ಅರಸೀಕೆರೆ: ಹಾಸನ ಜಿಲ್ಲಾ ಕೇಂದ್ರದಿಂದ ಸುಮಾರು 50 ಕಿಲೋಮೀಟರ್ ದೂರದಲ್ಲಿರುವ ಅರಸೀಕೆರೆ ಜಿಲ್ಲಾ ಕೇಂದ್ರವಾಗಿ ಹೊರಹೊಮ್ಮಲು ಅಗತ್ಯವಾದ ಎಲ್ಲ ಅರ್ಹತೆಗಳನ್ನು ಹೊಂದಿದೆ. ಸುಸಜ್ಜಿತ ನ್ಯಾಯಾಲಯ ಸಂಕೀರ್ಣವೂ ನಿರ್ಮಾಣವಾಗಿರುವುದರಿಂದ ಅರಸೀಕೆರೆಯಲ್ಲೇ ಜಿಲ್ಲಾ ನ್ಯಾಯಾಲಯವನ್ನು ಮಂಜೂರು ಮಾಡಬೇಕು ಎಂದು ಅಬಕಾರಿ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಮನವಿ ಮಾಡಿದರು.
ನೂತನ ನ್ಯಾಯಾಲಯ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಚಿವರು, ಜಿಲ್ಲಾ ನ್ಯಾಯಾಲಯ ಸ್ಥಾಪನೆ ತಾಲೂಕಿನ ಜನತೆಯ ಬಹುದಿನದ ಬೇಡಿಕೆಯಾಗಿದೆ ಎಂದು ಹೇಳಿದರು. ಜಿಲ್ಲಾ ನ್ಯಾಯಾಲಯಕ್ಕೆ ಅಗತ್ಯವಿರುವ ಹೆಚ್ಚುವರಿ ಮೂಲಸೌಕರ್ಯ ಮತ್ತು ಅನುದಾನವನ್ನು ಸರ್ಕಾರದಿಂದ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳು ಅರಸೀಕೆರೆಯಲ್ಲಿ ಜಿಲ್ಲಾ ನ್ಯಾಯಾಲಯ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.

ಅರಸೀಕೆರೆ ತಾಲೂಕಿನ ಅಭಿವೃದ್ಧಿ ಕುರಿತು ವಿವರಿಸಿದ ಸಚಿವರು, ನೀರಾವರಿ ಮತ್ತು ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಹಲವು ಯೋಜನೆಗಳನ್ನು ಕೈಗೊಳ್ಳಲಾಗಿದೆ ಎಂದರು. ಸುಮಾರು 16 ಕೆರೆಗಳಿಗೆ ನೀರು ಒದಗಿಸಲಾಗಿದ್ದು, ಕಣಕಟ್ಟೆ ಹೋಬಳಿಯ 10ರಿಂದ 12 ಕೆರೆಗಳಿಗೆ ನೀರು ತುಂಬಿಸಲಾಗಿದೆ. ಗಂಡಸಿ ಹೋಬಳಿಯ ಕೆರೆಗಳಿಗೆ ಹೇಮಾವತಿ ನೀರು ತುಂಬಿಸುವ ಸುಮಾರು ₹200 ಕೋಟಿ ಅಂದಾಜಿನ ಯೋಜನೆ ಮಂಜೂರಾಗಿದೆ. ಬಾಣಾವಾರ ಹೋಬಳಿಯ ಕೆರೆಗಳಿಗೆ ಭದ್ರಾ ಮೇಲ್ದಂಡೆ ಯೋಜನೆಯಿಂದ ನೀರು ಒದಗಿಸುವ ಕಾರ್ಯವೂ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಅರಸೀಕೆರೆ ನಗರ ಸೇರಿದಂತೆ ತಾಲೂಕಿನ 549 ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಮಹತ್ವದ ಯೋಜನೆ ಅನುಷ್ಠಾನಗೊಂಡಿದೆ. ಗ್ರಾಮಗಳಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೂ ಆದ್ಯತೆ ನೀಡಲಾಗಿದೆ. ನಗರದಲ್ಲಿ ವಿವಿಧ ಸಮುದಾಯಗಳಿಗೆ ಸುಮಾರು 50 ಸಮುದಾಯ ಭವನಗಳನ್ನು ನಿರ್ಮಿಸಲಾಗಿದೆ. ಮಹಿಳೆಯರು ಉದ್ಯೋಗಕ್ಕಾಗಿ ಬೆಂಗಳೂರಿಗೆ ವಲಸೆ ಹೋಗುವುದನ್ನು ತಪ್ಪಿಸಲು ಗಾರ್ಮೆಂಟ್ಸ್ ಘಟಕಗಳನ್ನು ಸ್ಥಾಪಿಸಲಾಗಿದ್ದು, ಪ್ರಸ್ತುತ ಸುಮಾರು 10ರಿಂದ 15 ಸಾವಿರ ಮಹಿಳೆಯರು ಸ್ಥಳೀಯವಾಗಿಯೇ ಉದ್ಯೋಗ ಪಡೆದಿದ್ದಾರೆ ಎಂದು ಹೇಳಿದರು.

ಅರಸೀಕೆರೆ ಐತಿಹಾಸಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕವಾಗಿಯೂ ವಿಶೇಷ ಸ್ಥಾನ ಹೊಂದಿದೆ. ಕಸ್ತೂರಬಾ ಟ್ರಸ್ಟ್ ಆವರಣದಲ್ಲಿರುವ ಮಹಾತ್ಮ ಗಾಂಧೀಜಿಯವರ ಚಿತಾಭಸ್ಮದ ಮಂಟಪ, ಮಾಲೇಕಲ್ ತಿರುಪತಿ, ಕೋಡಿಮಠ ಸೇರಿದಂತೆ ಹಲವು ಪ್ರಮುಖ ತಾಣಗಳು ತಾಲೂಕಿನ ಹಿರಿಮೆಯನ್ನು ಹೆಚ್ಚಿಸಿವೆ. ಶಿಕ್ಷಣಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಬೆಟ್ಟ-ಗುಡ್ಡ ಪ್ರದೇಶಗಳಲ್ಲಿ ಏಳರಿಂದ ಎಂಟು ವಸತಿ ಶಾಲೆಗಳನ್ನು ಆರಂಭಿಸಲಾಗಿದೆ ಎಂದರು.
ನೂತನ ನ್ಯಾಯಾಲಯ ಸಂಕೀರ್ಣದ ನಿರ್ಮಾಣದ ಹಿನ್ನೆಲೆ ವಿವರಿಸಿದ ಶಿವಲಿಂಗೇಗೌಡ, 2016ರಲ್ಲಿ ಕಟ್ಟಡಕ್ಕೆ ಆರಂಭಿಕವಾಗಿ ₹13 ಕೋಟಿ ಮಂಜೂರಾಗಿತ್ತು. ವಿವಿಧ ಕಾರಣಗಳು ಹಾಗೂ ಕೋವಿಡ್‌ನಿಂದ ಕಾಮಗಾರಿ ವಿಳಂಬವಾದರೂ ನಂತರ ಹೆಚ್ಚುವರಿ ಅನುದಾನ ಪಡೆದು ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಪೀಠೋಪಕರಣಗಳಿಗಾಗಿ ಸುಮಾರು ₹5 ಕೋಟಿ ಒದಗಿಸಲಾಗಿದ್ದು, ವಕೀಲರ ಬೇಡಿಕೆಯಂತೆ ಕಚೇರಿಯಿಂದ ನ್ಯಾಯಾಲಯಕ್ಕೆ ಸಂಪರ್ಕ ಕಲ್ಪಿಸುವ ವಾಕ್‌ವೇ ಕೂಡ ನಿರ್ಮಿಸಲಾಗಿದೆ ಎಂದು ತಿಳಿಸಿದರು.

ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಸಹಕರಿಸಿದ ನ್ಯಾಯಮೂರ್ತಿಗಳು, ಸರ್ಕಾರ, ಅಧಿಕಾರಿಗಳು, ವಕೀಲರ ಸಂಘ ಹಾಗೂ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ ಅವರು, “ಅರಸೀಕೆರೆಯ ಸಮಗ್ರ ಬೆಳವಣಿಗೆಗೆ ಪೂರಕವಾಗಿ ಇಲ್ಲಿಯೇ ಜಿಲ್ಲಾ ನ್ಯಾಯಾಲಯವನ್ನು ಮಂಜೂರು ಮಾಡಬೇಕು” ಎಂದು ಮತ್ತೊಮ್ಮೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಹಾಸನ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶ ಅಶೋಕ್ ಎಸ್. ಕಿಣಗಿ, ನ್ಯಾಯಮೂರ್ತಿ ಎಚ್.ಪಿ. ಸಂದೇಶ್, ಹಾಸನ ಜಿಲ್ಲಾ ಪ್ರಧಾನ ನ್ಯಾಯಾಧೀಶರಾದ ಹೇಮಾವತಿ, ಅಧಿಕಾರಿಗಳು ಹಾಗೂ ವಕೀಲರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸರ್ಕಾರಿ ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದಿಂದ ಸಚಿವರಿಗೆ ಅಭಿನಂದನೆ
ಅರಸೀಕೆರೆ ವೆಂಕಟೇಶ್ವರ ಕಲಾ ಭವನದಲ್ಲಿ ಸರ್ಕಾರಿ ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ವತಿಯಿಂದ ನಡೆದ ಸಮಾರಂಭದಲ್ಲಿ ಅಬಕಾರಿ ಸಚಿವರು ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಂ. ಶಿವಲಿಂಗೇಗೌಡ ಅವರು ಅಭಿನಂದನೆ ಸ್ವೀಕರಿಸಿದರು. ಬಳಿಕ ಮಾತನಾಡಿದ ಶಿವಲಿಂಗೇಗೌಡ ಅವರು, ಬಡವರಿಗಾಗಿ ಜಾರಿ ಮಾಡಿರುವ ಗ್ಯಾರಂಟಿ ಕಾರ್ಯಕ್ರಮಗಳನ್ನು ಸ್ವಾಗತಿಸಬೇಕು. ವಿಪಕ್ಷಗಳು ಹೇಳುವಂತೆ ಗ್ಯಾರಂಟಿ ಯೋಜನೆಗಳಿಂದ ದೇಶ ಹಾಳಾಗುತ್ತಿಲ್ಲ. ಅವರು ಅಧಿಕಾರದಲ್ಲಿರುವ ರಾಜ್ಯಗಳಲ್ಲಿಯೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತಿದ್ದಾರೆ. ಅವರ ಆರೋಪಕ್ಕೆ ಯಾರೂ ಕಿವಿಗೊಡಬಾರದು ಎಂದರು.











