ದೈಹಿಕ ಸಾಮರ್ಥ್ಯ, ಮನೋಬಲ ಹಾಗೂ ಶಿಸ್ತಿನ ಅಪರೂಪದ ಸಾಧನೆಗೆ ಮೆಚ್ಚುಗೆ
ಬೆಂಗಳೂರು: ಜಮ್ಮು-ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೈಕಲ್ ಮೂಲಕ ಯಶಸ್ವಿಯಾಗಿ ಪ್ರಯಾಣಿಸಿ ಅಪರೂಪದ ಸಾಧನೆ ಮಾಡಿದ ಪ್ರಸಿದ್ಧ ಉದ್ಯಮಿ ಸತ್ವೀರ್ ರೊಟ್ಟಿ ಹಾಗೂ ಅವರ ಮಕ್ಕಳಾದ ವಿನಯ್ ರೊಟ್ಟಿ ಮತ್ತು ಸುಮಂತ್ ರೊಟ್ಟಿ ಅವರನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರಾದ ಅನುಚೇತ್, ಐಪಿಎಸ್ ಅವರು ರೊಟ್ಟಿ ಕುಟುಂಬದ ಸಾಧಕರನ್ನು ಸನ್ಮಾನಿಸಿ, ಅವರ ಸಾಹಸಯಾತ್ರೆಗೆ ಅಭಿನಂದನೆ ಸಲ್ಲಿಸಿದರು. ದೇಶದ ಉತ್ತರ ಭಾಗದಿಂದ ದಕ್ಷಿಣ ತುದಿಯವರೆಗೆ ಸೈಕಲ್ ಮೂಲಕ ಕ್ರಮಿಸುವುದು ದೈಹಿಕ ಸಾಮರ್ಥ್ಯದ ಜತೆಗೆ ಅಪಾರವಾದ ಮಾನಸಿಕ ದೃಢತೆ, ನಿರಂತರ ಪರಿಶ್ರಮ, ಶಿಸ್ತು ಮತ್ತು ಆತ್ಮವಿಶ್ವಾಸವನ್ನು ಬೇಡುತ್ತದೆ. ರೊಟ್ಟಿ ಕುಟುಂಬ ಈ ಸವಾಲನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದು ಗಮನಾರ್ಹ ಸಾಧನೆಯಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸೈಕಲ್ ಯಾತ್ರೆಯ ಮೂಲಕ ರೊಟ್ಟಿ ಕುಟುಂಬವು ದೇಶದ ವೈವಿಧ್ಯಮಯ ಭೌಗೋಳಿಕ ಪರಿಸರವನ್ನು ಸೈಕಲ್‌ನಲ್ಲಿ ಕ್ರಮಿಸುವ ಸಾಹಸ ಮೆರೆದಿದ್ದು, ಆರೋಗ್ಯಕರ ಜೀವನಶೈಲಿ ಮತ್ತು ದೈಹಿಕ ಕ್ಷಮತೆಯ ಮಹತ್ವವನ್ನು ಸಾರಿದೆ.
ಇಂತಹ ಸಾಹಸಿಕ ಕ್ರೀಡಾ ಚಟುವಟಿಕೆಗಳು ಯುವಜನರಲ್ಲಿ ಸೈಕ್ಲಿಂಗ್, ದೈಹಿಕ ಫಿಟ್‌ನೆಸ್ ಹಾಗೂ ಕ್ರೀಡಾ ಚಟುವಟಿಕೆಗಳತ್ತ ಆಸಕ್ತಿ ಬೆಳೆಸುವ ಜತೆಗೆ, ಸವಾಲುಗಳನ್ನು ಎದುರಿಸುವ ಮನೋಭಾವ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಲು ಪ್ರೇರಣೆಯಾಗಲಿವೆ ಎಂದು ಆಯುಕ್ತ ಅನುಚೇತ್ ಅಭಿಪ್ರಾಯಪಟ್ಟರು.
ಕ್ರೀಡೆ ಕೇವಲ ಸ್ಪರ್ಧೆ ಮತ್ತು ಪದಕಗಳಿಗೆ ಸೀಮಿತವಾಗದೆ, ಆರೋಗ್ಯಕರ ಬದುಕು, ಶಿಸ್ತು, ಮಾನಸಿಕ ಸ್ಥೈರ್ಯ ಹಾಗೂ ಸಾಮಾಜಿಕ ಜವಾಬ್ದಾರಿಯನ್ನೂ ಬೆಳೆಸುವ ಪ್ರಮುಖ ಸಾಧನವಾಗಿದೆ. ಈ ಹಿನ್ನೆಲೆಯಲ್ಲಿ ರೊಟ್ಟಿ ಕುಟುಂಬದ ಸೈಕಲ್ ಯಾತ್ರೆ ಯುವಜನತೆಗೆ ಮಾದರಿಯಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಕ್ರೀಡಾ ಇಲಾಖೆಯ ಜಂಟಿ ನಿರ್ದೇಶಕ ಜಿತೇಂದ್ರ ಶೆಟ್ಟಿ ಹಾಗೂ ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಡಾ. ಗಿರೀಶ್ ಎಲ್.ಪಿ. ಸೇರಿದಂತೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.











