ಬೆಂಗಳೂರು: ಅಲೆಮಾರಿ, ಅರೆ ಅಲೆಮಾರಿ ಮತ್ತು ವಿಮುಕ್ತ ಬುಡಕಟ್ಟು ಘಟಕದ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಆದಿವಾಸಿ, ಬುಡಕಟ್ಟು ಮತ್ತು ದಲಿತ ಸಮುದಾಯಗಳೇ ಈ ದೇಶದ ಮೂಲ ನಿವಾಸಿಗಳು ಮತ್ತು ನೆಲದ ಯಜಮಾನರು ಎಂದು ಹೇಳಿದ್ದಾರೆ.
ಸಮಾಜ ಸುಧಾರಣೆಗೆ ನಾಂದಿ ಹಾಡಿದ ಮಹಾನ್ ಚೇತನರಾದ ಬಿರ್ಸಾ ಮುಂಡಾ, ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್ ಮತ್ತು ದೇವರಾಜ ಅರಸು ಅವರಿಗೆ ಪುಷ್ಪ ನಮನ ಸಲ್ಲಿಸಿದ ಹರಿಪ್ರಸಾದ್, ಬಿರ್ಸಾ ಮುಂಡಾ ಅವರನ್ನು ಆದಿವಾಸಿಗಳ ಮಹಾನ್ ನಾಯಕ ಎಂದು ಸ್ಮರಿಸಿದರು. “ಬ್ರಿಟೀಷರ ವಿರುದ್ಧ ಹೋರಾಡಿ 30ನೇ ವಯಸ್ಸಿಗೇ ಈ ಲೋಕವನ್ನು ತ್ಯಜಿಸಿದ ಬಿರ್ಸಾ ಮುಂಡಾ ಅವರು ಬ್ರಿಟೀಷರಿಗೆ ಸಿಂಹಸ್ವಪ್ನವಾಗಿದ್ದರು. ಅವರು ಸತ್ತು 150 ವರ್ಷ ಕಳೆದರೂ ಜಾರ್ಖಂಡ್‌ನ ಪ್ರತಿಯೊಬ್ಬ ಆದಿವಾಸಿ ಅವರನ್ನು ಜೀವಂತವಾಗಿ ನೆನಪಿಸಿಕೊಂಡು ದೈವವೆಂದು ಭಾವಿಸುತ್ತಾರೆ,” ಎಂದು ಅವರು ಹೇಳಿದರು.
“ಈ ದೇಶದ ನೆಲದ ಯಜಮಾನರು ಆದಿವಾಸಿಗಳು, ಬುಡಕಟ್ಟು ಮತ್ತು ದಲಿತರು. ನೀವು ಮೂಲ ನಿವಾಸಿಗಳು. ನೀವು ಬಂದ ನಂತರವೇ ಬೇರೆಯವರು ಬಂದಿದ್ದಾರೆ. ಈ ದೇಶದ ನಾಯಕತ್ವ, ಮಾಲೀಕತ್ವ ನಿಮ್ಮ ಕೈಯಲ್ಲೇ ಇರಬೇಕಿತ್ತು. ಸ್ವಾತಂತ್ರ್ಯ ಹೋರಾಟದ ಆಶಯವೇ ಎಲ್ಲರಿಗೂ ಸಮಾನ ಹಕ್ಕು, ಸಮಬಾಳು, ಸಮಪಾಲು ಎಂಬುದಾಗಿತ್ತು. ನಮಗೆ ರಾಜಕೀಯ ಸ್ವಾತಂತ್ರ್ಯ ಸಿಕ್ಕಿದ್ದರೂ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಇನ್ನೂ ಸಿಕ್ಕಿಲ್ಲ,” ಎಂದು ಹರಿಪ್ರಸಾದ್ ತಿಳಿಸಿದರು.

ಬುಡಕಟ್ಟು ಮತ್ತು ಅಲೆಮಾರಿ ಸಮುದಾಯಗಳು ಸ್ವಂತ ಕಾಲಿನ ಮೇಲೆ ನಿಲ್ಲಬೇಕು ಎಂದು ಒತ್ತಿ ಹೇಳಿದ ಅವರು, “ನಿಮ್ಮಲ್ಲಿ ಕೀಳರಿಮೆ ಬರಬಾರದು. ನಿಮ್ಮ ಕಲೆ ಅಂತಾರಾಷ್ಟ್ರೀಯ ಮಟ್ಟಕ್ಕಿಂತ ಕಡಿಮೆಯೇನಲ್ಲ. ಅದನ್ನು ಹೆಮ್ಮೆಯಿಂದ ಮುಂದುವರಿಸಿ. ಹೊರದೇಶಗಳಲ್ಲೂ ಪ್ರದರ್ಶನ ಮಾಡಿ,” ಎಂದರು. ರಾಜಸ್ಥಾನದ ಬೀಲ್, ಜಾರ್ಖಂಡ್‌ನ ಘೋಂಡ್ ಮತ್ತು ಗುಜರಾತ್‌ನ ಸಿದ್ಧಿ ಸಮುದಾಯಗಳ ಸಂಸ್ಕೃತಿ ಹಾಗೂ ಕಲೆಯನ್ನು ಅವರು ಉದಾಹರಿಸಿದರು.
ಮಧ್ಯಪ್ರದೇಶದ ಜುಮ್ಮಾ ಸೋಲಂಕಿ ಅವರ ಉದಾಹರಣೆ ನೀಡಿದ ಹರಿಪ್ರಸಾದ್, “ಸೋನಿಯಾ ಗಾಂಧಿ ಅವರು ಮೊದಲು ಒಪ್ಪಿರಲಿಲ್ಲ. ಆದರೆ ನಂತರ ಅವರು ನಾಲ್ಕು ಬಾರಿ ಎಂಎಲ್ಎ ಆಗಿದ್ದಾರೆ. ನಿಮ್ಮಲ್ಲೂ ಸಾಮರ್ಥ್ಯ, ಪ್ರತಿಭೆ ಇದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನಿಮ್ಮವರೇ. ಅವರಿಗಿರುವ ಶಕ್ತಿ ನಿಮಗೂ ಇದೆ,” ಎಂದು ಹೇಳಿದರು.
ಮತದಾನದ ಬಗ್ಗೆ ಮಾತನಾಡಿದ ಅವರು, “ಐದು ವರ್ಷಕ್ಕೊಮ್ಮೆ ಮತ ಹಾಕುವುದು ನಿಮ್ಮ ಶಕ್ತಿ. ಹಣ, ಹೆಂಡ ಕೊಟ್ಟವರಿಗೆ ಮತ ಹಾಕಿದರೆ ನಿಮ್ಮ ಮಕ್ಕಳ ಭವಿಷ್ಯ ನಾಶ ಮಾಡಿದಂತೆ. ಶಿಕ್ಷಣ, ಆಸ್ಪತ್ರೆ ಸೌಲಭ್ಯ, ಸಾಮಾಜಿಕ ನ್ಯಾಯ ನೀಡುವ ಸರ್ಕಾರಕ್ಕೆ ಮತ ನೀಡಿ. ಸಣ್ಣ ಸಮುದಾಯ ಎಂದು ಭಾವಿಸಬೇಡಿ. ನಿಮ್ಮ ಮತ ವಿರುದ್ಧ ಬಿದ್ದರೆ ಯಾರೂ ಗೆಲ್ಲಲಾಗುವುದಿಲ್ಲ,” ಎಂದು ಕರೆ ನೀಡಿದರು.
ಸೋನಿಯಾ ಗಾಂಧಿ ಅವರು ಅರಣ್ಯ ಹಕ್ಕು ಕಾಯ್ದೆ ತಂದು ಬುಡಕಟ್ಟು ಸಮುದಾಯಗಳಿಗೆ ಹಕ್ಕು ಕೊಡಿಸಿದ್ದಾರೆ ಹಾಗೂ ಆಹಾರ ಭದ್ರತಾ ಕಾಯ್ದೆ ತಂದಿರುವುದನ್ನು ಸ್ಮರಿಸಿದ ಹರಿಪ್ರಸಾದ್, “ಕಾಂಗ್ರೆಸ್ ಪಕ್ಷದ ಬಾಗಿಲು ಸದಾ ತೆರೆದಿರುತ್ತದೆ. ನಿಮ್ಮ ಕಾರ್ಯಕ್ರಮಗಳಿಗೆ ವೇದಿಕೆಯನ್ನು ಉಚಿತವಾಗಿ ನೀಡುತ್ತೇವೆ,” ಎಂದು ಹೇಳಿದರು.
ಅಲೆಮಾರಿ ಮತ್ತು ಅರೆ ಅಲೆಮಾರಿ ಘಟಕದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಎಲ್ಲಪ್ಪ ಅವರಿಗೆ ಶುಭ ಹಾರೈಸಿದರು.











