ತುಮಕೂರು: ಕರ್ನಾಟಕ ರಾಜಕೀಯದ ಹಿರಿಯ ನಾಯಕರು, ಮಾಜಿ ಸಚಿವ ಹಾಗೂ ಮಾಜಿ ಉಪಸಭಾಪತಿ ಸಿ. ವೀರಣ್ಣ (86) ಅವರು ಶುಕ್ರವಾರ ರಾತ್ರಿ (ಜುಲೈ 24, 2026) ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಬುಕ್ಕಾಪಟ್ಟಣದಲ್ಲಿರುವ ತಮ್ಮ ತೋಟದ ಮನೆಯಲ್ಲಿ ನಿಧನರಾದರು. ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಕಳೆದ ಕೆಲವು ತಿಂಗಳುಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ತಿಂಗಳು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಅವರನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದರು. ಆದರೆ ಚೇತರಿಕೆ ಕಾಣದೆ ಸ್ವಗ್ರಾಮಕ್ಕೆ ಕರೆತಂದಿದ್ದ ಅವರು ಕೊನೆಯುಸಿರೆಳೆದರು.
1940ರ ಏಪ್ರಿಲ್ 23ರಂದು ಜನಿಸಿದ ಸಿ. ವೀರಣ್ಣ ವೃತ್ತಿಯಲ್ಲಿ ವಕೀಲರಾಗಿದ್ದು, ನಂತರ ರಾಜಕೀಯಕ್ಕೆ ಪ್ರವೇಶಿಸಿದ್ದರು. ಜನತಾ ಪಕ್ಷದ ಅಭ್ಯರ್ಥಿಯಾಗಿ 1983 ಮತ್ತು 1985ರಲ್ಲಿ ಕೊರಟಗೆರೆ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. 1983ರಲ್ಲಿ ವಿಧಾನಸಭೆಯ ಉಪಸಭಾಧ್ಯಕ್ಷರಾಗಿ (ಡೆಪ್ಯೂಟಿ ಸ್ಪೀಕರ್) ಕಾರ್ಯನಿರ್ವಹಿಸಿದ್ದ ಅವರು, 1984ರಿಂದ 1989ರವರೆಗೆ ರಾಮಕೃಷ್ಣ ಹೆಗಡೆ ಹಾಗೂ ಎಸ್.ಆರ್. ಬೊಮ್ಮಾಯಿ ನೇತೃತ್ವದ ಸರ್ಕಾರಗಳಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಸಾರಿಗೆ, ಸಣ್ಣ ಉಳಿತಾಯ, ಕೈಗಾರಿಕೆ ಮತ್ತು ವಾಣಿಜ್ಯ, ಬಂದೀಖಾನೆ, ಲಾಟರಿ ಸೇರಿದಂತೆ ಹನ್ನೊಂದು ಇಲಾಖೆಗಳ ಜವಾಬ್ದಾರಿ ವಹಿಸಿ ಅತ್ಯಂತ ಸಮರ್ಥವಾಗಿ ನಿರ್ವಹಿಸಿದ್ದರು. ಸಣ್ಣ ಉಳಿತಾಯ ಇಲಾಖೆಯ ಸಚಿವರಾಗಿದ್ದಾಗ ಕರ್ನಾಟಕ ರಾಜ್ಯವನ್ನು ದೇಶದಲ್ಲೇ ಮೊದಲ ಸ್ಥಾನಕ್ಕೆ ಕೊಂಡೊಯ್ದು ರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆಗೆ ಪಾತ್ರರಾಗಿದ್ದರು.
ವಾಲ್ಮೀಕಿ ಸಮುದಾಯದ ಪ್ರಭಾವಿ ನಾಯಕರಾಗಿದ್ದ ವೀರಣ್ಣ ಅವರು ಸಮುದಾಯವನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸುವ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ತಳಸಮುದಾಯಗಳ ಹಕ್ಕುಗಳು, ಅಭಿವೃದ್ಧಿ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ನಿರಂತರವಾಗಿ ಹೋರಾಟ ನಡೆಸಿದ್ದರು. ಸರಳತೆ, ಪ್ರಾಮಾಣಿಕತೆ ಮತ್ತು ಆಡಳಿತ ದಕ್ಷತೆಗೆ ಹೆಸರಾಗಿದ್ದ ಅವರು ಸಕ್ರಿಯ ರಾಜಕಾರಣದಿಂದ ದೂರವಾದ ಬಳಿಕವೂ ಕ್ಷೇತ್ರದ ಜನರೊಂದಿಗೆ ನಿರಂತರ ಸಂಪರ್ಕ ಹೊಂದಿದ್ದರು. ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಅವರ ಮಾವನಾಗಿದ್ದ ವೀರಣ್ಣ ಅವರಿಗೆ ಇಬ್ಬರು ಪುತ್ರರು ಮತ್ತು ಒಬ್ಬ ಪುತ್ರಿ ಇದ್ದಾರೆ.
ಅವರ ನಿಧನದ ಸುದ್ದಿ ತಿಳಿದ ತಕ್ಷಣ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಸೇರಿದಂತೆ ವಿವಿಧ ಪಕ್ಷಗಳ ನಾಯಕರು, ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ತಮ್ಮ ಸಂತಾಪ ಸಂದೇಶದಲ್ಲಿ ಹೇಳಿದ್ದಾರೆ: “ಮಾಜಿ ಸಚಿವರು, ಮಾಜಿ ಉಪಸಭಾಪತಿಗಳು ಹಾಗೂ ಆತ್ಮೀಯರು ಆಗಿದ್ದ ಸಿ. ವೀರಣ್ಣನವರ ನಿಧನದ ಸುದ್ದಿ ಕೇಳಿ ದುಃಖವಾಯಿತು. ರಾಜ್ಯದ ಹಾಗೂ ಶೋಷಿತ ಜನರ ಬಗ್ಗೆ ಸದಾಕಾಲ ಒಳಿತನ್ನೇ ಬಯಸುತ್ತಿದ್ದ ಅವರ ನಿಧನವು ವೈಯಕ್ತಿಕವಾಗಿ ನನಗೆ ಅಪಾರ ನೋವುಂಟುಮಾಡಿದೆ. ಕೊರಟಗೆರೆ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ರಾಮಕೃಷ್ಣ ಹೆಗಡೆ ಹಾಗೂ ಎಸ್.ಆರ್. ಬೊಮ್ಮಾಯಿ ಅವರ ಸರ್ಕಾರದಲ್ಲಿ ವಿವಿಧ ಇಲಾಖೆಗಳ ಜವಾಬ್ದಾರಿ ವಹಿಸಿಕೊಂಡು ಅತ್ಯಂತ ಸಮರ್ಥವಾಗಿ ಅವುಗಳನ್ನು ಮುನ್ನಡೆಸಿದವರು. ವೀರಣ್ಣ ಅವರ ಅಗಲಿಕೆಯಿಂದ ಹಳೆಯ ತಲೆಮಾರಿನ ರಾಜಕೀಯ ಕೊಂಡಿಯೊಂದು ಕಳಚಿದೆ. ವೀರಣ್ಣನವರು ನಮ್ಮೆಲ್ಲರಿಗೂ ಮಾರ್ಗದರ್ಶನ ನೀಡುತ್ತಾ, ಇನ್ನಷ್ಟು ಕಾಲ ನಮ್ಮೊಂದಿಗಿರಬೇಕಿತ್ತು. ತಮ್ಮ ಹೋರಾಟದ ಬದುಕು, ತಳಸಮುದಾಯಗಳ ಬಗೆಗಿನ ಕಾಳಜಿ ಮತ್ತು ಸಾಧನೆಗಳ ಮೂಲಕ ನಮ್ಮ ನಡುವೆ ಅವರ ನೆನಪು ಚಿರಸ್ಥಾಯಿ. ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬವರ್ಗ ಮತ್ತು ಬಂಧು ಮಿತ್ರರಿಗೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.”
ವೀರಣ್ಣ ಅವರ ಅಂತ್ಯಕ್ರಿಯೆ ಶನಿವಾರ (ಜುಲೈ 25) ಸಂಜೆ 4 ಗಂಟೆಗೆ ಬುಕ್ಕಾಪಟ್ಟಣದ ಜಮೀನಿನಲ್ಲಿ ನೆರವೇರಲಿದೆ. ಅವರ ನಿಧನದಿಂದ ವಾಲ್ಮೀಕಿ ಸಮುದಾಯ ಹಾಗೂ ಕರ್ನಾಟಕ ರಾಜಕೀಯಕ್ಕೆ ದೊಡ್ಡ ನಷ್ಟವಾಗಿದೆ ಎಂದು ಸಮುದಾಯದ ನಾಯಕರು ಹಾಗೂ ರಾಜಕೀಯ ವಲಯಗಳು ಅಭಿಪ್ರಾಯಪಟ್ಟಿವೆ.











