ಸಿಆರ್‌ಝಡ್ ನಕ್ಷೆಗಳಲ್ಲಿನ ದೋಷಗಳನ್ನು ತಿದ್ದುಪಡಿ ಮಾಡಿ; ಸಾಂಪ್ರದಾಯಿಕ ಮೀನುಗಾರಿಕೆಗೆ ಆದ್ಯತೆ ನೀಡಿ
ಕರ್ನಾಟಕದ ಕರಾವಳಿ ವಲಯ ನಿರ್ವಹಣಾ ಯೋಜನೆ (ಸಿಝಡ್‌ಎಂಪಿ) ಮತ್ತು ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶ (ಇಎಸ್‌ಎ) ಅಧಿಸೂಚನೆಗೆ ಸಂಬಂಧಿಸಿದಂತೆ ರಾಜ್ಯದ ವಾಸ್ತವ ಸ್ಥಿತಿಗತಿಗಳನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ತಿದ್ದುಪಡಿ ಹಾಗೂ ನಿಯಮಗಳನ್ನು ಸಡಿಲಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದ್ರ ಯಾದವ್ ಅವರಿಗೆ ಸೋಮವಾರ ಪತ್ರ ಬರೆದಿರುವ ಶಿವಕುಮಾರ್, ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡದ ಸಾಂಪ್ರದಾಯಿಕ ಮೀನುಗಾರರ ಜೀವನೋಪಾಯ ಮತ್ತು ಕರಾವಳಿ ವಸತಿ ಪ್ರದೇಶಗಳ ರಕ್ಷಣೆಗಾಗಿ ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಸ್ತುತ ಅನುಮೋದಿತ ಕರಾವಳಿ ವಲಯ ನಿರ್ವಹಣಾ ಯೋಜನೆಯ ನಕ್ಷೆಯಲ್ಲಿ ಹಲವು ದೋಷಗಳಿವೆ ಎಂದು ತಿಳಿಸಿರುವ ಅವರು, ಕಂದಾಯ ದಾಖಲೆಗಳು, ನವೀಕೃತ ಉಪಗ್ರಹ ಚಿತ್ರಣಗಳು ಮತ್ತು ನೈಜ ಸ್ಥಳ ಪರಿಶೀಲನೆ (ಗ್ರೌಂಡ್-ಟ್ರುತಿಂಗ್) ನಡೆಸಿ ಸರ್ವೆ ಸಂಖ್ಯೆವಾರು ತಿದ್ದುಪಡಿ ಮಾಡಬೇಕು ಎಂದು ಕೋರಿದ್ದಾರೆ.
ಸಾಂಪ್ರದಾಯಿಕ ಮೀನುಗಾರಿಕೆ, ದೋಣಿ ದುರಸ್ತಿ, ಬಲೆ ಹೆಣೆಯುವುದು, ಮೀನು ಸಂಸ್ಕರಣೆ ಹಾಗೂ ಸಾಂಪ್ರದಾಯಿಕ ಮನೆಗಳ ದುರಸ್ತಿ/ಪುನರ್ನಿರ್ಮಾಣಕ್ಕೆ ಸಿಆರ್‌ಝಡ್ ಚೌಕಟ್ಟಿನೊಳಗೆ ಅಗತ್ಯ ಸಡಿಲಿಕೆ ಮತ್ತು ಮಾನ್ಯತೆ ನೀಡಬೇಕು ಎಂದು ಕರಾವಳಿ ಮೀನುಗಾರ ಸಮುದಾಯ, ನಿವಾಸಿಗಳು, ಸ್ಥಳೀಯ ಆಡಳಿತ ಸಂಸ್ಥೆಗಳು, ಜನಪ್ರತಿನಿಧಿಗಳು ಮತ್ತು ಇತರೆ ಭಾಗೀದಾರರು ವಿನಂತಿಸಿರುವುದನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಪರಿಸರ ಸಂರಕ್ಷಣೆಗೆ ಧಕ್ಕೆಯಾಗದಂತೆ ಗೋವಾ ರಾಜ್ಯಕ್ಕೆ ನೀಡಲಾಗಿರುವ ಸಿಆರ್‌ಝಡ್ ನಿಯಮಾವಳಿ ಸಡಿಲಿಕೆಗಳನ್ನು ಕರ್ನಾಟಕಕ್ಕೂ ವಿಸ್ತರಿಸಬೇಕು ಎಂದು ಮನವಿ ಮಾಡಿದ್ದಾರೆ.
ಪಶ್ಚಿಮ ಘಟ್ಟಗಳ ಇಎಸ್‌ಎ ಅಧಿಸೂಚನೆಯ ವ್ಯಾಪ್ತಿಗೆ ಕೃಷಿ ಭೂಮಿ, ತೋಟಗಳು ಮತ್ತು ಮಾನವ ವಸತಿ ಪ್ರದೇಶಗಳನ್ನು ಸೇರಿಸಿರುವುದು ಕಳವಳಕಾರಿ ಎಂದು ತಿಳಿಸಿರುವ ಶಿವಕುಮಾರ್, ಈ ಬಗ್ಗೆ ಪ್ರಧಾನಮಂತ್ರಿಗೂ ಪತ್ರ ಬರೆಯಲಾಗಿದೆ ಎಂದು ಹೇಳಿದ್ದಾರೆ. ರಾಜ್ಯ ಸರ್ಕಾರ ಪ್ರಸ್ತಾಪಿಸಿರುವ ವೈಜ್ಞಾನಿಕ ಸರ್ವೆ ಹಾಗೂ ಭೌತಿಕ ಪರಿಶೀಲನೆ ನಡೆಸಿ, ಉನ್ನತ ಮಟ್ಟದ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ರಾಜ್ಯದೊಂದಿಗೆ ಚರ್ಚಿಸಿದ ನಂತರವೇ ಅಂತಿಮ ಅಧಿಸೂಚನೆ ಹೊರಡಿಸಬೇಕು ಎಂದು ಕೋರಿದ್ದಾರೆ.
ಮ್ಯಾಂಗ್ರೋವ್‌ಗಳು (ಕಾಂಡ್ಲಾ ವನಗಳು), ಮರಳಿನ ದಿಬ್ಬಗಳು ಹಾಗೂ ಆಮೆಗಳ ಸಂತಾನೋತ್ಪತ್ತಿ ಪ್ರದೇಶಗಳಂತಹ ಸಿಆರ್‌ಝಡ್-1 ರಕ್ಷಣೆಯಲ್ಲಿ ಯಾವುದೇ ರಾಜಿ ಇಲ್ಲ. ಆದರೆ ವೈಜ್ಞಾನಿಕ ಹಾಗೂ ಸತ್ಯಾಸತ್ಯತೆಯ ಆಧಾರದ ಮೇಲೆ ನಿಯಮಗಳನ್ನು ಜಾರಿಗೊಳಿಸುವುದರಿಂದ ಪರಿಸರ ಸಂರಕ್ಷಣೆ ಮತ್ತು ಸ್ಥಳೀಯರ ಜೀವನೋಪಾಯ ಎರಡನ್ನೂ ಕಾಪಾಡಿಕೊಳ್ಳಬಹುದು ಎಂದು ಸ್ಪಷ್ಟಪಡಿಸಿದ್ದಾರೆ.











