ನವದೆಹಲಿ: ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆಯನ್ನು ಸೇರಿಸಬೇಕು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಪತ್ರ ಬರೆದಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು, ತಮ್ಮನ್ನು ‘ಮನುವಾದಿ’ ಎಂದು ಕರೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ‘ಸೈದ್ಧಾಂತಿಕ ಅಧಃಪತನ’ ಎಂದು ಟೀಕಿಸಿದ ಸಚಿವ ಎಚ್.ಸಿ. ಮಹದೇವಪ್ಪ ಅವರಿಗೆ ತೀವ್ರ ತಿರುಗೇಟು ನೀಡಿದ್ದಾರೆ.
ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಕುಮಾರಸ್ವಾಮಿ ಅವರು, “ನಾನು ಕೃಷ್ಣತತ್ತ್ವವನ್ನು ನಂಬಿದವನು, ಕಂಸನ ಹಿಂಸೆಯನ್ನಲ್ಲ. ಕಾಂಗ್ರೆಸ್ ಪಕ್ಷವೇ ಕಂಸತತ್ತ್ವದಲ್ಲಿ ನಂಬಿಕೆ ಇಟ್ಟಿದೆ” ಎಂದು ಕಟುವಾಗಿ ಟೀಕಿಸಿದ್ದಾರೆ.
ತಮ್ಮನ್ನು ಮನುವಾದಿ ಎಂದು ಕರೆದ ಸಿದ್ದರಾಮಯ್ಯ ಮತ್ತು ಮಹದೇವಪ್ಪ ಅವರು ಶಾಲಾ ಮಕ್ಕಳಿಗೆ ಏನು ಬೋಧಿಸುತ್ತಾರೆ ಎಂದು ಪ್ರಶ್ನಿಸಿರುವ ಅವರು, “ಬುದ್ಧಿಗೇಡಿತನಕ್ಕೂ ಮಿತಿ ಬೇಕಲ್ಲವೇ?” ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಭಗವದ್ಗೀತೆಯನ್ನು ಜಗತ್ತಿನ ಬೆಳಕು, ಸನ್ಮಾರ್ಗದ ದೀವಿಗೆ ಎಂದು ಬಣ್ಣಿಸಿರುವ ಕುಮಾರಸ್ವಾಮಿ ಅವರು, ಮಕ್ಕಳನ್ನು ಬಾಲ್ಯದಿಂದಲೇ ಒಳ್ಳೆಯ ಮಾರ್ಗದಲ್ಲಿ ನಡೆಸುವ ಉದ್ದೇಶದಿಂದಲೇ ಈ ಮನವಿ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. “ಬಹುಶಃ ಮಹದೇವಪ್ಪ ಅವರಿಗೆ ಭಗವದ್ಗೀತೆಯ ಸಾರ ಗೊತ್ತಿಲ್ಲ. ಅವರಿಗೆ ಬೇರೆಯಾವುದೋ ಗ್ರಂಥದ ಸಾರ ಗಾಢವಾಗಿ ಇಳಿದಿರಬೇಕು” ಎಂದು ವ್ಯಂಗ್ಯವಾಡಿದ್ದಾರೆ.
ಪ್ರಮಾಣ ವಚನ ಸ್ವೀಕಾರದ ಸಂದರ್ಭದಲ್ಲಿ ದೇವರು, ತಂದೆ-ತಾಯಿ ಹೆಸರಿನಲ್ಲಿ ಆಣೆ ಮಾಡುವುದು ಸನ್ಮಾರ್ಗವೇ ಆಗಿದೆ. ಹಾಗಿದ್ದಲ್ಲಿ ಮಹದೇವಪ್ಪ ಅವರ ‘ಮಾರ್ಗ’ ಯಾವುದು? ಕಂಸ ಮಾರ್ಗವೇ?? ಎಂದು ಪ್ರಶ್ನಿಸಿದ್ದಾರೆ.
“ಇಂದು ಭಾರತದ ರಾಜಕೀಯ ನಿಂತಿರುವುದೇ ಕೃಷ್ಣತತ್ತ್ವದ ಮೇಲೆ. ಸಮರ, ರಾಜಕೀಯ, ಜ್ಞಾನ, ಆಡಳಿತ, ಮಾನವ ಸಂಬಂಧಗಳಿಗೆ ಎಲ್ಲಾ ಭಗವದ್ಗೀತೆಯೇ ದೀವಿಗೆ. ಕೃಷ್ಣಬೋಧೆ ಸಾರ್ವಕಾಲಿಕ, ಭಗವದ್ಗೀತೆ ಕಾಲಾತೀತ” ಎಂದು ಒತ್ತಿ ಹೇಳಿರುವ ಕುಮಾರಸ್ವಾಮಿ ಅವರು, ಸಂವಿಧಾನ ಮತ್ತು ಪ್ರಜಾಪ್ರಭುತ್ವ ಎಂದು ಜಪಿಸುವವರು ರಾಮಾಯಣ, ಮಹಾಭಾರತವನ್ನೂ ಓದಿ ಎಂದು ಸಲಹೆ ನೀಡಿದ್ದಾರೆ.
ಕೊನೆಯಲ್ಲಿ, “ಭಗವದ್ಗೀತೆ ಓದಬೇಡಿ ಎಂದು ನಾನು ಎಂದೂ ಹೇಳಿಲ್ಲ, ಹೇಳುವುದೂ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರಾಜಕೀಯ ಚರ್ಚೆ ತೀವ್ರಗೊಂಡಿದೆ. ಯುವಕರಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯಗಳ ದುರುಪಯೋಗವನ್ನು ತಡೆಗಟ್ಟಲು ಭಗವದ್ಗೀತೆಯ ಬೋಧನೆ ಅಗತ್ಯ ಎಂದು ಕುಮಾರಸ್ವಾಮಿ ವಾದಿಸುತ್ತಿದ್ದಾರೆ.












