ಬೆಂಗಳೂರು: ಪೌರಕಾರ್ಮಿಕರ ಉಪಹಾರ ಭತ್ಯೆಯನ್ನು 35 ರೂಪಾಯಿಯಿಂದ 70 ರೂಪಾಯಿಗೆ ಏರಿಸಿ ಶೀಘ್ರವೇ ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದರು. ಪೌರಕಾರ್ಮಿಕರಿಗಾಗಿ ಪೌರಭವನ ನಿರ್ಮಾಣಕ್ಕೆ ಮುಂದಿನ ಎರಡು ತಿಂಗಳಲ್ಲಿ ಶಂಕುಸ್ಥಾಪನೆ ನಡೆಸಲಾಗುವುದು ಹಾಗೂ ಅವರ ಮಕ್ಕಳ ಶಿಕ್ಷಣಕ್ಕಾಗಿ ಕೆಪಿಎಸ್ ಮಾದರಿಯ ವಸತಿ ಶಾಲೆಗಳನ್ನು ನಿರ್ಮಿಸಲಾಗುವುದು ಎಂದೂ ಅವರು ತಿಳಿಸಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಶುಕ್ರವಾರ ನಡೆದ ಪೌರಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಶಿವಕುಮಾರ್, “ಶ್ರಮದಲ್ಲೇ ಶಿವನನ್ನು ಕಾಣುವ ನಿತ್ಯ ನೈರ್ಮಲ್ಯಗಾರರು ಪೌರಕಾರ್ಮಿಕರು. ಇವರು ನಿಜವಾದ ಕರ್ಮಯೋಗಿ, ಕಾಯಕಜೀವಿಗಳು ಮತ್ತು ಸ್ವಚ್ಛತಾ ಕ್ರಾಂತಿಯ ಸರದಾರರು” ಎಂದು ಹೇಳಿದರು.

“ನಿಮ್ಮೆಲ್ಲರ ಬದುಕಿನಲ್ಲಿ ಕೀಳರಿಮೆಯಿಂದ ಮಾನಸಿಕವಾಗಿ ಕುಗ್ಗಬಾರದು. ನೀವು ದೇಶಸೇವೆ ಮಾಡುತ್ತಿರುವುದಾಗಿ ಸ್ವಾಭಿಮಾನದಿಂದ ಬದುಕಿ. ಪೌರಕಾರ್ಮಿಕರಿಲ್ಲದೆ ನಾವು ಆರೋಗ್ಯವಾಗಿರಲು ಸಾಧ್ಯವಿಲ್ಲ. ನಮ್ಮ ಸರ್ಕಾರ ಬಂದ ನಂತರ ಸಾವಿರಾರು ಪೌರಕಾರ್ಮಿಕರನ್ನು ಖಾಯಂ ಮಾಡಿದ್ದು, ಉಳಿದವರನ್ನು ಕೂಡ ಖಾಯಂ ಮಾಡಲಾಗುವುದು. ಬಿಡಬ್ಲ್ಯೂಎಸ್‌ಎಸ್‌ಬಿ ಮತ್ತು ನೀರು ಸರಬರಾಜು ಇಲಾಖೆಗಳಲ್ಲಿ ಖಾಯಂ ಉದ್ಯೋಗ ನೀಡಲು ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ” ಎಂದು ಭರವಸೆ ನೀಡಿದರು.
ಪೌರಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಸಮಾಜಕಲ್ಯಾಣ ಮತ್ತು ನಗರಾಭಿವೃದ್ಧಿ ಇಲಾಖೆಗಳು ಸೇರಿದಂತೆ ಸಚಿವ ಸಂಪುಟ ಉಪಸಮಿತಿ ರಚಿಸಲಾಗುವುದು ಎಂದು ಸಿಎಂ ತಿಳಿಸಿದರು. “ನಿಮ್ಮ ಮಂಡಳಿ, ಯೋಗಕ್ಷೇಮ ಮತ್ತು ಕಲ್ಯಾಣ ನಿಧಿ ವಿಚಾರಗಳಲ್ಲಿ ಗಮನಹರಿಸಿ, ಆರ್ಥಿಕ ಇಲಾಖೆಯ ವಿಶ್ವಾಸ ಪಡೆದು ತೀರ್ಮಾನ ಮಾಡಲಾಗುವುದು” ಎಂದು ಅವರು ಹೇಳಿದರು.

2017ರಲ್ಲಿ 10 ಸಾವಿರ ಪೌರಕಾರ್ಮಿಕರನ್ನು ನೇಮಕ ಮಾಡಲಾಗಿತ್ತು. 2023ರಲ್ಲಿ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ 12,609 ಪೌರಕಾರ್ಮಿಕರನ್ನು ಖಾಯಂ ಮಾಡಿ ಇತಿಹಾಸ ನಿರ್ಮಿಸಿದೆ. 40 ಸಾವಿರ ವೇತನ ನೀಡುವ ಆದೇಶ ಹೊರಡಿಸಲಾಗಿದೆ. ಸ್ಥಳೀಯ ಸಂಸ್ಥೆಗಳಲ್ಲಿ 6 ಸಾವಿರ ಜನರನ್ನು ನೇಮಕ ಮಾಡಲಾಗಿದೆ ಎಂದು ಸಿಎಂ ನೆನಪಿಸಿಕೊಂಡರು.
“ದೇವರಾಜ ಅರಸು ಅವರ ಕಾಲದಿಂದಲೂ ಪೌರಕಾರ್ಮಿಕರ ಬಗ್ಗೆ ಚಿಂತನೆ ನಡೆಸಿರುವುದು ಕಾಂಗ್ರೆಸ್ ಸರ್ಕಾರ. ಪೌರಕಾರ್ಮಿಕರು ಮತ್ತು ಸರ್ಕಾರದ ನಡುವೆ ಇರುವುದು ಭಕ್ತ-ಭಗವಂತನ ಸಂಬಂಧ. ನಿಮ್ಮ ಮನೆ ನಿರ್ಮಾಣಕ್ಕೆ 7.50 ಲಕ್ಷ ರೂಪಾಯಿ ನೀಡಲು ತೀರ್ಮಾನಿಸಿದ್ದೇವೆ” ಎಂದು ಅವರು ಹೇಳಿದರು.

ಪೌರಕಾರ್ಮಿಕರ ಮಕ್ಕಳಿಗಾಗಿ ನಗರ ಪ್ರದೇಶಗಳಲ್ಲಿ ಕೆಪಿಎಸ್ ಮಾದರಿಯ ವಸತಿ ಶಾಲೆಗಳನ್ನು ನಿರ್ಮಿಸುವ ಗುರಿ ಹೊಂದಿದ್ದೇವೆ. ಮಕ್ಕಳು ಓದಿ ನಾಯಕರಾಗಿ ಬೆಳೆದು ಐಎಎಸ್, ಕೆಎಎಸ್ ಅಧಿಕಾರಿಗಳಾಗಬೇಕು ಎಂಬುದು ನಮ್ಮ ಚಿಂತನೆ ಎಂದು ಸಿಎಂ ತಿಳಿಸಿದರು. ಪೌರಭವನ ನಿರ್ಮಾಣಕ್ಕೆ ಸೂಕ್ತ ಸ್ಥಳ ಗುರುತಿಸಲಾಗಿದ್ದು, ಮುಂದಿನ ಎರಡು ತಿಂಗಳಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಅವರು ಘೋಷಿಸಿದರು. ಪ್ರತಿ ವರ್ಷ ಪೌರಕಾರ್ಮಿಕ ದಿನಾಚರಣೆಯನ್ನು ಸರ್ಕಾರದ ವತಿಯಿಂದ ನಡೆಸಲಾಗುವುದು ಎಂದೂ ತಿಳಿಸಿದರು.
“ನಿಮ್ಮದು ಕೇವಲ ಕಸ ತೆಗೆಯುವ ಕೈಗಳಲ್ಲ; ಕರ್ನಾಟಕವನ್ನು ಪಾಡುವ ಕೈಗಳು. ಡಿ.ಕೆ. ಶಿವಕುಮಾರ್ ಮತ್ತು ಕಾಂಗ್ರೆಸ್ ಸರ್ಕಾರ ನಿಮ್ಮ ಜೊತೆಗೆ ನಿಲ್ಲುತ್ತೇವೆ” ಎಂದು ಸಿಎಂ ಭಾವನಾತ್ಮಕವಾಗಿ ಹೇಳಿದರು.











