ಜಾಲಹಳ್ಳಿ ಕಾರ್ಖಾನೆ ಮುಂದೆ ಬಿಸಿಲನ್ನು ಲೆಕ್ಕಿಸದೆ ನಿಂತ ಜನತೆ; ಒಂದೇ ದಿನ 2,000ಕ್ಕೂ ಹೆಚ್ಚು ವಾಚ್‌ಗಳು ಮಾರಾಟ
ಬೆಂಗಳೂರು: 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಹಿಂದೂಸ್ತಾನ್ ಮಷಿನ್ ಟೂಲ್ಸ್ (ಹೆಚ್‌ಎಂಟಿ) ಬಿಡುಗಡೆ ಮಾಡಿದ ವಿಶೇಷ ಸೀಮಿತ ಸರಣಿ ಕೈಗಡಿಯಾರಗಳ ಖರೀದಿಗೆ ಬೆಂಗಳೂರಿನ ಜಾಲಹಳ್ಳಿ ಕಾರ್ಖಾನೆ ಮಳಿಗೆ ಮುಂದೆ ಸುಮಾರು ಎರಡು ಕಿಲೋಮೀಟರ್ ಉದ್ದದ ಸರತಿ ಸಾಲು ಕಂಡುಬಂದಿದೆ. ಬಿಸಿಲನ್ನು ಲೆಕ್ಕಿಸದೆ ಎಲ್ಲ ವಯೋಮಾನದ ಗ್ರಾಹಕರು ಮುಗಿಬಿದ್ದು, ಹೆಚ್‌ಎಂಟಿ ಬ್ರ್ಯಾಂಡ್‌ನ ಮೇಲಿನ ಅಭಿಮಾನ ಮತ್ತು ಭಾವನಾತ್ಮಕ ಸಂಪರ್ಕವನ್ನು ಮತ್ತೆ ದೃಢಪಡಿಸಿದ್ದಾರೆ.
‘ಭಾರತದ ಕಾಲಪಾಲಕ’ ಎಂದೇ ಖ್ಯಾತವಾದ ಹೆಚ್‌ಎಂಟಿ ಒಂದು ಕಾಲದಲ್ಲಿ ದೇಶದ ಹೆಮ್ಮೆಯ ವಾಚ್ ಬ್ರ್ಯಾಂಡ್ ಆಗಿತ್ತು. ಇಂದಿಗೂ ಅದರ ಕ್ರೇಜ್ ಕಡಿಮೆಯಾಗಿಲ್ಲ ಎಂಬುದಕ್ಕೆ ಶನಿವಾರದ ದೃಶ್ಯಗಳೇ ಸಾಕ್ಷಿ. ನಗರದಲ್ಲಿ ಮೂರು ಮಳಿಗೆಗಳಿದ್ದು, ಪ್ರಮುಖವಾಗಿ ಜಾಲಹಳ್ಳಿ ಮತ್ತು ಮೇಕ್ರಿ ಸರ್ಕಲ್ ಬಳಿಯ ಹೆಚ್‌ಎಂಟಿ ಭವನದ ಮಳಿಗೆಗಳಲ್ಲಿ ಎಲ್ಲ ವಾಚ್‌ಗಳು ಒಂದೇ ದಿನಕ್ಕೆ ಖಾಲಿಯಾದವು. ಮಧ್ಯಾಹ್ನ 1 ಗಂಟೆಯ ವೇಳೆಗೆ 2,000ಕ್ಕೂ ಹೆಚ್ಚು ಗಡಿಯಾರಗಳು ಮಾರಾಟವಾಗಿದ್ದವು.

ತ್ರಿವರ್ಣ ಧ್ವಜ ಹೊಂದಿದ ವಿಶೇಷ ವಾಚ್‌ಗಳು ಹಾಗೂ ಕರ್ನಾಟಕದ ರಾಜ್ಯ ಚಿಹ್ನೆಯಾದ ಗಂಡಭೇರುಂಡ ಮತ್ತು ಕನ್ನಡ ಅಂಕಿಗಳಿರುವ ಆವೃತ್ತಿಗಳು ಸಂಪೂರ್ಣವಾಗಿ ಮಾರಾಟವಾಗಿವೆ. ಗಂಡಭೇರುಂಡ ಆವೃತ್ತಿಗೆ ಬೇಡಿಕೆ ವಿಶೇಷವಾಗಿ ಹೆಚ್ಚಾಗಿತ್ತು ಎಂದು ಕಂಪನಿ ಸಿಬ್ಬಂದಿ ತಿಳಿಸಿದ್ದಾರೆ. ಹೆಚ್‌ಎಂಟಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಮೇಶ್ ಅವರು, “ಸ್ವಾತಂತ್ರ್ಯ ದಿನದ ಶುಭ ಸಂದರ್ಭದಲ್ಲಿ ಸೀಮಿತ ಸರಣಿ ಬಿಡುಗಡೆ ಮಾಡಲಾಗಿತ್ತು. ತ್ರಿವರ್ಣ ಮತ್ತು ಗಂಡಭೇರುಂಡ ವಾಚ್‌ಗಳು ಸಂಪೂರ್ಣ ಮಾರಾಟವಾಗಿವೆ. ಮುಂದಿನ ತಿಂಗಳ ಅಂತ್ಯದ ವೇಳೆಗೆ ಹೆಚ್ಚುವರಿ ಸ್ಟಾಕ್ ಮತ್ತು ಉತ್ತಮ ಗುಣಮಟ್ಟದ ಆಟೋಮ್ಯಾಟಿಕ್ ವಾಚ್‌ಗಳನ್ನು ಬಿಡುಗಡೆ ಮಾಡಲಾಗುವುದು” ಎಂದು ಹೇಳಿದ್ದಾರೆ. ಸರತಿಯಲ್ಲಿ ನಿಂತ ಗ್ರಾಹಕರನ್ನು ವೈಯಕ್ತಿಕವಾಗಿ ಭೇಟಿ ಮಾಡಿದ ಅವರು, “ಹೆಚ್‌ಎಂಟಿ ಕೇವಲ ಸಮಯ ನೋಡುವ ಸಾಧನವಲ್ಲ, ಜನರ ಭಾವನಾತ್ಮಕ ಅಂಶವೂ ಆಗಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಈ ದೃಶ್ಯಗಳನ್ನು ಕಂಡು ಚಕಿತರಾಗಿದ್ದಾರೆ. ಅವರು ಹೇಳಿದ್ದಾರೆ: “ಕಿಲೋಮೀಟರ್ ಗಟ್ಟಲೇ ಸರತಿಯಲ್ಲಿ ನಿಂತು ಹೆಚ್‌ಎಂಟಿ ಗಡಿಯಾರ ಖರೀದಿಸಲು ಬಂದ ಸಾರ್ವಜನಿಕರನ್ನು ನೋಡಿ ನನಗೆ ಬಹಳ ಸಂತೋಷವಾಗಿದೆ. ನಾವೆಲ್ಲರೂ ಚಿಕ್ಕವರಾಗಿದ್ದಾಗಿನಿಂದಲೂ ಹೆಚ್‌ಎಂಟಿ ವಾಚ್‌ಗಳನ್ನು ನೋಡಿಕೊಂಡು ಬೆಳೆದಿದ್ದೇವೆ. ಇಂದಿಗೂ ಈ ಬ್ರ್ಯಾಂಡ್ ಮೇಲಿನ ಅಭಿಮಾನ ಕಂಡು ಚಕಿತನಾಗಿದ್ದೇನೆ. ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ನಾಯಕತ್ವದಲ್ಲಿ ಈ ಕಾರ್ಖಾನೆಗೆ ಮರುಜೀವ ನೀಡಲು ಪ್ರಯತ್ನ ಮಾಡುತ್ತಿದ್ದೇವೆ.”
ಹೆಚ್‌ಎಂಟಿ ಕಾರ್ಖಾನೆಗೆ ಮರುಜೀವ ನೀಡುವ ಪ್ರಯತ್ನಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ, ಈ ಬೇಡಿಕೆ ಕಂಪನಿಗೆ ಹೆಚ್ಚುವರಿ ಹುರುಪು ನೀಡಿದೆ. ಒಂದು ಕಾಲದಲ್ಲಿ ವರದಕ್ಷಿಣೆಯಾಗಿ ಕೊಡುತ್ತಿದ್ದ, ಎಲ್ಲ ವಯಸ್ಸಿನವರ ಹೃದಯದಲ್ಲಿ ಬೇರೂರಿರುವ ಈ ಬ್ರ್ಯಾಂಡ್, ಸ್ವಾತಂತ್ರ್ಯ ದಿನದಂದು ಮತ್ತೆ ಜನರ ನೆನಪುಗಳನ್ನು ಹೊರತಂದಿದೆ.











