ಬೆಂಗಳೂರು: ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯ ವತಿಯಿಂದ ಆಯೋಜಿಸಲಾಗಿರುವ ಅಂತರರಾಷ್ಟ್ರೀಯ ವಾಣಿಜ್ಯ ಮೇಳ 2026ರಲ್ಲಿ ಉತ್ಪಾದನೋತ್ತರ ಕೃಷಿ ಮತ್ತು ರೈತರ ಸಬಲೀಕರಣಕ್ಕೆ ಪ್ರಮುಖ ಒತ್ತು ನೀಡಲಾಗುತ್ತಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ತಿಳಿಸಿದ್ದಾರೆ.
ಕೃಷಿ ಇಲಾಖೆಯ ಸಮೃದ್ಧಿ ಸಭಾಂಗಣದಲ್ಲಿ ನಡೆದ ‘ಉತ್ಪಾದನೋತ್ತರ ಕೃಷಿ-ರೈತರ ಸಬಲೀಕರಣ’ ಅಂತರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, 2017ರಲ್ಲಿ ಪ್ರಾರಂಭವಾದ ಸಾವಯವ ಮತ್ತು ಸಿರಿಧಾನ್ಯ ಮೇಳವು ಇಂದು ಅಂತರರಾಷ್ಟ್ರೀಯ ಮಟ್ಟಕ್ಕೆ ಬೆಳೆದಿರುವುದು ರಾಜ್ಯದ ಹೆಮ್ಮೆಯ ಸಂಗತಿ ಎಂದರು.
ಕಳೆದ ವರ್ಷ (2025) ನಡೆದ ಅಂತರರಾಷ್ಟ್ರೀಯ ಸಾವಯವ ಮತ್ತು ಸಿರಿಧಾನ್ಯ ಮೇಳಕ್ಕೆ ಲಕ್ಷಾಂತರ ರೈತರು ಹಾಗೂ ಸಾರ್ವಜನಿಕರು ಭಾಗವಹಿಸಿ ಯಶಸ್ಸು ತಂದುಕೊಟ್ಟರು. ಇದು ಯುವ ರೈತರನ್ನು ಉದ್ಯಮಿಗಳನ್ನಾಗಿ ಪರಿವರ್ತಿಸುವಲ್ಲಿ ಮತ್ತು ಸಿರಿಧಾನ್ಯಗಳನ್ನು ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಸಚಿವರು ಹೇಳಿದರು.
ಈ ಬಾರಿ ಸರ್ಕಾರವು ಇನ್ನೊಂದು ಹೆಜ್ಜೆ ಮುಂದಿಟ್ಟು, ದೇಶದಲ್ಲಿ ಪ್ರಥಮವಾಗಿ “ಉತ್ಪಾದನೋತ್ತರ ಕೃಷಿ-ರೈತರ ಸಬಲೀಕರಣ” (Agriculture Beyond Production – Farmers Empowerment) ಧ್ಯೇಯವಾಕ್ಯದೊಂದಿಗೆ ಅಂತರರಾಷ್ಟ್ರೀಯ ವಾಣಿಜ್ಯ ಮೇಳವನ್ನು ಫೆಬ್ರವರಿ 6, 7 ಮತ್ತು 8ರಂದು ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಆಯೋಜಿಸುತ್ತಿದೆ ಎಂದು ಅವರು ಘೋಷಿಸಿದರು.

ಹಿಂದೆ ಭಾರತ ಆಹಾರ ಪದಾರ್ಥಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. ಇಂದು ಆಹಾರ ಉತ್ಪಾದನೆಯಲ್ಲಿ ದೊಡ್ಡ ಪ್ರಗತಿ ಸಾಧಿಸಿ ಇತರ ದೇಶಗಳಿಗೆ ರಫ್ತು ಮಾಡುತ್ತಿದೆ. ಅಕ್ಕಿ ಉತ್ಪಾದನೆಯಲ್ಲಿ ಚೀನಾವನ್ನು ಹಿಂದಕ್ಕೆ ಹಾಕಿರುವುದು ಭಾರತದ ಸಾಧನೆ ಎಂದು ಸಚಿವರು ಉಲ್ಲೇಖಿಸಿದರು.
ಈ ಬಾರಿಯ ಮೇಳದಲ್ಲಿ ಸಂಸ್ಕರಣೆ ಮತ್ತು ಮೌಲ್ಯವರ್ಧನೆ, ಕೃಷಿ ಪರಿಸರ ವಿಜ್ಞಾನ ಹಾಗೂ ಬ್ರ್ಯಾಂಡಿಂಗ್ ಎಂಬ ಮೂರು ಉಪ ಧ್ಯೇಯಗಳೊಂದಿಗೆ ಕಾರ್ಯಕ್ರಮ ರೂಪಿಸಲಾಗಿದೆ. ಉತ್ಪಾದನೆಯ ನಂತರ ರೈತರಿಗೆ ನಿರಂತರ ಆದಾಯ ದೊರಕಿಸಲು ಕೃಷಿ ತ್ಯಾಜ್ಯಗಳ ಮರುಬಳಕೆ, ದೇಸಿ ತಳಿಗಳ ಸಂರಕ್ಷಣೆ, ಭೌಗೋಳಿಕ ಸೂಚ್ಯಾಂಕ (GI Tag) ಉತ್ಪನ್ನಗಳ ಪ್ರಚಾರಕ್ಕೆ ಸರ್ಕಾರ ವ್ಯಾಪಕ ಕ್ರಮ ಕೈಗೊಂಡಿದೆ.
ರೈತರ ಮೌಲ್ಯವರ್ಧನೆಗೆ ಒತ್ತು ನೀಡಲು ಸೆಕೆಂಡರಿ ಕೃಷಿ ನಿರ್ದೇಶನಾಲಯ ಸ್ಥಾಪಿಸಲಾಗಿದ್ದು, ಇದರ ಮೂಲಕ ಸಂಸ್ಕರಣೆ, ಬ್ರ್ಯಾಂಡಿಂಗ್ ಮತ್ತು ಮಾರುಕಟ್ಟೆ ಸಂಪರ್ಕಕ್ಕೆ ಸಹಾಯ ಮಾಡಲಾಗುತ್ತಿದೆ ಎಂದು ಸಚಿವರು ವಿವರಿಸಿದರು.
ಜರ್ಮನಿ, ಅಮೆರಿಕಾ, ವಿಯಟ್ನಾಮ್, ಕಾಂಬೋಡಿಯಾ ಹಾಗೂ ದೇಶದ ವಿವಿಧ ಭಾಗಗಳಿಂದ ಬಂದ 35ಕ್ಕೂ ಹೆಚ್ಚು ತಜ್ಞರು, ರಾಜ್ಯದ ರೈತರು ಸೇರಿ ಚರ್ಚೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ GI-Z ಇಂಡಿಯಾ ಟೀಂ ಲೀಡರ್ ಹನ್ಸ್ ಜುರ್ಗೆನ್ ಕ್ಲೆನ್, GI-Z ಪ್ರಾಜೆಕ್ಟ್ ಮ್ಯಾನೇಜರ್ ನರ್ಮಾತ ಶರ್ಮಾ, ಕೃಷಿ ಇಲಾಖೆ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತ ವೈ.ಎಸ್. ಪಾಟೀಲ್, ನಿರ್ದೇಶಕ ಡಾ. ಜಿ.ಟಿ. ಪುತ್ರ, ಜಲಾನಯನ ಅಭಿವೃದ್ಧಿ ಇಲಾಖೆ ಆಯುಕ್ತ ಯು.ಪಿ. ಸಿಂಗ್ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಈ ಮೇಳದ ಮೂಲಕ ರೈತರ ಆದಾಯ ದ್ವಿಗುಣಗೊಳಿಸುವ ಗುರಿಯನ್ನು ಸಾಧಿಸಲು ಸರ್ಕಾರ ಬದ್ಧವಾಗಿದೆ ಎಂದು ಸಚಿವ ಚಲುವರಾಯಸ್ವಾಮಿ ಅವರು ಹೇಳಿದರು.











