ಸಿಎಂನ ಕಪಟ ನಾಟಕ, ಕಲಬುರಗಿ ಕೊಲೆಗಳು ಮತ್ತು ಬೆಲೆ ಏರಿಕೆಯೇ ಕಾಂಗ್ರೆಸ್ ಸರ್ಕಾರದ ಸಾಧನೆ ಎಂದು ಟೀಕೆ
ಧಾರವಾಡ: ವಿಧಾನ ಪರಿಷತ್‍ನ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಎಸ್.ವಿ. ಸಂಕನೂರ ಅವರು ಹ್ಯಾಟ್ರಿಕ್ ಗೆಲುವು ಸಾಧಿಸಿ ದೊಡ್ಡ ಅಂತರದಲ್ಲಿ ಜಯಶಾಲಿಯಾಗಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಸೋಮವಾರ ವಿಶ್ವಾಸ ವ್ಯಕ್ತಪಡಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಸಂಕನೂರ ಅವರು ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಪದವೀಧರರ ಪರವಾಗಿ ಪರಿಷತ್‍ನಲ್ಲಿ ಸಮರ್ಥವಾಗಿ ಧ್ವನಿ ಎತ್ತಿ ಕೆಲಸ ಮಾಡಿದ್ದಾರೆ. ಅವರು ಜನಾನುರಾಗಿ ಶಾಸಕರು ಮತ್ತು ಎಲ್ಲರ ವಿಶ್ವಾಸ ಗಳಿಸಿದ್ದಾರೆ. ಆದ್ದರಿಂದ ಮತ್ತೆ ಅವರು ಆಯ್ಕೆಯಾಗಲಿದ್ದಾರೆ” ಎಂದು ಹೇಳಿದರು. ಅವರ ಗೆಲುವಿಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರಾದ ಮಹೇಶ್ ಟೆಂಗಿನಕಾಯಿ, ಅರವಿಂದ ಬೆಲ್ಲಡ್ ಸೇರಿದಂತೆ ಉತ್ತರ ಕನ್ನಡ, ಧಾರವಾಡ, ಗದಗ ಮತ್ತು ಹಾವೇರಿ ಭಾಗದ ಶಾಸಕರು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಶ್ರಮಿಸಲಿದ್ದಾರೆ ಎಂದು ಅವರು ತಿಳಿಸಿದರು.

ಸಿಎಂನ ‘ಕಪಟ ನಾಟಕ’
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಬಹುಮತವಿದ್ದರೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಅಸ್ಥಿರತೆ ಕಾಡುತ್ತಿದೆ. ಆರ್ಥಿಕ ಸಂಕಷ್ಟವೂ ಅವರಿಗೆ ಭಯ ತಂದಿದೆ. “ಇವರು ಎಸ್‌ಐಆರ್ ಇಟ್ಟುಕೊಂಡು ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸುತ್ತಿದ್ದಾರೆ. ಫಾರಂ 7 ಬಗ್ಗೆ ಗೊಂದಲ ಮಾಡುತ್ತಿದ್ದಾರೆ. ಇವೆಲ್ಲವನ್ನೂ ಇಟ್ಟುಕೊಂಡು ರಾಜ್ಯ ಚುನಾವಣಾ ಆಯೋಗದ ಕಚೇರಿಯಲ್ಲಿ ಧರಣಿ ಮಾಡುವ ಕಪಟ ನಾಟಕವನ್ನು ಸಿಎಂ ಮಾಡಿದರು” ಎಂದು ವಿಜಯೇಂದ್ರ ಆರೋಪಿಸಿದರು.
ರಾಜ್ಯ ಸರ್ಕಾರವೇ ನೇಮಿಸಿದ ರಾಜ್ಯ ಚುನಾವಣಾ ಆಯೋಗದ ಆಯುಕ್ತರ ವಿರುದ್ಧವೇ ಸರ್ಕಾರ ಆರೋಪ ಮಾಡುತ್ತಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 5 ರಿಂದ 10 ಸಾವಿರ ಅಹಿಂದು ಮತದಾರರನ್ನು ಕೈಬಿಡಲು ಬಿಜೆಪಿ ಕಾರ್ಯಕರ್ತರು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಆದರೆ ಆಯುಕ್ತರ ಪ್ರಕಾರ 91 ಸಾವಿರ ಆಕ್ಷೇಪಣೆಗಳು ಸಲ್ಲಿಕೆಯಾಗಿವೆ. ಆಕ್ಷೇಪಣೆ ಸಲ್ಲಿಸುವುದು ಹಕ್ಕು. ಮತದಾರರ ಹೆಸರು ತೆಗೆಯಲು ಬಿಎಲ್‌ಎಗಳು ಅರ್ಜಿ ನೀಡಿದರೆ ಅದರ ಪರಿಶೀಲನೆ ಮಾಡುವುದು ಬಿಎಲ್‌ಓಗಳ ಕೆಲಸ. ಬಿಎಲ್‌ಓಗಳು ರಾಜ್ಯ ಸರ್ಕಾರದ ಅಧೀನದಲ್ಲಿದ್ದಾರೆ. ಹಾಗಾದರೆ ಮತ್ತ್ಯಾಕೆ ಬಿಜೆಪಿ ಕಾರ್ಯಕರ್ತರ ಮೇಲೆ ವಿನಾಕಾರಣ ಆರೋಪ ಮಾಡಬೇಕು ಎಂದು ಅವರು ಪ್ರಶ್ನಿಸಿದರು.

ಕಲಬುರಗಿ ಕೊಲೆಗಳ ಬಗ್ಗೆ ಬಹಿರಂಗ ಮಾಡಲಿ
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಕಲಬುರಗಿಯನ್ನು ‘ರಿಪಬ್ಲಿಕ್ ಆಫ್ ಕಲಬುರಗಿ’ ಆಗಿ ಮಾಡಿಕೊಂಡಿದ್ದಾರೆ. ಇಡೀ ಜಿಲ್ಲೆ ಖರ್ಗೆ ಕುಟುಂಬದ ಕಪಿಮುಷ್ಟಿಯಲ್ಲಿದೆ. “ಅಧಿಕಾರಕ್ಕೆ ಬಂದ ನಂತರ ಎಷ್ಟು ಕೊಲೆಗಳಾಗಿವೆ ಎಂಬುದನ್ನು ಬಹಿರಂಗಪಡಿಸಲಿ. ಗುತ್ತಿಗೆದಾರರು, ಅಧಿಕಾರಿಗಳು ಕೊಲೆಯಾದರೆ ಖರ್ಗೆ ಕಡೆಯ ಪುಡಾರಿಗಳು ಕೊಲೆಯಾದವರ ಕುಟುಂಬವನ್ನು ರಾತ್ರಿ 2 ಗಂಟೆಗೆ ಸಂಪರ್ಕಿಸಿ ಹಣ ನೀಡಿ ಬಾಯಿ ಮುಚ್ಚಿಸುತ್ತಾರೆ. ಇಂತಹ ಸುಪಾರಿ ಕಿಲ್ಲರ್‌ಗಳನ್ನು ಯಾರು ಬೆಳೆಸುತ್ತಿದ್ದಾರೆ ಎಂಬುದಕ್ಕೆ ಪ್ರಿಯಾಂಕ್ ಖರ್ಗೆ ಅವರೇ ಉತ್ತರ ನೀಡಬೇಕು” ಎಂದು ವಿಜಯೇಂದ್ರ ದೂರಿದರು.
ಫಾರಂ 7 ಕೊಟ್ಟಿದ್ದು ಸರಿಯಲ್ಲ ಎಂದಾದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ. ರಾಜ್ಯ ಸರ್ಕಾರ ಪೊಲೀಸರನ್ನು ದುರ್ಬಳಕೆ ಮಾಡಿಕೊಂಡು ನಮ್ಮ ಕಾರ್ಯಕರ್ತರನ್ನು ಬೆದರಿಸುವ ಕೆಲಸ ಮಾಡಿದರೆ ಹೆದರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಬೆಲೆ ಏರಿಕೆಯೇ ಪ್ರಮುಖ ಸಾಧನೆ
“ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳಲ್ಲಿ ಬೆಲೆ ಏರಿಕೆ ಮಾಡಿದ್ದನ್ನು ಬಿಟ್ಟರೆ ಬೇರೆ ಏನೂ ಸಾಧನೆ ಮಾಡಿಲ್ಲ. ಈಗ ಮತ್ತೆ ಬಸ್ ಟಿಕೆಟ್ ದರ ಏರಿಸಲು ಮುಂದಾಗಿದೆ. ರಾಜ್ಯದ ಆರ್ಥಿಕ ಸ್ಥಿತಿ ಹೀನಾಯ ಮಟ್ಟಕ್ಕೆ ಬಂದಿದೆ. ಗ್ಯಾರಂಟಿ ಕೊಟ್ಟಿದ್ದೇವೆ ಎಂದು ಕೊಚ್ಚಿಕೊಳ್ಳುತ್ತಾರೆ. ಸಾರಿಗೆ ನಿಗಮಗಳಿಗೆ ಸರ್ಕಾರ ಹಣ ನೀಡಿಲ್ಲ. ಸಾವಿರಾರು ಕೋಟಿ ಬಾಕಿ ಇದೆ ಎಂದು ನಿಗಮದ ಎಂಡಿ, ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಸಾರಿಗೆ ನೌಕರರಿಗೆ ಸಂಬಳ ಕೊಡಲೂ ಸರ್ಕಾರಕ್ಕೆ ಹಣವಿಲ್ಲ. ಗ್ರಾಮೀಣ ಭಾಗದಲ್ಲಿ ಶಾಲಾ ಮಕ್ಕಳಿಗೆ ಬಸ್ ಸೌಲಭ್ಯವಿಲ್ಲ” ಎಂದು ಅವರು ಟೀಕಿಸಿದರು.
ಗ್ಯಾರಂಟಿಗಳಿಗೆ ಹಣ ಸಂಪಾದಿಸಲು ಸಾಧ್ಯವಾಗದೇ ಅಬಕಾರಿ ಇಲಾಖೆಗೆ ಸರ್ಕಾರ ಗುರಿ ನೀಡಿದೆ. ದಿನಸಿ ಅಂಗಡಿಯಲ್ಲೂ ಮದ್ಯ ಸಿಗುತ್ತಿದೆ. ಕುಡುಕರ ರಾಜ್ಯ ಮಾಡಿದ್ದೇ ಸಾಧನೆ. ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ಮಾಡುತ್ತಿದ್ದಾರೆ. ಎರಡೂವರೆ ಲಕ್ಷ ಹುದ್ದೆಗಳು ಖಾಲಿ ಇವೆ. ಈಗ ಭಾರತ್ ಜೋಡೊ ಸಂಘ ಮಾಡಲು ಮುಂದಾಗಿದ್ದಾರೆ ಎಂದು ಅವರು ಹೇಳಿದರು.
ಕೇರಳದಲ್ಲಿ ಎಸ್‌ಐಆರ್ ಆಗಿದ್ದರಿಂದಲೇ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂದು ಸಂಸದ ಶಶಿ ತರೂರ್ ಮತ್ತು ಸಚಿವ ವಯಲಾರ್ ರವಿ ಹೇಳಿದ್ದಾರೆ. ಕರ್ನಾಟಕದಲ್ಲಿ ರಾಜ್ಯ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಲು ಕೇಂದ್ರ ಚುನಾವಣಾ ಆಯೋಗದ ಮೇಲೆ ಗೂಬೆ ಕೂರಿಸುತ್ತಿದೆ. ಎಫ್‌ಐಆರ್ ಮಾಡಿ ನಮ್ಮ ಕಾರ್ಯಕರ್ತರನ್ನು ಬೆದರಿಸಲು ಸರ್ಕಾರ ಹೊರಟಿದೆ. ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಗಳಾಗಿವೆ ಎಂದು ಅವರು ಆರೋಪಿಸಿದರು.

ಕನಿಷ್ಠ ವೇತನಕ್ಕೆ ಆಗ್ರಹಿಸಿ ರಾಜ್ಯದಲ್ಲಿ ಪ್ರತಿಭಟನೆ ಆರಂಭವಾಗಿದೆ. ಆಶಾ ಕಾರ್ಯಕರ್ತೆಯರ ಬಗ್ಗೆ ಸರ್ಕಾರ ಮರೆತಿದೆ. ಕೇವಲ ಕಾಲಹರಣ ಮಾಡಿಕೊಂಡು ಸಿಎಂ ಭ್ರಮೆಯಲ್ಲಿದ್ದಾರೆ. ರಿಯಲ್ ಎಸ್ಟೇಟ್‍ನಲ್ಲೇ ಮುಳುಗಿದ್ದಾರೆ. ಬಿಡದಿ ಟೌನ್‌ಶಿಪ್ ಅವರ ಆದ್ಯತೆ. ಕನಕಪುರಕ್ಕೆ ವಿಮಾನ ನಿಲ್ದಾಣವೇ ಮುಖ್ಯವಾಗಿದೆ. ರಾಜ್ಯದ ಅಭಿವೃದ್ಧಿ ಚಿಂತನೆ ಮಾಡುತ್ತಿಲ್ಲ. ಬರಗಾಲದಲ್ಲೂ ನಿರ್ಲಕ್ಷ್ಯ ಮಾಡಿದ್ದರು. ದೆಹಲಿಗೆ ಹೋಗುವುದು, ಬರಕ್ಕೆ ಕೇಂದ್ರಕ್ಕೆ ಪತ್ರ ಬರೆಯುವುದೇ ಅವರಿಗೆ ಕೆಲಸವಾಗಿದೆ. ರೈತರ ಬಗ್ಗೆ ಕಾಳಜಿ ಸಹ ಇಲ್ಲ ಎಂದು ಅವರು ಟೀಕಿಸಿದರು.
ಮಹಾರಾಷ್ಟ್ರದಂತೆ ರೈತರ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿದ್ದೇವೆ. ರೈತರಿಗೆ ಸರಿಯಾಗಿ ವಿದ್ಯುತ್ ಸಹ ನೀಡುತ್ತಿಲ್ಲ. ಬರಗಾಲ ಎದುರಿಸಲು ಯೋಜನೆಯಿಲ್ಲ. ಕಚೇರಿಯಲ್ಲಿ ಕುಳಿತರೆ ಬರ ನಿರ್ವಹಣೆಯಾಗುವುದಿಲ್ಲ. ಮಠಾಧೀಶರನ್ನೂ ಸಿಎಂ ಬೆದರಿಸುತ್ತಿದ್ದಾರೆ. ಜಾತಿಗಳ ನಡುವೆ ವಿಷಬೀಜ ಬಿತ್ತಿ ರಾಜಕೀಯ ಬೆಳೆ ಬೇಯಿಸಿಕೊಳ್ಳುವ ಭ್ರಮೆಯಲ್ಲಿ ಸಿಎಂ ಇದ್ದಾರೆ ಎಂದು ವಿಜಯೇಂದ್ರ ಹೇಳಿದರು.
ಕಾರ್ಯಕ್ರಮದಲ್ಲಿ ಅಭ್ಯರ್ಥಿ ಎಸ್.ವಿ. ಸಂಕನೂರ, ಶಾಸಕ ಮಹೇಶ್ ಟೆಂಗಿನಕಾಯಿ, ವಿಧಾನ ಪರಿಷತ್ ಸದಸ್ಯ ಲಿಂಗರಾಜ ಪಾಟೀಲ್, ಮಾಜಿ ಶಾಸಕಿ ರೂಪಾಲಿ ನಾಯಕ್ ಮತ್ತು ಇತರ ಪ್ರಮುಖರು ಉಪಸ್ಥಿತರಿದ್ದರು.











