ಬೆಂಗಳೂರು: ರಾಜ್ಯದ ಹಿಂದುಳಿದ ವರ್ಗಗಳ ಸಮಗ್ರ ಅಭಿವೃದ್ಧಿಗೆ ಮಹತ್ವದ ಹೆಜ್ಜೆಯಾಗಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸುಮಾರು 155 ಸಂಘ-ಸಂಸ್ಥೆಗಳಿಗೆ ಒಟ್ಟು ರೂ.71.85 ಕೋಟಿ ವೆಚ್ಚದಲ್ಲಿ ಸಮುದಾಯ ಭವನಗಳು ಹಾಗೂ ವಿದ್ಯಾರ್ಥಿ ನಿಲಯಗಳ ನಿರ್ಮಾಣಕ್ಕೆ ಪೂರ್ವಭಾವಿ ಮಂಜೂರಾತಿ ನೀಡಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಕುರಿತು ಸ್ಪಷ್ಟನೆ ನೀಡಿರುವ ಅವರು, ಇದು ಫಲಾನುಭವಿಗಳ ಅಂತಿಮ ಪಟ್ಟಿ ಅಲ್ಲ ಎಂದು ಹೇಳಿದ್ದಾರೆ. ವಿವಿಧ ಸಂಘ-ಸಂಸ್ಥೆಗಳು ಸಲ್ಲಿಸಿರುವ ಮನವಿಗಳನ್ನು ಪರಿಶೀಲನೆ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಅರ್ಹ ಸಂಸ್ಥೆಗಳಿಗೆ ಅನುದಾನ ಬಿಡುಗಡೆ ಮಾಡುವ ಪ್ರಕ್ರಿಯೆ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.
ಕುರುಬ ಸಮುದಾಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಮನವಿಗಳು ಬಂದಿರುವ ಹಿನ್ನೆಲೆಯಲ್ಲಿ, ಆ ಸಮುದಾಯಕ್ಕೆ ಹೆಚ್ಚಿನ ಅನುದಾನ ಮಂಜೂರಾಗಿದೆ. ಇದರಲ್ಲಿ ಯಾವುದೇ ಉದ್ದೇಶಪೂರ್ವಕ ತಾರತಮ್ಯ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದಲ್ಲದೆ ಮಡಿವಾಳ, ಲಿಂಗಾಯಿತ, ಒಕ್ಕಲಿಗ, ಬೆಸ್ತ, ಬಲಿಜ, ಗೊಲ್ಲ, ಜೆಟ್ಟಿ, ಕುಂಬಾರ, ಅರಸು, ಹೆಳವ, ಸವಿತಾ ಸಮಾಜ, ಉಪ್ಪಾರ, ಗಾಣಿಗ, ಕುರುಹಿನ ಶೆಟ್ಟಿ, ಹಾಲಕ್ಕಿ, ರೆಡ್ಡಿ ಸೇರಿದಂತೆ ಹಲವು ಸಮುದಾಯಗಳಿಗೂ ಸಮುದಾಯ ಭವನ ಹಾಗೂ ವಿದ್ಯಾರ್ಥಿ ನಿಲಯಗಳ ನಿರ್ಮಾಣಕ್ಕೆ ಪೂರ್ವಭಾವಿ ಆದೇಶ ನೀಡಲಾಗಿದೆ.
ಆದರೆ, ಈ ಆದೇಶವು ನೇರ ಅನುದಾನ ಬಿಡುಗಡೆಗೆ ಸಂಬಂಧಿಸಿದುದಲ್ಲ. ಅನುದಾನ ಪಡೆಯಲು ಸಂಬಂಧಿತ ಸಂಘ-ಸಂಸ್ಥೆಗಳು ತಮ್ಮ ಹೆಸರಿನಲ್ಲಿ ಜಮೀನು ಅಥವಾ ನಿವೇಶನ ಹೊಂದಿರುವ ದಾಖಲೆ, ಸ್ಥಳೀಯ ಪುರಸಭೆ ಅಥವಾ ಪಂಚಾಯತಿಯಿಂದ ಕಟ್ಟಡ ಪರವಾನಗಿ, ಹಾಗೂ ಕಳೆದ ಮೂರು ವರ್ಷದ ಆಡಿಟ್ ವರದಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಜಿಲ್ಲಾಧಿಕಾರಿಗಳ ಮುಖಾಂತರ ಇಲಾಖೆಗೆ ಸಲ್ಲಿಸಬೇಕು.
ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳ ಪ್ರಕಾರ, ಅನುದಾನವನ್ನು ಮೂರು ಹಂತಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ. ಕಾಮಗಾರಿಯ ಪ್ರಗತಿಯನ್ನು ಪ್ರತಿವರ್ಷ ಪರಿಶೀಲಿಸಿ, ಅದರ ಆಧಾರದಲ್ಲಿ ಅನುದಾನ ಬಿಡುಗಡೆ ನಡೆಯಲಿದೆ.
ಇದೇ ವೇಳೆ, ಸರ್ಕಾರದ ನಿಯಮಾವಳಿಗಳ ಪ್ರಕಾರ ಪ್ರವರ್ಗ 1 ಮತ್ತು 2A ವರ್ಗಗಳಿಗೆ ಶೇ.70ರಷ್ಟು ಹಾಗೂ ಪ್ರವರ್ಗ 3A ಮತ್ತು 3B ವರ್ಗಗಳಿಗೆ ಶೇ.30ರಷ್ಟು ಅನುದಾನ ಹಂಚಿಕೆ ಮಾಡಲಾಗುತ್ತದೆ. ಪ್ರವರ್ಗ 1 ಮತ್ತು 2A ನಲ್ಲಿ ಹೆಚ್ಚಿನ ಜಾತಿಗಳು ಇರುವುದರಿಂದ, ಕೆಲವು ಸಮುದಾಯಗಳಿಗೆ ಹೆಚ್ಚು ಅನುದಾನ ಲಭಿಸಿರುವುದು ಸಹಜ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಈ ಯೋಜನೆ ಹಿಂದುಳಿದ ವರ್ಗಗಳ ಮೂಲಸೌಕರ್ಯ ಅಭಿವೃದ್ಧಿಗೆ ನೆರವಾಗಲಿದ್ದು, ಶಿಕ್ಷಣ ಮತ್ತು ಸಾಮಾಜಿಕ ಪ್ರಗತಿಗೆ ಉತ್ತೇಜನ ನೀಡಲಿದೆ.











