ಬೆಂಗಳೂರು: ಅರಣ್ಯದಂಚಿನಲ್ಲಿ ವಾಸಿಸುವವರು ಲೈಸೆನ್ಸ್ ಇಲ್ಲದೆ ಇಟ್ಟುಕೊಂಡಿರುವ ಬಂದೂಕುಗಳನ್ನು ನವೆಂಬರ್ 1ರೊಳಗೆ ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗೆ ವಶಕ್ಕೆ ನೀಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ.
ಮಂಗಳವಾರ ವಿಧಾನಸಭೆಯಲ್ಲಿ ಕಸ್ತೂರಿರಂಗನ್ ವರದಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ನಿಲುವನ್ನು ಮಂಡಿಸುವ ವೇಳೆ ಅವರು ಈ ಬಗ್ಗೆ ಮಾತನಾಡಿದರು.
ಅರಣ್ಯದಂಚಿನಲ್ಲಿ ವಾಸಿಸುವ ಕೆಲವರು ಲೈಸೆನ್ಸ್ ಇಲ್ಲದೆ ಬಂದೂಕು ಇಟ್ಟುಕೊಂಡು ಕಾಡು ಪ್ರಾಣಿಗಳನ್ನು ಬೇಟೆಯಾಡುತ್ತಿರುವುದು ಕಂಡುಬಂದಿದೆ ಎಂದು ಸಿಎಂ ತಿಳಿಸಿದರು.
“ಹೊಸ ತಂತ್ರಜ್ಞಾನದ ಮೂಲಕ ಕಾಡಿನಲ್ಲಿ ಸಾವಿರಾರು ಕ್ಯಾಮೆರಾಗಳನ್ನು ಅರಣ್ಯ ಮತ್ತು ವನ್ಯಜೀವಿ ರಕ್ಷಣೆಗಾಗಿ ಅಳವಡಿಸಲಾಗಿದೆ. ಯಾರೋ ಹೇಳಿದರೆಂದು ಸುಮ್ಮನೆ ಕಾಡಿಗೆ ಹೋಗಿ ಪ್ರಾಣಿಗಳನ್ನು ಬೇಟೆಯಾಡಬೇಡಿ. ಬೇಟೆಗೆ ಪ್ರಚೋದಿಸುವವರು ಇದ್ದಾರೆ, ನಿಮ್ಮನ್ನು ತೊಡಗಿಸುವವರೂ ಇದ್ದಾರೆ. ಆದ್ದರಿಂದ ಯಾರೂ ಪ್ರಾಣಿಗಳ ಬೇಟೆ ಮಾಡಬಾರದು” ಎಂದು ಸದನದ ಮೂಲಕ ಅವರು ಮನವಿ ಮಾಡಿದರು.
ಶಾಸಕರು ತಮ್ಮ ಕ್ಷೇತ್ರದ ಜನರಲ್ಲಿ ಈ ಬಗ್ಗೆ ಅರಿವು ಮೂಡಿಸಬೇಕು ಎಂದೂ ಅವರು ಸೂಚಿಸಿದರು. ಬಂದೂಕಿನ ಅವಶ್ಯಕತೆ ಇರುವವರಿಗೆ ಸರ್ಕಾರ ಪರವಾನಗಿ ನೀಡುವುದಾಗಿ ಹೇಳಿದರು.