ಬೆಂಗಳೂರು: ಐತಿಹಾಸಿಕ ಹಾಗೂ ಜಗತ್ಪ್ರಸಿದ್ಧ ಮೈಸೂರು ದಸರೆಯನ್ನು ಈ ಬಾರಿ ಕೊಪ್ಪಳ ಸಂಸ್ಥಾನ ಗವಿಮಠದ ಪೀಠಾಧಿಪತಿ ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳು ಉದ್ಘಾಟಿಸಲಿದ್ದಾರೆ. ಅಕ್ಟೋಬರ್ 11ರಂದು ನಾಡದೇವಿ ಶ್ರೀ ಚಾಮುಂಡೇಶ್ವರಿ ತಾಯಿಗೆ ಪೂಜೆ ಸಲ್ಲಿಸುವ ಮೂಲಕ ದಸರಾ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ಶ್ರೀಗಳ ಪರಿಚಯ
ಕಲಬುರಗಿ ಜಿಲ್ಲೆಯ ಹಾಗರಗುಂಡಗಿ ಗ್ರಾಮದ ಸಾಮಾನ್ಯ ಜಂಗಮ ಕುಟುಂಬದಲ್ಲಿ 1977ರಲ್ಲಿ ಜನಿಸಿದ ಶ್ರೀಗಳ ಪೂರ್ವಾಶ್ರಮದ ಹೆಸರು ಪರ್ವತಯ್ಯ ಹಿರೇಮಠ. ಕುಟುಂಬದ ಆರ್ಥಿಕ ಸಂಕಷ್ಟದಿಂದ ಶಿಕ್ಷಣಕ್ಕೆ ಅಡಚಣೆ ಉಂಟಾಗುತ್ತಿದ್ದಾಗ, 1989-90ರಲ್ಲಿ ವಿಜಯಪುರದ ತಮದಡ್ಡಿ ಮಠದ ಶ್ರೀ ಶಿವಶಂಕರ ಸ್ವಾಮೀಜಿಗಳು ಅವರನ್ನು ಮುಂಡರಗಿ ಅನ್ನದಾನೇಶ್ವರ ಮಠಕ್ಕೆ ಕರೆದೊಯ್ಯಲು ಹೊರಟಿದ್ದರು. ಮಾರ್ಗಮಧ್ಯೆ ಬಸ್ ತಪ್ಪಿದ್ದರಿಂದ ಕೊಪ್ಪಳ ಗವಿಮಠದಲ್ಲಿ ರಾತ್ರಿ ವಸತಿ ಮಾಡಿದಾಗ, ಅಂದಿನ ಪೀಠಾಧಿಪತಿ ಶ್ರೀ ಶಿವಶಾಂತವೀರ ಮಹಾಸ್ವಾಮೀಜಿಗಳು ಪರ್ವತಯ್ಯನನ್ನು ಗಮನಿಸಿ, ಅಲ್ಲಿಯೇ ಶಿಕ್ಷಣ ಮುಂದುವರಿಸಲು ಪ್ರೋತ್ಸಾಹಿಸಿದರು.
ವಿದ್ಯಾರ್ಥಿಯಾಗಿ ಮಠಕ್ಕೆ ಸೇರಿದ ಪರ್ವತಯ್ಯ, ಗುರುಗಳ ವಿಶೇಷ ಕಾಳಜಿ ಮತ್ತು ಮಾರ್ಗದರ್ಶನದಲ್ಲಿ ಬೆಳೆದರು. ಬಸವಾದಿ ಶರಣರ ವಚನಗಳು ಸೇರಿದಂತೆ ಹಲವು ಗ್ರಂಥಗಳನ್ನು ಅಧ್ಯಯನ ಮಾಡಿ, ಬಿ.ಎ. ಪದವಿಯನ್ನು ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ರ್‌ಯಾಂಕ್‌ನೊಂದಿಗೆ ಪಡೆದರು. ನಂತರ ಪುಣೆ ಮತ್ತು ತಿರುಪತಿಯಲ್ಲಿ ತತ್ವಶಾಸ್ತ್ರ, ಸಂಸ್ಕೃತ ಹಾಗೂ ಆಂಗ್ಲ ಭಾಷೆಯಲ್ಲಿ ಸ್ನಾತಕೋತ್ತರ ಪದವಿಗಳನ್ನು ಸಂಪಾದಿಸಿದರು.
2002ರ ಡಿಸೆಂಬರ್ 13ರಂದು ಶ್ರೀ ಶಿವಶಾಂತವೀರ ಮಹಾಸ್ವಾಮೀಜಿಗಳ ಇಚ್ಛೆಯಂತೆ 25 ವರ್ಷದ ಪರ್ವತದೇವರಿಗೆ “ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮೀಜಿ” ಎಂಬ ನಿರಂಜನ ಪಟ್ಟಾಧಿಕಾರ ನೀಡಲಾಯಿತು.

ಸಾಮಾಜಿಕ ಮತ್ತು ಸಾಂಸ್ಕೃತಿಕ ಕೊಡುಗೆಗಳು
ಶ್ರೀಗಳು ಗವಿಮಠದ ಜಾತ್ರೆಯನ್ನು ಕೇವಲ ದೇವರ ದರ್ಶನ ಮತ್ತು ಪ್ರಸಾದಕ್ಕೆ ಸೀಮಿತಗೊಳಿಸದೆ, ಸಮಾಜದ ಸಮಸ್ಯೆಗಳ ಕುರಿತು ಚಿಂತಿಸುವ, ಜನರನ್ನು ಜಾಗೃತಗೊಳಿಸುವ ಸಾಂಸ್ಕೃತಿಕ, ಕ್ರೀಡಾ ಮತ್ತು ಮಹಾದಾಸೋಹಗಳ ಜಾಗೃತಿ ಉತ್ಸವವಾಗಿ ರೂಪಿಸಿದ್ದಾರೆ.
ಮಹಾದಾಸೋಹಕ್ಕೆ ವಿಶೇಷ ಒತ್ತು ನೀಡಿ, ಜಾತ್ರೆಯ ಸಂದರ್ಭದಲ್ಲಿ ಲಕ್ಷಾಂತರ ಭಕ್ತರಿಗೆ ಪ್ರಸಾದ ಒದಗಿಸುವ ವ್ಯವಸ್ಥೆ ರೂಪುಗೊಂಡಿದೆ. ಭಕ್ತರು ಸ್ವಯಂ ಪ್ರೇರಿತರಾಗಿ ರೊಟ್ಟಿ, ದವಸ, ಧಾನ್ಯ ಮತ್ತು ತರಕಾರಿಗಳನ್ನು ತಂದುಕೊಟ್ಟು ಸೇವೆ ಸಲ್ಲಿಸುತ್ತಾರೆ.
ಪರಿಸರ ಜಾಗೃತಿಗಾಗಿ ಪ್ರತಿವರ್ಷ ಲಕ್ಷಾಂತರ ಗಿಡಗಳನ್ನು ನೆಡುವ ಮೂಲಕ “ಸಸ್ಯ ದಾಸೋಹ”ದ ಕಲ್ಪನೆಯನ್ನು ಮುಂದಿಟ್ಟಿದ್ದಾರೆ. ಜಲ ಸಂರಕ್ಷಣೆಯತ್ತಲೂ ಗಮನ ಹರಿಸಿ, ಕೊಪ್ಪಳ ತಾಲೂಕಿನ ಹಿರೇಹಳ್ಳವನ್ನು ಸುಮಾರು 25-26 ಕಿಲೋಮೀಟರ್ ವ್ಯಾಪ್ತಿಯಲ್ಲಿ ಪುನರುಜ್ಜೀವನಗೊಳಿಸುವ ಕಾರ್ಯಕ್ರಮ ಕೈಗೊಂಡಿದ್ದಾರೆ. ಬ್ಯಾರೇಜ್‌ಗಳ ನಿರ್ಮಾಣದಿಂದ ಅಂತರ್ಜಲ ಮಟ್ಟ ಹೆಚ್ಚಾಗಿದ್ದು, ಗ್ರಾಮಗಳು ಮತ್ತು ಜಾನುವಾರುಗಳಿಗೆ ನೀರಿನ ಅನುಕೂಲವಾಗಿದೆ. ಜಾತ್ರೆಯಲ್ಲಿ “ಜಲದೀಕ್ಷೆ” ಅಭಿಯಾನಗಳ ಮೂಲಕ ನೀರಿನ ಸಂರಕ್ಷಣೆಯನ್ನು ಸಾಮಾಜಿಕ-ಧಾರ್ಮಿಕ ಜಾಗೃತಿಯೊಂದಿಗೆ ಜೋಡಿಸಿದ್ದಾರೆ.

ಶಿಕ್ಷಣವನ್ನು ಸಮಾಜ ಪರಿವರ್ತನೆಯ ಪ್ರಮುಖ ಸಾಧನವೆಂದು ಪರಿಗಣಿಸಿ, ಮಹಿಳಾ ಶಿಕ್ಷಣ, ಯುವಜನರ ಶಿಕ್ಷಣ, ವಿಶೇಷ ಚೇತನರ ಕಲ್ಯಾಣ, ಬಾಲ್ಯವಿವಾಹ ವಿರೋಧಿ ಜಾಗೃತಿ ಮತ್ತು ಗ್ರಾಮೀಣ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದಾರೆ. ಸುಮಾರು ಐದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತ ಹಾಸ್ಟೇಲ್ ಸೌಲಭ್ಯ ಒದಗಿಸಲಾಗಿದೆ. ಇತ್ತೀಚೆಗೆ ಕೋಳೂರು ಗ್ರಾಮದ ಬಳಿ ವಿದ್ಯಾರ್ಥಿನಿಯರಿಗಾಗಿ ಉಚಿತ ಹೈಟೆಕ್ ವಸತಿ ಕಾಲೇಜು ಸ್ಥಾಪಿಸಲಾಗಿದೆ. ಜ್ಞಾನ ದಾಸೋಹದ ಅಂಗವಾಗಿ 24 ಗಂಟೆಗಳ ಗ್ರಂಥಾಲಯ ಮತ್ತು ಉಚಿತ ಶಿಕ್ಷಣ ವ್ಯವಸ್ಥೆಗಳನ್ನು ವಿಸ್ತರಿಸಲಾಗಿದೆ.
ಕೋವಿಡ್ ಕಾಲದಲ್ಲಿ ಶ್ರೀಗಳು ಮತ್ತು ಗವಿಮಠ ನಡೆಸಿದ ಸಾಮಾಜಿಕ ಸೇವಾ ಕಾರ್ಯಗಳು ವ್ಯಾಪಕವಾಗಿ ಮೆಚ್ಚುಗೆ ಪಡೆದಿವೆ.
ಮೈಸೂರು ದಸರೆಯ ಉದ್ಘಾಟನೆಯ ಮೂಲಕ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳ ಸಾಮಾಜಿಕ ಮತ್ತು ಆಧ್ಯಾತ್ಮಿಕ ನೇತೃತ್ವ ಮತ್ತಷ್ಟು ವಿಸ್ತರಿಸುವ ನಿರೀಕ್ಷೆಯಿದೆ.











