ಬೆಂಗಳೂರು: ಕರ್ನಾಟಕದಲ್ಲಿ ಹೂಡಿಕೆ, ಉದ್ಯಮ ವಿಸ್ತರಣೆ ಮತ್ತು ತಂತ್ರಜ್ಞಾನ ಸಹಕಾರಕ್ಕೆ ಹೆಚ್ಚಿನ ಅವಕಾಶಗಳಿವೆ ಎಂದು ದಕ್ಷಿಣ ಕೊರಿಯಾದ ಪ್ರಮುಖ ಉದ್ಯಮ ಹಾಗೂ ಬಂಡವಾಳ ಹೂಡಿಕೆ ಸಂಸ್ಥೆಗಳ ನಿಯೋಗವು ಗೃಹ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ಅವರೊಂದಿಗೆ ನಡೆದ ಸಭೆಯಲ್ಲಿ ಚರ್ಚಿಸಲಾಯಿತು.
ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ಡಿಎಸ್‌ಸಿ ಇನ್ವೆಸ್ಟ್‌ಮೆಂಟ್, ಜಿಎಸ್ ವೆಂಚರ್ಸ್, ಸಿಜೆ ಇನ್ವೆಸ್ಟ್‌ಮೆಂಟ್, ಕ್ಯಾಪ್‌ಸ್ಟೋನ್ ಪಾರ್ಟ್ನರ್ಸ್, ಸಿಜೆ ಚೆಲ್‌ಜೆಡಾಂಗ್ ಮತ್ತು ಗೋ ಪಿಜ್ಜಾ ಸಂಸ್ಥೆಗಳ ಹಿರಿಯ ಪ್ರತಿನಿಧಿಗಳು ಭಾಗವಹಿಸಿದ್ದರು.

ಸಭೆಯಲ್ಲಿ ಕೃತಕ ಬುದ್ಧಿಮತ್ತೆ, ಆಳ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿದ್ಯುನ್ಮಾನ, ಅರೆವಾಹಕ, ವಿಮಾನಯಾನ ಮತ್ತು ಬಾಹ್ಯಾಕಾಶ ತಂತ್ರಜ್ಞಾನ, ಹವಾಮಾನ ತಂತ್ರಜ್ಞಾನ ಹಾಗೂ ಆಹಾರ ತಂತ್ರಜ್ಞಾನ ಸೇರಿದಂತೆ ವಿವಿಧ ಉದಯೋನ್ಮುಖ ಕ್ಷೇತ್ರಗಳಲ್ಲಿ ಕರ್ನಾಟಕದಲ್ಲಿರುವ ಹೂಡಿಕೆ ಅವಕಾಶಗಳ ಕುರಿತು ವಿವರವಾಗಿ ಚರ್ಚಿಸಲಾಯಿತು. ಕೊರಿಯಾ ಹೂಡಿಕೆದಾರರು ಮತ್ತು ಕರ್ನಾಟಕದ ನವೋದ್ಯಮಗಳ ನಡುವೆ ನೇರ ಸಂಪರ್ಕ ಕಲ್ಪಿಸುವುದು, ಕಾರ್ಯತಂತ್ರದ ಹೂಡಿಕೆ ಮತ್ತು ತಂತ್ರಜ್ಞಾನ ಸಹಭಾಗಿತ್ವಕ್ಕೆ ಅವಕಾಶಗಳನ್ನು ವಿಸ್ತರಿಸುವ ಬಗ್ಗೆಯೂ ಮಾತುಕತೆ ನಡೆಯಿತು.
ವಿಶೇಷವಾಗಿ ಸಿಜೆ ಚೆಲ್‌ಜೆಡಾಂಗ್ ಸಂಸ್ಥೆಯೊಂದಿಗೆ ಆಹಾರ ನಾವೀನ್ಯತೆ, ಜೈವಿಕ ತಂತ್ರಜ್ಞಾನ, ಹುದುಗಿಸುವಿಕೆ ತಂತ್ರಜ್ಞಾನ, ಪೌಷ್ಟಿಕಾಂಶ, ಆಹಾರ ತಂತ್ರಜ್ಞಾನ, ಕೃಷಿ ತಂತ್ರಜ್ಞಾನ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರಗಳಲ್ಲಿ ಸಹಕಾರದ ಸಾಧ್ಯತೆಗಳನ್ನು ಪರಿಶೀಲಿಸಲಾಯಿತು. ಕರ್ನಾಟಕ–ದಕ್ಷಿಣ ಕೊರಿಯಾ ನಡುವಿನ ಜಾಗತಿಕ ನಾವೀನ್ಯತಾ ಮೈತ್ರಿ ಸಹಕಾರವನ್ನು ಮತ್ತಷ್ಟು ಬಲಪಡಿಸುವುದು ಮತ್ತು ಕರ್ನಾಟಕದ ನವೋದ್ಯಮಗಳಿಗೆ ಕೊರಿಯಾದಲ್ಲಿ ಮಾರುಕಟ್ಟೆ ಹಾಗೂ ಹೂಡಿಕೆ ಅವಕಾಶಗಳನ್ನು ವಿಸ್ತರಿಸುವ ಬಗ್ಗೆಯೂ ಚರ್ಚೆ ನಡೆಯಿತು.
ಮುಂಬರುವ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯಲ್ಲಿ ಹೆಚ್ಚಿನ ಕೊರಿಯಾ ಹೂಡಿಕೆದಾರರು ಮತ್ತು ನವೋದ್ಯಮಗಳ ಭಾಗವಹಿಸುವಿಕೆ, ವಿಶೇಷ ಅಧಿವೇಶನಗಳು, ಉದ್ಯಮ–ಉದ್ಯಮ ಸಂವಾದಗಳು ಹಾಗೂ ತಂತ್ರಜ್ಞಾನ ಪ್ರದರ್ಶನಗಳನ್ನು ಹೆಚ್ಚಿಸುವ ಸಾಧ್ಯತೆಗಳ ಕುರಿತು ಕೂಡ ಸಭೆಯಲ್ಲಿ ಚರ್ಚಿಸಲಾಯಿತು.











