ಬೆಂಗಳೂರು: ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್‌ಐಡಿಎಲ್)ನಲ್ಲಿ ಗುತ್ತಿಗೆದಾರರಿಂದ 7% ಹೆಚ್ಚುವರಿ ಲಂಚ ಪಡೆಯಲಾಗುತ್ತಿದೆ ಎಂಬ ಆರೋಪ ಮೇಲೆ ಪ್ರತಿಪಕ್ಷ ನಾಯಕ ಆರ್. ಅಶೋಕ ರಾಜ್ಯ ಸರ್ಕಾರವನ್ನು ತೀವ್ರವಾಗಿ ಟೀಕಿಸಿದ್ದಾರೆ. ಇಬ್ಬರು ಸಚಿವರನ್ನು ಕೂಡಲೇ ವಜಾ ಮಾಡಿ, ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಅವರು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಶೋಕ, “ಯಾರಾದರೂ ಲಂಚ ಪಡೆದರೆ ನನಗೆ ಕರೆ ಮಾಡಿ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದರು. ಈಗ ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈ ಅಧಿಕೃತವಾಗಿ ಪತ್ರ ಬರೆದು ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಕೆಆರ್‌ಐಡಿಎಲ್‌ನಲ್ಲಿ ಹೆಚ್ಚುವರಿ 7% ಪಡೆಯಲಾಗುತ್ತಿದೆ ಮತ್ತು ಪ್ರಶ್ನಿಸಿದ ಗುತ್ತಿಗೆದಾರರಿಗೆ ಬೆದರಿಕೆ ಹಾಕಲಾಗುತ್ತಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಇದು ಪ್ರತಿಪಕ್ಷದ ಆರೋಪವಲ್ಲ, ಅಧಿಕಾರ ಪಕ್ಷದ ಶಾಸಕರೇ ಮಾಡಿರುವ ಆರೋಪವಾಗಿದೆ ಎಂದು ಅವರು ಹೇಳಿದರು.
“100 ರೂಪಾಯಿ ಬಿಡುಗಡೆಯಾದರೆ ಕೇವಲ 30 ರೂಪಾಯಿ ಕೆಲಸ ಆಗುತ್ತದೆ. ಉಳಿದ 70% ಕಮಿಷನ್‌ಗೆ ಹೋಗುತ್ತದೆ. ಜಿಲ್ಲಾ ಉಸ್ತುವಾರಿ ಮತ್ತು ಇಲಾಖಾ ಸಚಿವರು ಪ್ರತಿ ತಿಂಗಳು ಕಮಿಷನ್ ಪಡೆಯುತ್ತಿದ್ದಾರೆ” ಎಂದು ರೈ ಅವರ ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ಅಶೋಕ ಹೇಳಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಅಧಿಕಾರಿಗಳು ಕೂಡ ರೌಡಿಗಳಂತೆ ವರ್ತಿಸುತ್ತಿದ್ದಾರೆ. ಇದು ಕಮಿಷನ್ ಆಡಳಿತವನ್ನು ಸಾಬೀತುಪಡಿಸುತ್ತದೆ ಎಂದು ಅವರು ಆರೋಪಿಸಿದರು.
ಈಗಾಗಲೇ ಒಬ್ಬ ಸಚಿವ ಭ್ರಷ್ಟಾಚಾರದಿಂದಾಗಿ ರಾಜೀನಾಮೆ ನೀಡಿದ್ದಾರೆ. ಆದರೂ ಇನ್ನಿಬ್ಬರು ಸಚಿವರಿಗೆ ಭಯವಿಲ್ಲ. ಈ 7% ರಾಹುಲ್ ಗಾಂಧಿಗೂ ತಲುಪುತ್ತದೆ ಎಂದು ಅಶೋಕ ಹೇಳಿದರು. ಕರ್ನಾಟಕವನ್ನು ಇತರೆ ರಾಜ್ಯಗಳಿಗೆ ಮಾದರಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಅಂದರೆ ಈ ಕಮಿಷನ್ ವ್ಯವಸ್ಥೆ ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ಅವರು ವ್ಯಂಗ್ಯವಾಡಿದರು. ಈ ಕಮಿಷನ್‌ನಿಂದ ಸುಮಾರು 800 ಕೋಟಿ ರೂಪಾಯಿ ಸಂಗ್ರಹವಾಗಿರಬಹುದು ಎಂದು ಅಂದಾಜಿಸಿದರು.
ಬಿ.ಆರ್. ಪಾಟೀಲ್ ವಸತಿ ಇಲಾಖೆಯ ಕಮಿಷನ್ ಬಗ್ಗೆ ಮಾತನಾಡಿದ್ದರು. ಬಸವರಾಜ ರಾಯರೆಡ್ಡಿ ಕೆಕೆಆರ್‌ಡಿಬಿ ಭ್ರಷ್ಟಾಚಾರದ ಬಗ್ಗೆ ಪತ್ರ ಬರೆದಿದ್ದರು. ಆರ್.ಬಿ. ತಿಮ್ಮಾಪುರ ಅಕ್ರಮದ ಕುರಿತು ತಾವೇ ಆಡಿಯೋ ಮತ್ತು ದಾಖಲೆಗಳನ್ನು ನೀಡಿದ್ದೆ ಎಂದು ಅಶೋಕ ನೆನಪಿಸಿಕೊಂಡರು. ಸರ್ಕಾರಕ್ಕೆ ಮಾನವಿದ್ದರೆ ಆ ಇಬ್ಬರು ಸಚಿವರನ್ನು ವಜಾ ಮಾಡಬೇಕಿತ್ತು. ರೈ ಅವರ ಆರೋಪವನ್ನು ಲೋಕಾಯುಕ್ತ ಅಥವಾ ಸಿಬಿಐಗೆ ವಹಿಸಬೇಕು ಎಂದು ಅವರು ಒತ್ತಾಯಿಸಿದರು.
ಉದ್ಯಾನಗಳ ರಕ್ಷಣೆಗೆ ಪ್ರತಿಭಟನೆ
ರಿಯಲ್ ಎಸ್ಟೇಟ್ ಮಾಫಿಯಾಗೆ ಅನುಕೂಲವಾಗುವಂತೆ ಉದ್ಯಾನಗಳನ್ನು ಕಬಳಿಸಲು ಅವಕಾಶ ನೀಡುವ ಬಿಲ್‌ನ್ನು ಸಿಎಂ ಡಿ.ಕೆ. ಶಿವಕುಮಾರ್ ತಂದಿದ್ದಾರೆ ಎಂದು ಅಶೋಕ ಆರೋಪಿಸಿದರು. ಆಡಳಿತ ಮತ್ತು ವಿರೋಧ ಪಕ್ಷಗಳು ಉದ್ಯಾನಗಳನ್ನು ರಕ್ಷಿಸಬೇಕು. 5% ಎಂದು ಹೇಳಿ ಮುಂದೆ 50%ಕ್ಕೆ ಹೆಚ್ಚಿಸಬಹುದು. ನಾಡಪ್ರಭು ಕೆಂಪೇಗೌಡರು ಕೆರೆಗಳನ್ನು ಕಟ್ಟಿ ಗಾರ್ಡನ್ ಸಿಟಿ ಮಾಡಿದ್ದರು. ಈಗ ಉದ್ಯಾನಗಳನ್ನು ನಾಶಮಾಡಿದರೆ ಬೆಂಗಳೂರು ದೆಹಲಿಯಂತೆ ವಾಯುಮಾಲಿನ್ಯ ನಗರವಾಗುತ್ತದೆ ಎಂದು ಎಚ್ಚರಿಸಿದರು.
40 ವರ್ಷಗಳ ಹಿಂದೆ ಕಾಂಗ್ರೆಸ್ ಸರ್ಕಾರ ಪಾರ್ಕ್ ಮತ್ತು ಕ್ರೀಡಾಂಗಣಗಳನ್ನು ಅನ್ಯ ಉದ್ದೇಶಕ್ಕೆ ಬಳಸಲು ಕಾನೂನು ತಂದಿತ್ತು. ಹೋರಾಟದಿಂದ ಅದನ್ನು ಹಿಂತೆಗೆದುಕೊಳ್ಳಲಾಗಿತ್ತು. ಈಗ ಮತ್ತೆ ಅದೇ ಕಾನೂನು ಬರುತ್ತಿದೆ. ಸರ್ಕಾರ ಚರ್ಚೆಗೆ ಅವಕಾಶ ನೀಡುತ್ತೇವೆ ಎಂದು ಹೇಳುತ್ತಿದೆ. ಚರ್ಚೆ ಬೇಡ, ಬಿಲ್ ಹಿಂದಕ್ಕೆ ಪಡೆಯಿರಿ ಎಂದು ಅಶೋಕ ಆಗ್ರಹಿಸಿದರು.
ಸುರಂಗ ರಸ್ತೆ ಯೋಜನೆಯಲ್ಲಿ ಪಾರ್ಕಿಂಗ್ ಅಗತ್ಯವಿಲ್ಲ. ಮಾಲ್ ನಿರ್ಮಿಸಲು ಲಾಲ್‌ಬಾಗ್ ಜಾಗವನ್ನು ಬಳಸಲು ನಿರ್ಧರಿಸಿದ್ದಾರೆ. ಯೋಜನೆ ಗುತ್ತಿಗೆ ಪಡೆದಿರುವ ಗೌತಮ್ ಅದಾನಿಯನ್ನು ಮನೆಗೆ ಕರೆಸಿ ತಿಂಡಿ ತಿನ್ನಿಸಿ ಕಳುಹಿಸಿದ್ದಾರೆ. ದೆಹಲಿಯಲ್ಲಿ ರಾಹುಲ್ ಗಾಂಧಿ ಅದೇ ಅದಾನಿಯನ್ನು ಟೀಕೆ ಮಾಡುತ್ತಾರೆ ಎಂದು ಅವರು ವ್ಯಂಗ್ಯವಾಡಿದರು.
ಶನಿವಾರ ಮತ್ತು ಭಾನುವಾರ ಎಲ್ಲಾ ಉದ್ಯಾನಗಳಲ್ಲಿ ಪ್ರತಿಭಟನೆ ನಡೆಸಲಾಗುವುದು. ನಾಗರಿಕರಿಂದ ಸಹಿ ಪಡೆದು ರಾಜ್ಯಪಾಲರಿಗೆ ಸಲ್ಲಿಸಲಾಗುವುದು. ‘ಪಾರ್ಕ್ ಉಳಿಸಿ, ಬೆಂಗಳೂರು ರಕ್ಷಿಸಿ’ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ಅಶೋಕ ಘೋಷಿಸಿದರು.











