ಬೆಂಗಳೂರು: ಕಾಂಗ್ರೆಸ್ ಸರ್ಕಾರ ‘ಬ್ರ್ಯಾಂಡ್ ಬೆಂಗಳೂರು’ ನಿರ್ಮಿಸುವುದಾಗಿ ಬಡಾಯಿ ಕೊಚ್ಚಿಕೊಂಡಿದ್ದರೂ, ನಗರವನ್ನು ಮಾದಕ ಪದಾರ್ಥಗಳ ನಗರವನ್ನಾಗಿ ಪರಿವರ್ತಿಸಿದೆ ಎಂದು ಬಿಜೆಪಿ ನಾಯಕ ಆರ್. ಅಶೋಕ್ ತೀವ್ರ ಆರೋಪ ಹೊರಿಸಿದ್ದಾರೆ.
2023ರಿಂದ 2026ರ ಸೆಪ್ಟೆಂಬರ್‌ವರೆಗೆ ಬೆಂಗಳೂರಿನಲ್ಲಿ 26,636 ಡ್ರಗ್ಸ್ ಪ್ರಕರಣಗಳು ದಾಖಲಾಗಿವೆ. 2026ರಲ್ಲೇ ಸುಮಾರು ₹300 ಕೋಟಿ ಮೌಲ್ಯದ ಮಾದಕ ವಸ್ತುಗಳು ಜಪ್ತಿಯಾಗಿವೆ ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಹೇಳಿದ್ದಾರೆ. ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಡ್ರಗ್ಸ್ ಜಾಲ ವಿಸ್ತರಿಸುತ್ತಿರುವುದು ಆತಂಕಕಾರಿ ಎಂದು ಅವರು ವ್ಯಕ್ತಪಡಿಸಿದ್ದಾರೆ.
ಒಂದೆಡೆ ಡ್ರಗ್ಸ್ ದಂಧೆಕೋರರ ಪ್ರವೇಶ ಹೆಚ್ಚುತ್ತಿರುವಾಗ, ಮತ್ತೊಂದೆಡೆ ಗುಂಡಿ ಬಿದ್ದ ರಸ್ತೆಗಳು, ಅಸ್ತವ್ಯಸ್ತ ಸಂಚಾರ ಹಾಗೂ ಪಾರ್ಕಿಂಗ್ ಹೆಸರಿನಲ್ಲಿ ಹೊಸ ಶುಲ್ಕದ ಹೊರೆ ಜನರನ್ನು ಕಾಡುತ್ತಿದೆ ಎಂದು ಅಶೋಕ್ ಟೀಕಿಸಿದ್ದಾರೆ. ಜನರಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ವಿಫಲವಾಗಿರುವ ಸರ್ಕಾರ, ‘ಬ್ರ್ಯಾಂಡ್ ಬೆಂಗಳೂರು’ ಎಂಬ ಹೆಸರಿನಲ್ಲಿ ಪ್ರಚಾರ ಮಾತ್ರ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ವಿಶ್ವದ ಪ್ರಮುಖ ಐಟಿ ಹಬ್ ಆಗಿದ್ದ ಬೆಂಗಳೂರಿನ ಮೂಲಸೌಕರ್ಯ ಹದಗೆಡುತ್ತಿರುವ ಬಗ್ಗೆ ಉದ್ಯಮ ವಲಯದಿಂದಲೂ ಆತಂಕ ವ್ಯಕ್ತವಾಗುತ್ತಿದೆ. ಉದ್ಯೋಗ, ಹೂಡಿಕೆ ಮತ್ತು ಅಭಿವೃದ್ಧಿಗೆ ಮಾದರಿಯಾಗಬೇಕಿದ್ದ ರಾಜಧಾನಿ ಇಂದು ಡ್ರಗ್ಸ್, ಟ್ರಾಫಿಕ್ ಮತ್ತು ಅವ್ಯವಸ್ಥೆಗೆ ಸುದ್ದಿಯಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಸಚಿವ ಕೃಷ್ಣ ಬೈರೇಗೌಡರನ್ನು ಉದ್ದೇಶಿಸಿ, “ಕಸದಿಂದ ಸ್ವಾತಂತ್ರ್ಯ ಕೊಡಿಸಲು ನಿಮಗೆ ಆಗಲಿಲ್ಲ. ಕನಿಷ್ಠಪಕ್ಷ ಮಾದಕ ವಸ್ತುಗಳಿಂದಾದರೂ ಯುವಜನರಿಗೆ ಮುಕ್ತಿ ಕೊಡಿಸಿ” ಎಂದು ಅಶೋಕ್ ಸವಾಲು ಹಾಕಿದ್ದಾರೆ. ಘೋಷಣೆಗಳಿಂದ ಬೆಂಗಳೂರು ಅಭಿವೃದ್ಧಿಯಾಗುವುದಿಲ್ಲ. ಪರಿಣಾಮಕಾರಿ ಆಡಳಿತ, ಸುರಕ್ಷತೆ ಮತ್ತು ಉತ್ತಮ ಮೂಲಸೌಕರ್ಯ ಬೇಕು. ಕಾಂಗ್ರೆಸ್ ಸರ್ಕಾರ ಅದನ್ನು ಯಾವಾಗ ನೀಡಲಿದೆ ಎಂದು ಅವರು ಪ್ರಶ್ನಿಸಿದ್ದಾರೆ.











