ಬೆಂಗಳೂರು: ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಇಲ್ಲದ ಇಲಾಖೆ ಇಲ್ಲ ಎಂದು ಆರೋಪಿಸಿರುವ ಬಿಜೆಪಿ ನಾಯಕ ಆರ್. ಅಶೋಕ್ ಅವರು, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಸಾರ್ವಜನಿಕರ ಹಣ ₹8.43 ಕೋಟಿಗೂ ಅಧಿಕ ವಂಚನೆಗೊಳಗಾಗಿದೆ ಎಂದು ಆರೋಪಿಸಿದ್ದಾರೆ.
ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಹಿಂದಿನ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರಿಂದ ಹಿಡಿದು ಇಂದಿನ ಸಚಿವ ಡಾ. ಯತೀಂದ್ರ ಎಸ್. ಅವರ ಅವಧಿಯವರೆಗೂ ನಗರಾಭಿವೃದ್ಧಿ ಇಲಾಖೆ ಸಂಪೂರ್ಣವಾಗಿ ಭ್ರಷ್ಟಾಚಾರದ ಕೂಪವಾಗಿದೆ ಎಂದು ಟೀಕಿಸಿದ್ದಾರೆ.
ಜನರಿಗೆ ನಿವೇಶನ ಕೊಡುವುದಾಗಿ ನಂಬಿಸಿ ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದು ಕೋಟಿ ಕೋಟಿ ಹಣ ಲೂಟಿ ಮಾಡುತ್ತಿದ್ದರೂ ಇಲಾಖೆಯು ಕಣ್ಣು-ಕಿವಿ ಮುಚ್ಚಿಕೊಂಡಿದೆ ಎಂದು ಅವರು ಹೇಳಿದ್ದಾರೆ. ಅಧಿಕಾರಿಗಳು ಮತ್ತು ಕಂಟ್ರಾಕ್ಟರ್‌ಗಳು ಶಾಮೀಲಾಗಿ ಬಡ ಜನರ ರಕ್ತ ಹೀರುತ್ತಿರುವ ಈ ‘ಕರ್ನಾಟಕ ಲೂಟಿ ಮಾದರಿ’ಗೆ ಸಿಎಂ ಡಿ.ಕೆ. ಶಿವಕುಮಾರ್ ಅವರ ಉತ್ತರವೇನು ಎಂದು ಪ್ರಶ್ನಿಸಿದ್ದಾರೆ.
ಇದು ಕೇವಲ ಕೆಳಹಂತದ ಸಿಬ್ಬಂದಿ ಮಾಡಿದ ವಂಚನೆಯಲ್ಲ. ಮೇಲಂತದ ಕಲೆಕ್ಷನ್ ಮಾಸ್ಟರ್‌ಗಳ ಸಮ್ಮತಿಯೊಂದಿಗೆ ನಡೆಯುತ್ತಿರುವ ಸಾಂಸ್ಥಿಕ ಲೂಟಿ ಎನ್ನುವುದರಲ್ಲಿ ಅನುಮಾನವೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ನಗರಾಭಿವೃದ್ಧಿ ಇಲಾಖೆಯನ್ನು ಕಾಂಗ್ರೆಸ್ ನಾಯಕರ ವೈಯಕ್ತಿಕ ಎಟಿಎಂ ಮಾಡಿಕೊಳ್ಳುವುದನ್ನು ನಿಲ್ಲಿಸಿ, ತಕ್ಷಣ ಈ ಹಗರಣದ ಸಮಗ್ರ ತನಿಖೆಗೆ ಆದೇಶಿಸಿ, ತಪ್ಪಿತಸ್ಥರನ್ನು ಜೈಲಿಗೆ ಕಳುಹಿಸಬೇಕು ಎಂದು ಆರ್. ಅಶೋಕ್ ಅವರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಜನರ ದುಡ್ಡನ್ನು ದೋಚುತ್ತಿರುವ ಲೂಟಿ ಸರ್ಕಾರಕ್ಕೆ ರಾಜ್ಯದ ಜನತೆ ತಕ್ಕ ಪಾಠ ಕಲಿಸುವುದು ನಿಶ್ಚಿತ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.











