ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ರೈತರು ಸಾವನ್ನಪ್ಪಿದ ಪ್ರಕರಣದಲ್ಲಿ ಸತ್ಯ ಹೊರಬರಲು ನ್ಯಾಯಾಂಗ ತನಿಖೆಯೊಂದೇ ದಾರಿ ಎಂದು ಬಿಜೆಪಿ ನಾಯಕ ಆರ್. ಅಶೋಕ್ ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರದ ವಿವಿಧ ಹಂತಗಳ ಹೇಳಿಕೆಗಳು ಪರಸ್ಪರ ತಾಳೆಯಾಗುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಅರಣ್ಯ ಇಲಾಖೆ ಒಂದು ರೀತಿಯ ಹೇಳಿಕೆ ನೀಡುತ್ತಿದೆ. ಸ್ಥಳೀಯ ಜನಪ್ರತಿನಿಧಿಗಳು ಮತ್ತೊಂದು ಕಥೆ ಹೇಳುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ಮಾತುಗಳಲ್ಲೂ ಅನುಮಾನಗಳಿಗೆ ಸ್ಪಷ್ಟ ಉತ್ತರ ಸಿಗುತ್ತಿಲ್ಲ ಎಂದು ಅಶೋಕ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. “ಹಾಗಾದರೆ ನಿಜವಾದದ್ದು ಯಾವುದು? ಯಾರ ಮಾತನ್ನು ನಂಬಬೇಕು?” ಎಂದು ಅವರು ಪ್ರಶ್ನಿಸಿದ್ದಾರೆ.
ಸರ್ಕಾರವೇ ಸತ್ಯವನ್ನು ಸ್ಪಷ್ಟಪಡಿಸಬೇಕಾದ ಪ್ರಕರಣದಲ್ಲಿ ಅಧಿಕಾರಿಗಳ ಹೇಳಿಕೆಗಳಲ್ಲೇ ಇಷ್ಟೊಂದು ವೈರುಧ್ಯವಿರುವುದು ಅತ್ಯಂತ ಗಂಭೀರ ಸಂಗತಿ ಎಂದು ಅವರು ಹೇಳಿದ್ದಾರೆ. ಮೂವರು ಜೀವಗಳು ಹೋಗಿವೆ. ಇದು ಕೇವಲ ಒಂದು ಇಲಾಖೆಯ ಕ್ರಮದ ಪ್ರಶ್ನೆಯಲ್ಲ. ಅಧಿಕಾರದ ದುರುಪಯೋಗವಾಗಿದೆಯೇ? ನಿಯಮಗಳನ್ನು ಉಲ್ಲಂಘಿಸಲಾಗಿದೆಯೇ? ಗುಂಡಿನ ದಾಳಿ ಅನಿವಾರ್ಯವಾಗಿತ್ತೇ? ಘಟನೆಯ ನಂತರ ಸಾಕ್ಷ್ಯಗಳನ್ನು ಸಂರಕ್ಷಿಸಲಾಗಿದೆಯೇ? ಎಂಬ ಹಲವು ಪ್ರಶ್ನೆಗಳಿಗೆ ಉತ್ತರ ಬೇಕಿದೆ ಎಂದು ಅವರು ಒತ್ತಿ ಹೇಳಿದ್ದಾರೆ.
ಪೊಲೀಸ್ ಅಥವಾ ಅರಣ್ಯ ಇಲಾಖೆಯ ಆಂತರಿಕ ತನಿಖೆಯಿಂದ ಸತ್ಯ ಹೊರಬರುವುದಿಲ್ಲ ಎಂದು ಅಶೋಕ್ ಅಭಿಪ್ರಾಯಪಟ್ಟಿದ್ದಾರೆ. ಸರ್ಕಾರದ ಅಧೀನದಲ್ಲಿರುವ ಇಲಾಖೆಯೇ ಆರೋಪದ ಕೇಂದ್ರವಾಗಿರುವಾಗ, ಅದೇ ವ್ಯವಸ್ಥೆಯಿಂದ ತನಿಖೆ ನಡೆಸುವುದು ನ್ಯಾಯಸಮ್ಮತವಲ್ಲ ಎಂದು ಅವರು ತಿಳಿಸಿದ್ದಾರೆ.
ಆದ್ದರಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಪ್ರಕರಣದಲ್ಲಿ ತಕ್ಷಣ ನ್ಯಾಯಾಂಗ ತನಿಖೆಗೆ ಆದೇಶಿಸಬೇಕು ಎಂದು ಅಶೋಕ್ ಆಗ್ರಹಿಸಿದ್ದಾರೆ. ಮೂವರು ರೈತರ ಸಾವಿನ ಹಿಂದಿನ ಸಂಪೂರ್ಣ ಸತ್ಯ ಹೊರಬರಬೇಕು. ತಪ್ಪಿತಸ್ಥರು ಯಾರೇ ಆಗಿರಲಿ – ಅರಣ್ಯ ಸಿಬ್ಬಂದಿಯಾಗಲಿ, ಅಧಿಕಾರಿಗಳಾಗಲಿ ಅಥವಾ ರಾಜಕೀಯ ಪ್ರಭಾವಿಗಳಾಗಲಿ – ಕಾನೂನಿನ ಮುಂದೆ ನಿಲ್ಲಿಸಬೇಕು ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರಕ್ಕೆ ನಿಜಕ್ಕೂ ಮುಚ್ಚಿಡುವುದೇನೂ ಇಲ್ಲದಿದ್ದರೆ ನ್ಯಾಯಾಂಗ ತನಿಖೆಗೆ ಏಕೆ ಭಯ ಎಂದು ಅಶೋಕ್ ಪ್ರಶ್ನಿಸಿದ್ದಾರೆ. ಅಮಾಯಕ ರೈತರ ಜೀವಕ್ಕೆ ನ್ಯಾಯ ಸಿಗುವವರೆಗೂ ಈ ಹೋರಾಟ ನಿಲ್ಲುವುದಿಲ್ಲ ಎಂದು ಅವರು ಹೇಳಿದ್ದಾರೆ.











