಯಲ್ಲಿ ದೊಡ್ಡ ಕೈಗಾರಿಕೆ ಸ್ಥಾಪನೆಗೆ ಜಾಗ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬೃಹತ್ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಅವರಿಗೆ ಪತ್ರ ಬರೆದಿದ್ದೇನೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಗೆ ಕೈಗಾರಿಕೆಗಳು ಅಗತ್ಯವಿದ್ದು, ರಾಜ್ಯ ಸರ್ಕಾರದ ಸಹಕಾರ ಅನಿವಾರ್ಯ ಎಂದು ಒತ್ತಿ ಹೇಳಿದ್ದಾರೆ.

ಮಂಡ್ಯದಲ್ಲಿ ದಿಶಾ ಸಮಿತಿ ಸಭೆಯ ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, “ನಾನು ಸಂಸದನಾಗಿ ಒಂದೂವರೆ ವರ್ಷಗಳಾದರೂ ಕೈಗಾರಿಕೆಗೆ ಜಾಗ ಸಿಗುತ್ತಿಲ್ಲ. ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದೇನೆ, ಆದರೆ ಜಾಗ ಹುಡುಕುತ್ತಲೇ ಇದ್ದಾರೆ. ರಾಜ್ಯದಲ್ಲಿ ಕೇಂದ್ರದ ಯೋಜನೆಗಳಿಗೆ ರಾಜ್ಯ ಸಹಕಾರ ಬೇಕು. ಸಹಕಾರ ಸಿಗುತ್ತದೆ ಎಂಬ ನಂಬಿಕೆ ಇದೆ” ಎಂದು ಹೇಳಿದರು.

ಶಾಸಕರು ಜಾಗ ನೀಡುವುದಾದರೆ ನೀಡಲಿ ಅಥವಾ ಸರ್ಕಾರದಿಂದ ಸ್ವಾಧೀನಪಡಿಸಿಕೊಂಡು ನೀಡಲಿ ಎಂದ ಅವರು, “ಎಲ್ಲರೂ ಸೇರಿ ಕೈಗಾರಿಕೆ ತಂದು ಉದ್ಯೋಗ ಸೃಷ್ಟಿ ಮಾಡೋಣ. ಮಂಡ್ಯಕ್ಕೆ ಏನು ತಂದಿದ್ದೀರಿ ಎಂದು ಕೇಳುವವರು ಮೊದಲು ತಾವು ಏನು ತಂದಿದ್ದೀರಿ ಎಂದು ಹೇಳಲಿ. ಚಿಲ್ಲರೆ ರಾಜಕೀಯ ನಿಲ್ಲಿಸಿ” ಎಂದು ಆಗ್ರಹಿಸಿದರು. ಸಿಎಂ ಹಾಗೂ ಸಚಿವ ಎಂ.ಬಿ. ಪಾಟೀಲ್ ಅವರಿಂದ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇನೆ ಎಂದು ತಿಳಿಸಿದರು.

ಮೈಷುಗರ್ ಶಿಕ್ಷಕರಿಗೆ ವೇತನ ನೀಡುತ್ತಿದ್ದೇನೆ: ಕುಮಾರಸ್ವಾಮಿ
ಮೈಷುಗರ್ ಶಾಲೆಯ ಶಿಕ್ಷಕರಿಗೆ ಸಂಬಳ ನೀಡುವ ಯೋಗ್ಯತೆ ಈ ಸರ್ಕಾರಕ್ಕಿಲ್ಲ ಎಂದು ಟೀಕಿಸಿದ ಕುಮಾರಸ್ವಾಮಿ, “ಶಿಕ್ಷಕರ ಕಷ್ಟ ನೋಡಲಾಗದೆ ನಾನೇ ವೇತನಕ್ಕೆ ಹಣ ನೀಡುತ್ತಿದ್ದೇನೆ. ಸಂಬಳಕ್ಕೆ ದುಡ್ಡಿಲ್ಲ ಎಂದರೆ ಸರ್ಕಾರದಲ್ಲಿ ದುಡ್ಡೇ ಇಲ್ಲ ಎಂದರ್ಥ. ನಾನು ಸಿಎಂ ಆಗಿದ್ದಾಗ ಮೈಷುಗರ್‌ಗೆ ವಿಶೇಷ ಪ್ಯಾಕೇಜ್ ಘೋಷಿಸಿ ಬಜೆಟ್‌ನಲ್ಲಿ ₹100 ಕೋಟಿ ಮೀಸಲಿಟ್ಟಿದ್ದೆ. ಆ ಹಣ ಎಲ್ಲಿಗೆ ಹೋಯಿತು?” ಎಂದು ಪ್ರಶ್ನಿಸಿದರು.
ಮಂಡ್ಯ ಕೃಷಿ ವಿಶ್ವವಿದ್ಯಾಲಯ ತಂದಿದ್ದೇವೆ ಎಂದು ಹೇಳಿಕೊಳ್ಳುವ ಸರ್ಕಾರಕ್ಕೆ ಟಾಂಗ್ ನೀಡಿದ ಅವರು, “ಐದು ವರ್ಷಗಳ ನಂತರ ಮಾತನಾಡೋಣ. ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ 161 ಪ್ರಾಧ್ಯಾಪಕರಿದ್ದರೆ ಇದ್ದು ಕೇವಲ 9 ಜನ. ರಾಜ್ಯದಲ್ಲಿ 65 ಸಾವಿರ ಶಿಕ್ಷಕರ ಕೊರತೆ ಇದೆ. ನೇಮಕ ಮಾಡುವ ಯೋಗ್ಯತೆಯೇ ಇಲ್ಲ” ಎಂದು ಹರಿಹಾಯ್ದರು.












