ಬೆಂಗಳೂರು: ರಾಜ್ಯದ ಕೈಮಗ್ಗ ಮತ್ತು ಜವಳಿ ಕ್ಷೇತ್ರಕ್ಕೆ ಹೊಸ ದಿಕ್ಕು ನೀಡುವ ನೂತನ ಜವಳಿ ಮತ್ತು ಉಡುಪು ನೀತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಕಾರ್ಯದರ್ಶಿ ರೋಹಿಣಿ ಸಿಂಧೂರಿ, ಐಎಎಸ್ ಅವರು ಸೂಚಿಸಿದ್ದಾರೆ.
ಕಾಸಿಯಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘Implementation Training for Textile & Apparel Policy’ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ನೀತಿಯಲ್ಲಿರುವ ಪ್ರೋತ್ಸಾಹಗಳು, ಯೋಜನೆಗಳು ಮತ್ತು ಅವಕಾಶಗಳು ಉದ್ಯಮಿಗಳು, ನೇಕಾರರು ಹಾಗೂ ಅರ್ಹ ಫಲಾನುಭವಿಗಳವರೆಗೆ ಪರಿಣಾಮಕಾರಿಯಾಗಿ ತಲುಪಬೇಕು ಎಂದು ಒತ್ತಿ ಹೇಳಿದರು.

“ಕರ್ನಾಟಕದಲ್ಲಿ ಜವಳಿ ಕ್ಷೇತ್ರದ ಬೆಳವಣಿಗೆಗೆ ಅಪಾರ ಅವಕಾಶಗಳಿವೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಕ್ಕರೆ ಮತ್ತು ಜವಳಿ ಸಚಿವ ರುದ್ರಪ್ಪ ಲಮಾಣಿ ಅವರ ಮುತುವರ್ಜಿಯಿಂದ ರೂಪಿಸಲಾದ ಈ ನೀತಿಯ ಯಶಸ್ಸು ಅದರ ಪರಿಣಾಮಕಾರಿ ಅನುಷ್ಠಾನದಲ್ಲಿ ಅಡಗಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳು ನೀತಿಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡು, ಸ್ಥಳೀಯ ಅವಕಾಶಗಳನ್ನು ಗುರುತಿಸಿ, ಹೊಸ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಗೆ ಕ್ರಿಯಾಶೀಲವಾಗಿ ಕೆಲಸ ಮಾಡಬೇಕು,” ಎಂದು ರೋಹಿಣಿ ಸಿಂಧೂರಿ ಹೇಳಿದರು.

ನೂತನ ನೀತಿಯಲ್ಲಿ ಗುರುತಿಸಲಾಗಿರುವ ಫೋಕಸ್ ತಾಲೂಕುಗಳ ಕೈಮಗ್ಗ, ಜವಳಿ, ಕೌಶಲ್ಯ ಮತ್ತು ಉತ್ಪಾದನಾ ಸಾಮರ್ಥ್ಯವನ್ನು ಆಧರಿಸಿ ತಾಲೂಕುವಾರು ಕಾರ್ಯಯೋಜನೆ ರೂಪಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಪ್ರತಿ ಪ್ರದೇಶದ ಪರಂಪರೆಯ ಉತ್ಪನ್ನಗಳು, ಲಭ್ಯವಿರುವ ಕೌಶಲ್ಯ, ಉದ್ಯಮ ಸಾಧ್ಯತೆಗಳು ಹಾಗೂ ಮಾರುಕಟ್ಟೆ ಅವಕಾಶಗಳನ್ನು ಗುರುತಿಸಿ, ಅವುಗಳನ್ನು ಹೊಸ ಉದ್ಯಮ, ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಯೊಂದಿಗೆ ಸಂಪರ್ಕಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಜವಳಿ ಅಭಿವೃದ್ಧಿ ಆಯುಕ್ತ ಎ.ಬಿ. ಬಸವರಾಜು ಮಾತನಾಡಿ, ನೂತನ ನೀತಿಯಲ್ಲಿ ಕೈಮಗ್ಗ, ನೇಕಾರರು ಹಾಗೂ ಜವಳಿ ಉದ್ಯಮದ ಅಭಿವೃದ್ಧಿಗೆ ಹಲವು ಹೊಸ ಯೋಜನೆಗಳು ಮತ್ತು ಪ್ರೋತ್ಸಾಹಗಳನ್ನು ಕಲ್ಪಿಸಲಾಗಿದೆ ಎಂದರು. “ನೀತಿಯಡಿ ಲಭ್ಯವಿರುವ ಸೌಲಭ್ಯಗಳು ಮತ್ತು ಪ್ರೋತ್ಸಾಹಗಳ ಕುರಿತು ವ್ಯಾಪಕ ಜಾಗೃತಿ ಮೂಡಿಸಿ, ಅರ್ಹ ಫಲಾನುಭವಿಗಳು ಮತ್ತು ಉದ್ಯಮಿಗಳು ಅವುಗಳ ಪ್ರಯೋಜನ ಪಡೆಯುವಂತೆ ಮಾಡುವುದು ಅಧಿಕಾರಿಗಳ ಪ್ರಮುಖ ಜವಾಬ್ದಾರಿ. ಜಿಲ್ಲಾ ಮಟ್ಟದಲ್ಲಿ ನಿರಂತರ ಸಂಪರ್ಕ, ಮಾರ್ಗದರ್ಶನ ಮತ್ತು ಅನುಸರಣೆ ಅಗತ್ಯ,” ಎಂದು ಹೇಳಿದರು.
ಕಾರ್ಯಾಗಾರದಲ್ಲಿ ಜವಳಿ ಇಲಾಖೆಯ ಹೆಚ್ಚುವರಿ ನಿರ್ದೇಶಕರಾದ ಸಿ.ಎಸ್. ಯೋಗೇಶ್ ಮತ್ತು ಶ್ರೀಧರ್ ನಾಯಕ್, ವ್ಯವಸ್ಥಾಪಕ ನಿರ್ದೇಶಕಿ ಸೌಮ್ಯ ಎಂ. ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ವಿವಿಧ ಜಿಲ್ಲೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.











