ಬೆಂಗಳೂರು: ಮಹಾತ್ಮ ಗಾಂಧೀಜಿಯವರು ಕರ್ನಾಟಕದಲ್ಲಿ ಭೇಟಿ ನೀಡಿದ್ದ 87 ಐತಿಹಾಸಿಕ ಸ್ಥಳಗಳಲ್ಲಿ ‘ಗಾಂಧಿ ಸ್ಮಾರಕ ಸ್ತಂಭ’ಗಳನ್ನು ಸ್ಥಾಪಿಸುವ ಸರ್ಕಾರದ ಆಯವ್ಯಯ ಘೋಷಣೆಯ ಭಾಗವಾಗಿ, ರಾಜ್ಯದ ಮೊದಲ ಗಾಂಧಿ ಸ್ಮಾರಕ ಸ್ತಂಭವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜು (GAS ಕಾಲೇಜು) ಆವರಣದಲ್ಲಿ ಅನಾವರಣಗೊಳಿಸಿದರು.
1924ರಲ್ಲಿ ಬೆಳಗಾವಿಯಲ್ಲಿ ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆದ ಐತಿಹಾಸಿಕ ಕಾಂಗ್ರೆಸ್ ಅಧಿವೇಶನಕ್ಕೆ 100 ವರ್ಷಗಳು ಪೂರೈಸಿದ ನೆನಪಿಗಾಗಿ “ಗಾಂಧಿ ಭಾರತ” ಅಭಿಯಾನದಡಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಈ ಸ್ಮಾರಕ ಸ್ತಂಭಗಳನ್ನು ನಿರ್ಮಿಸುತ್ತಿದೆ.

ಕಾರ್ಯಕ್ರಮದಲ್ಲಿ ಗಾಂಧಿ ಭಾರತ ಶತಮಾನೋತ್ಸವ ಸಮಿತಿ ಅಧ್ಯಕ್ಷರು ಹಾಗೂ ಶಾಸಕರಾದ ಎಚ್.ಕೆ. ಪಾಟೀಲ, ಕರ್ನಾಟಕ ವಿಧಾನಪರಿಷತ್ ಮಾಜಿ ಸಭಾಪತಿ ಹಾಗೂ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರಾದ ಬಿ.ಎಲ್. ಶಂಕರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿ ಜೆ. ಮಂಜುನಾಥ್ ಐಎಎಸ್ ಸೇರಿದಂತೆ ಸಮಿತಿಯ ಪದಾಧಿಕಾರಿಗಳು, ಸರ್ಕಾರಿ ಕಲಾ ಕಾಲೇಜಿನ ಪ್ರಾಧ್ಯಾಪಕರು ಮತ್ತು ಅಪಾರ ಸಂಖ್ಯೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಸ್ಮಾರಕ ಸ್ತಂಭವನ್ನು ಸಿದ್ಧಪಡಿಸಿದ ಮೈಸೂರಿನ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್, ಕಾಲೇಜಿನ ಪ್ರಾಂಶುಪಾಲ ನಾಗೇಂದ್ರ ಕುಮಾರ್ ಜಿ.ಸಿ. ಮತ್ತು ನಿರ್ಮಿತಿ ಕೇಂದ್ರದ ಅಭಿಯಂತರ ರಾಜೀವ್ ಅವರನ್ನು ಸನ್ಮಾನಿಸಲಾಯಿತು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾಲೇಜು ಆವರಣದಲ್ಲಿ ಗಿಡ ನೆಟ್ಟು ನೀರೆರೆದರು.

ಐತಿಹಾಸಿಕ ಹಿನ್ನೆಲೆ
ಮಹಾತ್ಮ ಗಾಂಧೀಜಿಯವರು ಪತ್ನಿ ಕಸ್ತೂರಬಾ ಅವರೊಂದಿಗೆ 1915ರ ಮೇ 8ರಂದು ಪ್ರಥಮ ಬಾರಿಗೆ ಬೆಂಗಳೂರಿಗೆ ಆಗಮಿಸಿ, ಅಂದಿನ ಸರ್ಕಾರಿ ಪ್ರೌಢಶಾಲೆಗೆ (ಇಂದಿನ ಸರ್ಕಾರಿ ಕಲಾ ಕಾಲೇಜು) ಭೇಟಿ ನೀಡಿ, ತಮ್ಮ ರಾಜಕೀಯ ಗುರು ಗೋಪಾಲಕೃಷ್ಣ ಗೋಖಲೆ ಅವರ ಭಾವಚಿತ್ರವನ್ನು ಅನಾವರಣಗೊಳಿಸಿದ್ದರು. ಆ ನೆನಪಿಗಾಗಿ ಈ ಸಭಾಂಗಣಕ್ಕೆ ‘ಬಾಪೂಜಿ’ ಹೆಸರು ಇಡಲಾಗಿದೆ. ಇದೇ ಆವರಣದಲ್ಲಿ ರಾಜ್ಯದ ಮೊದಲ ಗಾಂಧಿ ಸ್ಮಾರಕ ಸ್ತಂಭವನ್ನು ನಿರ್ಮಿಸಲಾಗಿದೆ.

ಸ್ಮಾರಕ ಸ್ತಂಭದ ವಿವರ
ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಸಿದ್ಧಪಡಿಸಿದ ಈ ಸ್ತಂಭವು 10 ಅಡಿ ಎತ್ತರ ಹಾಗೂ 3¼ ಅಡಿ ಅಗಲದ ಏಕಶಿಲಾ ಗ್ರಾನೈಟ್ ಕಲಾಕೃತಿಯಾಗಿದೆ. ಅದರ ಮೇಲ್ಭಾಗದಲ್ಲಿ ನಾಲ್ಕು ಮುಖದ ಸಿಂಹಗಳನ್ನು ಹೊಂದಿರುವ ರಾಷ್ಟ್ರೀಯ ಲಾಂಛನ, ಅಶೋಕ ಚಕ್ರ, ಧ್ಯಾನಸ್ಥ ಗಾಂಧೀಜಿ, ಅವರು ಬೋಧಿಸಿದ ಸಪ್ತ ಸಾಮಾಜಿಕ ಪಾತಕಗಳು, ಗಾಂಧೀಜಿಯವರ ಸಹಿ ಮತ್ತು ಚರಕದ ಚಿತ್ರಣವನ್ನು ಕೆತ್ತಲಾಗಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಎಂ.ಎನ್. ಅನುಚೇತ್ ತಿಳಿಸಿದ್ದಾರೆ.

ರಾಜ್ಯದ 87 ಗಾಂಧಿ ಹೆಜ್ಜೆಗುರುತಿನ ಸ್ಥಳಗಳಲ್ಲಿ ಇಂತಹ ಸ್ಮಾರಕ ಸ್ತಂಭಗಳನ್ನು ನಿರ್ಮಿಸುವ ಕಾರ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಮುಂದುವರಿಯುತ್ತಿದೆ.










