ಬೆಂಗಳೂರು: ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಸರಿಯಾಗಿ ತಲುಪುವಂತೆ ಕ್ರಮ ವಹಿಸಲಾಗುತ್ತಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆ ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಂ. ರೇವಣ್ಣ ಅವರೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಚಿವರು, ಅನ್ನಭಾಗ್ಯ ಯೋಜನೆಯ ಮೂಲಕ ರಾಜ್ಯದ ಸುಮಾರು 4.42 ಕೋಟಿ ಫಲಾನುಭವಿಗಳಿಗೆ ತಲಾ 10 ಕೆಜಿ ಪಡಿತರ ವಿತರಿಸಲಾಗುತ್ತಿದ್ದು, ರಾಜ್ಯವನ್ನು ಹಸಿವು ಮುಕ್ತವನ್ನಾಗಿಸಲಾಗಿದೆ ಎಂದು ಹೇಳಿದರು. ಯಾರೂ ಹಸಿವಿನಿಂದ ಮಲಗಬಾರದು ಎಂಬ ಉದ್ದೇಶದಿಂದ ಆಹಾರ ಭದ್ರತಾ ಕಾಯ್ದೆಯಡಿ ಈ ಯೋಜನೆ ಜಾರಿಯಾಗಿದೆ ಎಂದು ಅವರು ನೆನಪಿಸಿದರು.

ಪಡಿತರ ವಿತರಣೆಯಲ್ಲಿ ಕಾಳಸಂತೆಯನ್ನು ತಡೆಯಲು ಗೋದಾಮುಗಳಿಗೆ ಸಿಸಿ ಟಿವಿ ಕ್ಯಾಮರಾ ಹಾಗೂ ಪಡಿತರ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿದೆ. ಕೇಂದ್ರ ಕಚೇರಿಯಲ್ಲಿ ಕಮಾಂಡ್ ಅಂಡ್ ಕಂಟ್ರೋಲ್ ರೂಂ ನಿರ್ಮಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು. ಕಾಳಸಂತೆಗೆ ಮಾರಾಟವಾಗುವ ಪಡಿತರ ಅಕ್ರಮ ತಡೆಯಲು 1,497 ಎಫ್‌ಐಆರ್ ದಾಖಲಿಸಿ, ಸುಮಾರು 50 ಕೋಟಿ ರೂಪಾಯಿ ಮೌಲ್ಯದ ಪಡಿತರ ವಶಪಡಿಸಿಕೊಳ್ಳಲಾಗಿದೆ.
ಬಿಪಿಎಲ್ ಪಡೆಯಲು ನಿಗದಿಪಡಿಸಿದ್ದ ವಾರ್ಷಿಕ ಆದಾಯ ಮಿತಿಯನ್ನು 1.20 ಲಕ್ಷದಿಂದ 3 ಲಕ್ಷಕ್ಕೆ ಹೆಚ್ಚಿಸಲು ಆಡಳಿತಾತ್ಮಕ ಸುಧಾರಣಾ ಆಯೋಗದ ಶಿಫಾರಸಿನಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು. ಕೇಂದ್ರ ಮಾನದಂಡಗಳ ಪ್ರಕಾರ ಪಡಿತರ ಕಾರ್ಡ್‌ಗಳ ಪರಿಶೀಲನೆ ನಡೆಯುತ್ತಿದ್ದು, ಯಾವುದೇ ಕಾರ್ಡ್ ರದ್ದುಪಡಿಸದೆ ಅನರ್ಹ ಕಾರ್ಡ್‌ಗಳನ್ನು ಎಪಿಎಲ್‌ಗೆ ವರ್ಗಾಯಿಸಲಾಗುತ್ತಿದೆ.
ಎಂಎಸ್‌ಪಿ ಯೋಜನೆಯಡಿ 5.60 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಸಿ, ಶುದ್ಧೀಕರಿಸಿ ವಿತರಿಸಲಾಗುತ್ತಿದೆ. ಇಂದಿರಾ ಕಿಟ್ ವಿತರಣೆಗೆ ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಸುಮಾರು 6,000 ಕೋಟಿ ರೂಪಾಯಿ ವೆಚ್ಚದ ಈ ಯೋಜನೆ ಮುಂದಿನ ಎರಡು ತಿಂಗಳಲ್ಲಿ ಜಾರಿಗೆ ಬರಲಿದೆ ಎಂದು ಸಚಿವರು ತಿಳಿಸಿದರು.

ಕಾನೂನು ಮಾಪನ ಶಾಸ್ತ್ರ ಇಲಾಖೆಗೆ 33 ವಾಹನಗಳನ್ನು ನೀಡಲಾಗಿದ್ದು, ಕಳೆದ ಮೂರು ವರ್ಷಗಳಲ್ಲಿ ಸುಮಾರು 250 ಕೋಟಿ ರೂಪಾಯಿ ರಾಜಸ್ವ ಸಂಗ್ರಹವಾಗಿದೆ. ರಾಜ್ಯದಾದ್ಯಂತದ 20,259 ನ್ಯಾಯಬೆಲೆ ಅಂಗಡಿಗಳಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು ಮತ್ತು ಗ್ಯಾರಂಟಿ ಯೋಜನೆಗಳ ಅಧ್ಯಕ್ಷರ ಭಾವಚಿತ್ರ ಹಾಗೂ ದೂರವಾಣಿ ಸಂಖ್ಯೆಗಳನ್ನು ಪ್ರದರ್ಶಿಸಲು ಚರ್ಚಿಸಲಾಗಿದೆ. ಅಂಗಡಿಗಳನ್ನು ಬೆಳಗ್ಗೆ 6 ರಿಂದ ರಾತ್ರಿ 10 ರವರೆಗೆ ತೆರೆದಿಡಲು ಸೂಚಿಸಲಾಗಿದ್ದು, ದೂರುಗಳಿಗೆ 1967 ಸಹಾಯವಾಣಿಗೆ ಕರೆ ಮಾಡುವಂತೆ ಕರೆ ನೀಡಲಾಗಿದೆ.
ಮುಂದಿನ ದಿನಗಳಲ್ಲಿ ಫಲಾನುಭವಿಗಳು ಸ್ವತಃ ಮೊಬೈಲ್ ಮೂಲಕ ಇ-ಕೆವೈಸಿ ಮಾಡಿಕೊಳ್ಳಲು ಅವಕಾಶ ಕಲ್ಪಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಬೆಂಗಳೂರು ನಗರದ ನ್ಯಾಯಬೆಲೆ ಅಂಗಡಿಗಳು ಮತ್ತು ಅಧಿಕಾರಿಗಳ ಮೇಲಿನ ದೂರುಗಳ ಬಗ್ಗೆ ತ್ವರಿತ ಕ್ರಮ ಕೈಗೊಳ್ಳಲು ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ.

ಸಭೆಯಲ್ಲಿ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ, ಎಸ್.ಆರ್. ಪಾಟೀಲ್, ಪುಷ್ಪ ಅಮರನಾಥ್, ಮೆಹರೋಜ್ ಖಾನ್, ಕೃಷ್ಣಪ್ಪ, ರಮೇಶ್ ಕುಮಾರ್, ಪ್ರಜಾಸೇವಾ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ, ಸರ್ಕಾರದ ಕಾರ್ಯದರ್ಶಿ ಕನಗವಲ್ಲಿ, ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಗದೀಶ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.











