ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರೊಂದಿಗೆ ಮಾತುಕತೆ ನಡೆಸಲು ಸಿದ್ಧರಿದ್ದೇವೆ. ಆದರೆ ಪರಿಸ್ಥಿತಿ ಸ್ಪಷ್ಟವಾದ ನಂತರ ಬರುವಂತೆ ಹೇಳಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ನಡೆದ ಸರ್ವಪಕ್ಷ ಸಭೆಯಲ್ಲಿ ಪ್ರಾಸ್ತಾವಿಕ ನುಡಿ ನುಡಿದ ಸಿಎಂ, “ಈಗ ಸಮಾಧಾನದ ಸಂಗತಿ ಎಂದರೆ ಮಳೆ ಚೆನ್ನಾಗಿ ಆಗುತ್ತಿದೆ. ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಾಣಿಸುತ್ತಿವೆ. ನದಿ ನೀರಿನ ಹಂಚಿಕೆ ವಿಚಾರದಲ್ಲಿ ಸೌಹಾರ್ದಯುತ ಸಮಸ್ಯೆ ನಿವಾರಣೆಗೆ ನಮ್ಮ ಆದ್ಯತೆ ಇದೆ” ಎಂದು ಹೇಳಿದರು.
ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಆಗದಂತೆ ನೀರು ಸಂಗ್ರಹಿಸಲಾಗಿದೆ. ಕಬಿನಿ ಜಲಾಶಯ ತುಂಬಿದೆ. ಹೆಚ್ಚುವರಿ ಒಳಹರಿವನ್ನು ಸಂಗ್ರಹಿಸಿ ಇಡಲು ಸಾಧ್ಯವಿಲ್ಲ. ಹೀಗಾಗಿ ಸಹಜ ಹರಿವು ಮಾತ್ರ ಆಗುತ್ತಿದೆ. ಈಗಾಗಲೇ ನಾಲೆಗಳಿಗೆ ನೀರು ಹರಿದಿದ್ದು, ರೈತರಿಗೆ ಅನುಕೂಲವಾಗುತ್ತಿದೆ ಎಂದು ಸಿಎಂ ವಿವರಿಸಿದರು.
ರಾಜಕಾರಣ ಏನೇ ಇದ್ದರೂ, ರಾಜ್ಯ ಮತ್ತು ರೈತರ ಹಿತಕ್ಕಾಗಿ ಎಲ್ಲಾ ಸಂದರ್ಭಗಳಲ್ಲೂ ಒಗ್ಗಟ್ಟಿನಿಂದ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಹೊರಗೆ ಏನೇ ಹೇಳಿಕೆಗಳನ್ನು ನೀಡಿದ್ದರೂ, ರಾಜ್ಯದ ಹಿತಾಸಕ್ತಿಯ ವಿಚಾರದಲ್ಲಿ ಎಲ್ಲರೂ ಸಹಕಾರ ನೀಡುತ್ತಾ ಬಂದಿದ್ದೀರಿ. ಅದಕ್ಕಾಗಿ ಆಭಾರಿ ಎಂದು ಅವರು ಸಂತೋಷ ವ್ಯಕ್ತಪಡಿಸಿದರು.
ಪ್ರಧಾನಮಂತ್ರಿ ಅವರು ಈ ಬಾರಿ ಬರದ ಬಗ್ಗೆ ಮೊದಲೇ ಎಚ್ಚರಿಕೆ ನೀಡಿದ್ದರು. ಅದರಂತೆ ರೈತರಿಗೆ ಕುಡಿಯುವ ನೀರಿಗೆ ಆದ್ಯತೆ, ಬೆಳೆಗೆ ನಂತರದ ಆದ್ಯತೆ ಎಂದು ಹೇಳಲಾಗಿತ್ತು. ರಾಜ್ಯದಲ್ಲಿ ಭೀಕರ ಬರ ಇರುವುದನ್ನು ಗಮನದಲ್ಲಿಟ್ಟುಕೊಂಡು ತಮಿಳುನಾಡು 9.9 ಟಿಎಂಸಿ ನೀರು ಬಿಡಲು ಮನವಿ ಮಾಡಿತ್ತು. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ) ಕೂಡ ಸೂಚನೆ ನೀಡಿತ್ತು. ಇದರ ವಿರುದ್ಧ ಈಗಾಗಲೇ ಮೇಲ್ಮನವಿ ಸಲ್ಲಿಸಲಾಗಿದೆ ಎಂದು ಸಿಎಂ ತಿಳಿಸಿದರು.
ಸಿಡಬ್ಲ್ಯುಆರ್‌ಸಿ ಮತ್ತು ಸಿಡಬ್ಲ್ಯುಎಂಎ ಸಭೆಗಳಿಗೆ ಮೊದಲು ನವದೆಹಲಿಯಲ್ಲಿ ಕೇಂದ್ರ ಸಚಿವರು ಹಾಗೂ ರಾಜ್ಯದ ಸಂಸದರೊಂದಿಗೆ ಸಭೆ ನಡೆಸಲಾಗಿತ್ತು. ಎಲ್ಲರೂ ಆಗಮಿಸಿ ಐಕ್ಯತೆ ತೋರಿಸಿದ್ದರು. ಎಲ್ಲಾ ಸಹದ್ಯೋಗಿಗಳಿಗೆ ಧನ್ಯವಾದಗಳು ಎಂದು ಅವರು ಹೇಳಿದರು.
ಕೇಂದ್ರ ಜಲಸಂಪನ್ಮೂಲ ಸಚಿವ ಸಿ.ಆರ್. ಪಾಟೀಲ್ ಅವರು ಯಾವತ್ತೂ ಹೆಚ್ಚಿನ ಸಹಕಾರ ನೀಡುತ್ತಾ ಬಂದಿದ್ದಾರೆ. ಕೃಷ್ಣಾ ನೀರಿನ ವಿಚಾರದಲ್ಲಿಯೂ ಸಂಪೂರ್ಣ ಸಹಕಾರ, ತುಂಗಭದ್ರಾ ಅಣೆಕಟ್ಟಿನ ಕ್ರೆಸ್ಟ್ ಗೇಟ್ ಹೊಸದಾಗಿ ಅಳವಡಿಕೆ ಮತ್ತು ನವಿಲೆ ಸಮತೋಲನ ಅಣೆಕಟ್ಟು ನಿರ್ಮಾಣಕ್ಕೆ ಸಮ್ಮತಿ, ಕೃಷ್ಣಾ-ಗೋದಾವರಿ-ಕಾವೇರಿ ಜೋಡಣೆ ಹಾಗೂ ಕೃಷ್ಣಾ ನದಿ ನೀರು ಹಂಚಿಕೆಯಲ್ಲಿ ಸಮನ್ವಯಕ್ಕೆ ನೆರವು ನೀಡಿದ್ದಾರೆ ಎಂದು ಸಿಎಂ ಪ್ರಶಂಸಿಸಿದರು.
ವರುಣನ ಕೃಪೆಯಿಂದ ಕೊಡಗು ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ. ಈಗಾಗಲೇ 57 ಟಿಎಂಸಿ ನೀರು ಲಭ್ಯವಿದ್ದು, ಒಳಹರಿವು ಹೆಚ್ಚಾಗಿದೆ. ನಿತ್ಯ 3,500 ಕ್ಯೂಸೆಕ್ ನೀರು ಬಿಡಲು ಆದೇಶವಾಗಿದ್ದು, ಹೆಚ್ಚಿನ ಒಳಹರಿವಿನಿಂದ ಅಣೆಕಟ್ಟುಗಳು ತುಂಬಿ ನೀರು ಹರಿದು ಹೋಗುತ್ತಿದೆ. ನೀರನ್ನು ಹಿಡಿದಿಡಲು ಸಾಧ್ಯವಿಲ್ಲ ಎಂದು ಅವರು ವಿವರಿಸಿದರು.
ಎಲ್ಲಾ ಹಿರಿಯ ನಾಯಕರು ರಾಜ್ಯದ ಹಿತವನ್ನು ಕಾಪಾಡುವ ಒಂದೇ ಉದ್ದೇಶದಿಂದ ಸಭೆಗೆ ಬಂದಿದ್ದೀರಿ. ನಿಮ್ಮ ಮುಕ್ತ ಸಲಹೆಗಳಿಗೆ ಸ್ವಾಗತ. ಕುಡಿಯುವ ನೀರನ್ನು ಸಂಗ್ರಹಿಸುವುದರ ಜೊತೆಗೆ ರೈತರ ಹಿತದೃಷ್ಟಿಯಿಂದಲೂ ಕ್ರಮಕೈಗೊಳ್ಳಲಾಗಿದೆ. ಈಗಾಗಲೇ ಹಾಕಿದ್ದ ಬೆಳೆ ರಕ್ಷಣೆಗಾಗಿ ಕೆಆರ್‌ಎಸ್ ಮತ್ತು ಕಬಿನಿ ನಾಲೆಗಳಿಗೆ ನೀರು ಹರಿಸಲಾಗಿದೆ ಎಂದು ಸಿಎಂ ಹೇಳಿದರು.











