ಬೆಂಗಳೂರು: ಅಂತ್ಯೋದಯದ ಸಿದ್ಧಾಂತದೊಂದಿಗೆ ಹೆಮ್ಮೆಯ ವಿಶ್ವನಾಯಕ ನರೇಂದ್ರ ಮೋದಿಜಿಯವರ ಸಮರ್ಥ ನಾಯಕತ್ವ ನಮಗೆಲ್ಲರಿಗೂ ಆದರ್ಶವಾಗಿದೆ ಎಂದು ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಭಿಪ್ರಾಯಪಟ್ಟರು.
ಸೇವಾ ಸಂಕಲ್ಪ ಅಭಿಯಾನದ ಅಂಗವಾಗಿ ನಡೆಯುತ್ತಿರುವ ಸೇವಾ ಜ್ಯೋತಿ ಯಾತ್ರೆಯ ಸಮಾರೋಪ ಸಮಾರಂಭವು ಬುಧವಾರ ಡಾ. ಎಂ.ಸಿ. ಮೋದಿ ಆಸ್ಪತ್ರೆ ರಸ್ತೆಯಲ್ಲಿರುವ ಶಂಕರಮಠ ಆಟದ ಮೈದಾನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘‘ಮೋದಿಜೀ ಅವರ ಸಾಧನೆ ಮತ್ತು ಸೇವಾ ಕಾರ್ಯಗಳು ನಮ್ಮ ದಾರಿಯನ್ನು ಬೆಳಕು ಮಾಡುವ ಜ್ಯೋತಿ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರ ಸೇವಾ ಜ್ಯೋತಿ ಯಾತ್ರೆ ಸಾರ್ಥಕವಾಗಲಿ’’ ಎಂದು ಹಾರೈಸಿದರು.

ಮೋದಿಜೀ ಅವರ ಸೇವಾ ಕಾರ್ಯ ಇಂದು 25 ವರ್ಷಗಳ ನಿರಂತರ ಜನಸೇವೆಯ ಮಹತ್ವದ ಮೈಲಿಗಲ್ಲನ್ನು ತಲುಪಿದೆ ಎಂದು ತಿಳಿಸಿದ ಯಡಿಯೂರಪ್ಪ, ‘‘ಕಾಲು ಶತಮಾನಗಳ ಕಾಲ ಅಭೂತಪೂರ್ವ ಜನಾದೇಶ ಪಡೆದು ಸರ್ಕಾರದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದಾರೆ. ಮೊದಲು ಸುಮಾರು 13 ವರ್ಷಗಳ ಕಾಲ ಗುಜರಾತ್ ಮುಖ್ಯಮಂತ್ರಿಗಳಾಗಿ, ನಂತರ ಕಳೆದ 12 ವರ್ಷಗಳಿಂದ ಭಾರತದ ಪ್ರಧಾನಮಂತ್ರಿಗಳಾಗಿ ಸತತ ದೇಶಸೇವೆ ಸಲ್ಲಿಸುತ್ತಿರುವುದು ಅದ್ವಿತೀಯ’’ ಎಂದು ನುಡಿದರು.

ನರೇಂದ್ರ ಮೋದಿಜಿಯವರು ಸಾರ್ವಜನಿಕ ಜೀವನದಲ್ಲಿ 25 ವರ್ಷಗಳ ಸಾರ್ಥಕ ಸೇವೆಯನ್ನು ಪೂರ್ಣಗೊಳಿಸುತ್ತಿರುವ ಈ ಸಂದರ್ಭದಲ್ಲಿ, ಸೇವಾ ಸಂಕಲ್ಪ ಅಭಿಯಾನದ ಮೂಲಕ ಅವರ ರಾಷ್ಟ್ರಸೇವೆಯನ್ನು ಸ್ಮರಿಸುತ್ತಿದ್ದೇವೆ ಮತ್ತು ಸಂಭ್ರಮಿಸುತ್ತಿದ್ದೇವೆ ಎಂದು ಅವರು ವಿವರಿಸಿದರು. ‘‘ನಮ್ಮ ಪ್ರಧಾನಿಯವರು ಒಂದೇ ಒಂದು ದಿನ ರಜೆ ಪಡೆಯದೆ ತಮ್ಮ ಸಂಪೂರ್ಣ ಜೀವನವನ್ನೇ ದೇಶಕ್ಕಾಗಿ ಮುಡುಪಾಗಿಟ್ಟ ಶ್ರೇಷ್ಠ ನಾಯಕ. ಅಂಥ ನಾಯಕ ಈ ದೇಶಕ್ಕೆ ಸಿಕ್ಕಿರುವುದು ಪ್ರತಿಯೊಬ್ಬ ಭಾರತೀಯರಿಗೂ ಹೆಮ್ಮೆ ತರುವ ಸಂಗತಿ’’ ಎಂದು ಅವರು ವಿಶ್ಲೇಷಿಸಿದರು.
ಮೋದಿಜಿಯವರ ಪಯಣವನ್ನು ನೋಡಿದಾಗ ರಾಜಕೀಯವು ಅವರಿಗೆ ಅಧಿಕಾರದ ಮಾರ್ಗವಲ್ಲ; ಅದು ಜನಸೇವೆ ಮತ್ತು ದೇಶಸೇವೆಗೆ ಒಂದು ಅವಕಾಶ ಎಂದು ಅನಿಸುತ್ತದೆ ಎಂದು ಹೇಳಿದ ಯಡಿಯೂರಪ್ಪ, ‘‘ಮುಖ್ಯಮಂತ್ರಿಗಳಾಗಿ, ಪ್ರಧಾನಮಂತ್ರಿಗಳಾಗಿ ದೇಶದ ಸಾಮಾನ್ಯ ನಾಗರಿಕರ ಬದುಕಿನಲ್ಲಿ ಪರಿವರ್ತನೆ ತರಬೇಕು ಎಂಬ ಒಂದೇ ಸಂಕಲ್ಪದೊಂದಿಗೆ ಅವರು ಸತತವಾಗಿ ಕೆಲಸ ಮಾಡುತ್ತಿದ್ದಾರೆ’’ ಎಂದು ತಿಳಿಸಿದರು.
ಈ ವಿಶೇಷ ಸಂದರ್ಭದಲ್ಲಿ ಪ್ರತಿಯೊಬ್ಬ ಕಾರ್ಯಕರ್ತನ ವೈಯಕ್ತಿಕ ಸಂಪರ್ಕದ ಸಂಕಲ್ಪ ನಮ್ಮದಾಗಬೇಕು. ಅದು ಮೋದಿಜಿಯವರ ಮೇಲಿನ ನಮ್ಮ ಅಭಿಮಾನದ ಅಭಿವ್ಯಕ್ತಿಯಾಗಬೇಕು ಎಂದು ಅವರು ಆಶಿಸಿದರು.











