ಬೆಂಗಳೂರು: ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್‌ನ ಅಧ್ಯಕ್ಷ ಸ್ಥಾನಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಂಬಂಧಿ ಹಾಗೂ ಆಪ್ತರಾದ ವಿಧಾನ ಪರಿಷತ್ ಸದಸ್ಯ ಎಸ್.ರವಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಶರಣಗೌಡ ಬಯ್ಯಾಪುರ ಅವರು ಆಯ್ಕೆಯಾಗಿದ್ದಾರೆ.
ಇದರೊಂದಿಗೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಗಾದಿಗಾಗಿ ನಡೆದಿದ್ದ ಬಣ ರಾಜಕೀಯದಲ್ಲಿ ಡಿ.ಕೆ.ಶಿವಕುಮಾರ್ ಬಣ ಮೇಲುಗೈ ಸಾಧಿಸಿದಂತಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಎಸ್.ರವಿ ಪರ ಡಿಕೆಶಿ ಬಣ ಹಾಗೂ ಕೆ.ಎನ್.ರಾಜಣ್ಣ ಪರ ಸಿದ್ದರಾಮಯ್ಯ ಬಣ ತೀವ್ರ ಲಾಬಿ ನಡೆಸಿದ್ದವು.
ಅಧ್ಯಕ್ಷ ಸ್ಥಾನವನ್ನು ತಲಾ ಎರಡೂವರೆ ವರ್ಷದ ಅವಧಿಗೆ ಹಂಚಿಕೊಳ್ಳಲು ಮೊದಲೇ ನಿರ್ಧಾರವಾಗಿತ್ತು. ಆದರೆ ಕೆ.ಎನ್.ರಾಜಣ್ಣ ಅವರು ಮೊದಲ ಅವಧಿಯಲ್ಲೇ ಅಧ್ಯಕ್ಷ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದರು. ಅಂತಿಮವಾಗಿ ಡಿ.ಕೆ.ಶಿವಕುಮಾರ್ ಅವರು ಹೈಕಮಾಂಡ್ ಜತೆ ಲಾಬಿ ನಡೆಸಿ ತಮ್ಮ ಸಂಬಂಧಿಗೆ ಮೊದಲ ಅವಧಿಯಲ್ಲೇ ಅಧ್ಯಕ್ಷ ಪಟ್ಟ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಪೆಕ್ಸ್ ಬ್ಯಾಂಕ್‌ಗೆ ನಾಲ್ಕು ತಿಂಗಳ ಮೊದಲೇ ಚುನಾವಣೆ ನಡೆಯಬೇಕಿತ್ತು. ಆದರೆ ಆಕಾಂಕ್ಷಿಗಳ ಮಧ್ಯೆ ಪ್ರಬಲ ಸ್ಪರ್ಧೆ ಇದ್ದ ಕಾರಣ ಚುನಾವಣೆ ಮುಂದೂಡಿಕೆಯಾಗಿತ್ತು. ಸೆಪ್ಟೆಂಬರ್ 10ರಂದು ಚುನಾವಣೆ ಅಂತಿಮವಾದ ಹಿನ್ನೆಲೆಯಲ್ಲಿ ಬುಧವಾರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಅಪೆಕ್ಸ್ ಬ್ಯಾಂಕ್‌ನ 19 ನಿರ್ದೇಶಕರೊಂದಿಗೆ ಸಭೆ ನಡೆಯಿತು. ಬಳಿಕ ರವಿ ಅವರನ್ನು ಆಯ್ಕೆ ಮಾಡಲು ನಿರ್ಧರಿಸಲಾಯಿತು.
ಸಹಕಾರ ಸಚಿವ ಲಕ್ಷ್ಮಣ್ ಸವದಿ ಪ್ರತಿಕ್ರಿಯಿಸಿ, “ಮೊದಲ ಎರಡೂವರೆ ವರ್ಷಗಳ ಅವಧಿಗೆ ಪರಿಷತ್ ಸದಸ್ಯ ರವಿ ಅವರನ್ನು ಅಧ್ಯಕ್ಷರನ್ನಾಗಿ ಹಾಗೂ ಶರಣಗೌಡ ಬಯ್ಯಾಪುರ ಅವರನ್ನು ಉಪಾಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ನಾಮಪತ್ರ ಸಲ್ಲಿಕೆ ಬಳಿಕ ಇಬ್ಬರ ಆಯ್ಕೆ ಅಂತಿಮಗೊಂಡಿದೆ. ಮುಂದಿನ ಎರಡೂವರೆ ವರ್ಷಗಳ ಅಧಿಕಾರಾವಧಿ ಕುರಿತು ಆ ನಂತರವೇ ತೀರ್ಮಾನಿಸಲಾಗುವುದು” ಎಂದು ಹೇಳಿದರು.
ಗೆಲುವಿನ ಬಗ್ಗೆ ಮಾತನಾಡಿದ ಎಸ್.ರವಿ, “ಅಪೆಕ್ಸ್ ಬ್ಯಾಂಕ್ ಅಭಿವೃದ್ಧಿಗೆ ಶ್ರಮ ವಹಿಸಿ ಕೆಲಸ ಮಾಡುತ್ತೇನೆ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಸಹಕಾರ ಕ್ಷೇತ್ರದ ಹಿರಿಯರಾದ ಕೆ.ಎನ್.ರಾಜಣ್ಣ ಅವರ ಸಲಹೆಯೊಂದಿಗೆ ಮುಂದುವರೆಯುತ್ತೇನೆ” ಎಂದು ಹೇಳಿದರು.
ಈ ಆಯ್ಕೆಯಿಂದ ಅಸಮಾಧಾನಗೊಂಡಿರುವ ಕೆ.ಎನ್.ರಾಜಣ್ಣ ಅವರು ಚುನಾವಣೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿದುಬಂದಿದೆ.











