ಬರ, ಬಿಡದಿ ಟೌನ್‌ಶಿಪ್, ನೈಸ್ ಯೋಜನೆ, ಕೆಪಿಎಸ್‌ಸಿ ಹಗರಣಗಳ ಬಗ್ಗೆ ಸದನದಲ್ಲಿ ಹೋರಾಟಕ್ಕೆ ಕುಮಾರಸ್ವಾಮಿ ನಿರ್ದೇಶನ; ಎನ್‌ಡಿಎ ಮಿತ್ರಪಕ್ಷಗಳ ಒಗ್ಗಟ್ಟಿಗೆ ಒತ್ತು
ಮೈಸೂರು: ಮುಂಬರುವ ವಿಧಾನಮಂಡಲ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಭಾರಿ ಕೈಗಾರಿಕೆಗಳು ಮತ್ತು ಉಕ್ಕು ಸಚಿವರು ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಶನಿವಾರ ಮೈಸೂರಿನಲ್ಲಿ ಪಕ್ಷದ ಶಾಸಕಾಂಗ ಪಕ್ಷದ ಸಭೆ ನಡೆಸಿದರು. ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಪರ ವಿಷಯಗಳನ್ನು ಸದನದಲ್ಲಿ ತೀವ್ರವಾಗಿ ಪ್ರಶ್ನಿಸುವಂತೆ ಶಾಸಕರಿಗೆ ಸ್ಪಷ್ಟ ನಿರ್ದೇಶನ ನೀಡಿದರು.
ಸಭೆಯಲ್ಲಿ ಮಾತನಾಡಿದ ಕುಮಾರಸ್ವಾಮಿ, ರಾಜ್ಯದಲ್ಲಿ ಉಂಟಾಗಿರುವ ಬರಗಾಲದ ನಿರ್ವಹಣೆಯಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿ, ಈ ಬಗ್ಗೆ ಸದನದಲ್ಲಿ ದನಿ ಎತ್ತುವಂತೆ ಶಾಸಕರಿಗೆ ಸೂಚಿಸಿದರು. ರೈತರ ಹಿತಕ್ಕೆ ವಿರುದ್ಧವಾಗಿ ರೂಪಿಸಲಾಗಿರುವ ಅವೈಜ್ಞಾನಿಕ ಬಿಡದಿ ಟೌನ್‌ಶಿಪ್ ಯೋಜನೆಯ ವಿರುದ್ಧವೂ ಹೋರಾಟ ನಡೆಸಬೇಕು ಎಂದು ಹೇಳಿದರು. ಈ ಯೋಜನೆಯಿಂದ ಸಾವಿರಾರು ಎಕರೆ ಫಲವತ್ತಾದ ಭೂಮಿ ರೈತರು ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಪಕ್ಷ ರೈತರ ಪರವಾಗಿ ದೃಢವಾಗಿ ನಿಲ್ಲಬೇಕು ಎಂದು ಅವರು ಒತ್ತಿ ಹೇಳಿದರು.

ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್ (ನೈಸ್/ಬಿಎಂಐಸಿ) ಯೋಜನೆಯ ಬಗ್ಗೆಯೂ ಸದನದಲ್ಲಿ ಪ್ರಶ್ನೆ ಎತ್ತಬೇಕು ಎಂದು ಸೂಚಿಸಿದರು. ರಸ್ತೆ ನಿರ್ಮಾಣಕ್ಕಾಗಿ ಪಡೆದ ಭೂಮಿಯನ್ನು ರಿಯಲ್ ಎಸ್ಟೇಟ್ ಉದ್ದೇಶಕ್ಕೆ ಬಳಸುತ್ತಿರುವುದಾಗಿ ಆರೋಪಿಸಿ, ಸಾವಿರಾರು ರೈತರಿಗೆ ಇನ್ನೂ ಪರಿಹಾರ ದೊರೆತಿಲ್ಲ ಎಂದು ತಿಳಿಸಿದರು. ಇತ್ತೀಚೆಗೆ ರಾಜ್ಯ ಹೈಕೋರ್ಟ್ ಈ ಯೋಜನೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ ಎಂದು ನೆನಪಿಸಿದರು.
ಇದಲ್ಲದೆ, ಕೆಪಿಎಸ್‌ಸಿ ಅಕ್ರಮಗಳು, ಪೊಲೀಸ್ ನೇಮಕಾತಿಯಲ್ಲಿನ ಅಕ್ರಮಗಳು, ವಾಲ್ಮೀಕಿ ಹಗರಣ, ಬೆಂಗಳೂರಿನಲ್ಲಿ ಅಸಮರ್ಪಕ ಕಸ ವಿಲೇವಾರಿ ಸೇರಿದಂತೆ ರಾಜ್ಯದ ಜನತೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವಂತೆ ಶಾಸಕರಿಗೆ ಹೇಳಿದರು. ಪ್ರಶ್ನೋತ್ತರ ಕಲಾಪವನ್ನು ಸದ್ಬಳಕೆ ಮಾಡಿಕೊಳ್ಳಿ, ಕ್ಷೇತ್ರದ ಸಮಸ್ಯೆಗಳನ್ನು ನೇರವಾಗಿ ಮತ್ತು ದೃಢವಾಗಿ ಪ್ರಸ್ತಾಪಿಸಿ ಎಂದು ಸಲಹೆ ನೀಡಿದರು.
ಇಂದು ಬೆಳಿಗ್ಗೆ ಬೆಂಗಳೂರಿನಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಹಿರಿಯ ನಾಯಕರ ಸಭೆ ನಡೆದು, ಮುಂಬರುವ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಜಂಟಿ ಹೋರಾಟದ ಕುರಿತು ವಿಸ್ತೃತ ಚರ್ಚೆ ನಡೆದಿದೆ. ಎನ್‌ಡಿಎ ಮಿತ್ರಪಕ್ಷಗಳು ಒಮ್ಮತದಿಂದ ಸದನದಲ್ಲಿ ಸರ್ಕಾರದ ವಿರುದ್ಧ ದನಿ ಎತ್ತಬೇಕು. ಜನಪರ ವಿಷಯಗಳಲ್ಲಿ ಯಾವುದೇ ರಾಜಿ ಬೇಡ. ಎಲ್ಲರೂ ಒಟ್ಟಾಗಿ ಹೋರಾಟ ನಡೆಸಿ ಎಂದು ಕುಮಾರಸ್ವಾಮಿ ಸೂಚಿಸಿದರು.
ಸಭೆಯಲ್ಲಿ ಜೆಡಿಎಸ್ ವಿಧಾನಸಭಾ ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್ ಬಾಬು, ಮಾಜಿ ಸಚಿವ ಹೆಚ್.ಡಿ. ರೇವಣ್ಣ, ಎ. ಮಂಜು, ಸಿ.ಎನ್. ಬಾಲಕೃಷ್ಣ, ವೆಂಕಟಶಿವಾರೆಡ್ಡಿ, ಹನೂರು ಮಂಜುನಾಥ್, ಸಮೃದ್ಧಿ ಮಂಜುನಾಥ್, ಎಂ.ಟಿ. ಕೃಷ್ಣಪ್ಪ, ಶರಣಗೌಡ ಕಂದಕೂರ, ಕರೆಮ್ಮ ನಾಯಕ, ಹೆಚ್.ಟಿ. ಮಂಜುನಾಥ್, ಜಿ.ಡಿ. ಹರೀಶ್ ಗೌಡ, ಸ್ವರೂಪ ಪ್ರಕಾಶ್ ಹಾಗೂ ವಿಧಾನ ಪರಿಷತ್ ಸದಸ್ಯರಾದ ಮಂಜೇಗೌಡ, ರವಿಕುಮಾರ್, ನೇಮಿರಾಜ ನಾಯಕ ಸೇರಿದಂತೆ ಪಕ್ಷದ ಎಲ್ಲಾ ಶಾಸಕರು ಭಾಗವಹಿಸಿದ್ದರು.
ಬಿಡದಿ ಟೌನ್‌ಶಿಪ್ ವಿರೋಧಿ ಹೋರಾಟವು ರೈತರ ನಡುವೆ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಈ ಸಭೆ ಮಹತ್ವದ್ದಾಗಿದೆ. ಎನ್‌ಡಿಎ ಮಿತ್ರಪಕ್ಷಗಳು ಸದನದಲ್ಲಿ ಸಮನ್ವಯದಿಂದ ಕಾರ್ಯನಿರ್ವಹಿಸುವ ನಿರ್ಧಾರವನ್ನು ಬಲಪಡಿಸಿರುವುದು ಗಮನಾರ್ಹ.











