ಬೆಂಗಳೂರು: ಬಡವರಿಗೆ ಉನ್ನತ ಮಟ್ಟದ ಆರೋಗ್ಯ ಸೇವೆ ಒದಗಿಸುವುದು ಸರ್ಕಾರದ ಕರ್ತವ್ಯವಾಗಿದೆ. ಹೃದ್ರೋಗ, ನರವಿಜ್ಞಾನ ಸೇರಿದಂತೆ ವಿಶೇಷ ಚಿಕಿತ್ಸೆಗಳು ಜನರಿಗೆ ಶೀಘ್ರವಾಗಿ ಲಭ್ಯವಾಗುವಂತಾಗಬೇಕು ಎಂದು ಅಬಕಾರಿ ಸಚಿವರು ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರು ಹೇಳಿದ್ದಾರೆ.

ವಿಕಾಸಸೌಧದಲ್ಲಿ ಬುಧವಾರ ನಡೆದ ಹಾಸನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಾಮಗಾರಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, “ಬಾಕಿ ಇರುವ ಎಲ್ಲಾ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಆಸ್ಪತ್ರೆ ನಿರ್ಮಾಣದಲ್ಲಿ ಯಾವುದೇ ವಿಳಂಬವಾಗಬಾರದು. ಜನರಿಗೆ ತುರ್ತು ಆರೋಗ್ಯ ಸೇವೆ ಒದಗಿಸಲು ಸಮರೋಪಾದಿಯಲ್ಲಿ ಕಾಮಗಾರಿ ಮುಗಿಸಬೇಕು” ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಡಿಸೆಂಬರ್ ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಜನವರಿ ತಿಂಗಳಲ್ಲಿ ಉದ್ಘಾಟನಾ ಸಮಾರಂಭ ನಡೆಸಬಹುದು ಎಂದು ಸಚಿವರು ತಿಳಿಸಿದರು. ಜೊತೆಗೆ, ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಕಾಮಗಾರಿ ಸಹ ಪೂರ್ಣಗೊಂಡು ಉದ್ಘಾಟನೆಗೊಳ್ಳುವಂತಾದರೆ ತಮಗೆ ಸಮಾಧಾನವಾಗುತ್ತದೆ ಎಂದು ಅವರು ಹೇಳಿದರು.











