ಕುದೂರು: ಗ್ರಾಮೀಣ ಭಾಗದ ಜನತೆಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಸಜ್ಜನ ಟ್ರಸ್ಟ್ ಮತ್ತು ಡಾ. ಮಧುಕರ ಶೆಟ್ಟಿ ಬಳಗದ ವತಿಯಿಂದ ಕುದೂರಿನಲ್ಲಿ ನಿರ್ಮಿಸಲಾಗಿರುವ ನೂತನ ಸುಸಜ್ಜಿತ ಆಸ್ಪತ್ರೆಯನ್ನು ಉದ್ಘಾಟಿಸಲಾಯಿತು. ಈ ಉದ್ಘಾಟನಾ ಸಮಾರಂಭದ ಅಂಗವಾಗಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ಶಿಬಿರ ಹಾಗೂ ಕೃತಜ್ಞತಾ ಸಮಾರಂಭದಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ, ಪದ್ಮಶ್ರೀ ಪುರಸ್ಕೃತ ಡಾ. ಸಿ.ಎನ್. ಮಂಜುನಾಥ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
“ಆರೋಗ್ಯ ಶಿಬಿರಗಳು ಗ್ರಾಮೀಣ ಮತ್ತು ಅಂಚಿನ ಜನರಿಗೆ ಸಮಯಕ್ಕೆ ಸರಿಯಾಗಿ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ದೊರಕಿಸಿಕೊಡುವಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತವೆ. ರೋಗಗಳು ಗಂಭೀರವಾಗುವ ಮೊದಲೇ ತಪಾಸಣೆ ಮಾಡಿಸಿಕೊಳ್ಳುವ ಜಾಗೃತಿ ಮೂಡಿಸುವುದು ಇಂತಹ ಶಿಬಿರಗಳ ಮುಖ್ಯ ಉದ್ದೇಶವಾಗಿದೆ. ಸುಸಜ್ಜಿತ ಆಸ್ಪತ್ರೆಗಳು ಮತ್ತು ಉಚಿತ ಆರೋಗ್ಯ ಶಿಬಿರಗಳು ಜನಸಾಮಾನ್ಯರ ಆರೋಗ್ಯ ರಕ್ಷಣೆಗೆ ಮಹತ್ವದ ಕೊಡುಗೆ ನೀಡುತ್ತವೆ” ಎಂದು ಡಾ. ಮಂಜುನಾಥ್ ಅವರು ಅಭಿಪ್ರಾಯಪಟ್ಟರು.
ಇಂತಹ ಸೇವಾ ಮನೋಭಾವದ ಕಾರ್ಯಗಳು ಸಮಾಜದ ಆರೋಗ್ಯವನ್ನು ಬಲಪಡಿಸುವ ಜೊತೆಗೆ ಮಾನವೀಯ ಮೌಲ್ಯಗಳನ್ನು ಗಟ್ಟಿಗೊಳಿಸುತ್ತವೆ ಎಂದು ಅವರು ಪ್ರಶಂಸಿಸಿದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಹಾಗೂ ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಶಿವಸಿದ್ಧೇಶ್ವರ ಮಹಾಸ್ವಾಮೀಜಿ ವಹಿಸಿದ್ದರು.
ಈ ಕಾರ್ಯಕ್ರಮದ ಮೂಲಕ ಗ್ರಾಮೀಣ ಆರೋಗ್ಯ ಸೇವೆಯಲ್ಲಿ ಹೊಸ ಅಧ್ಯಾಯ ಆರಂಭವಾಗಿದ್ದು, ಸ್ಥಳೀಯ ಜನತೆಗೆ ಇದು ದೊಡ್ಡ ವರದಾನವಾಗಲಿದೆ.












