ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2026ರ ನಾಡಕುಸ್ತಿ ಪಂದ್ಯಾವಳಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭಾನುವಾರ ಚಾಲನೆ ನೀಡಿದರು. ಕುಸ್ತಿಪಟುಗಳ ಭುಜ ತಟ್ಟಿ ಪ್ರೋತ್ಸಾಹಿಸಿದ ಅವರು, ಮಂಗಳಾರತಿ ನೆರವೇರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನಗರದ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಆವರಣದಲ್ಲಿರುವ ಶ್ರೀ ಡಿ. ದೇವರಾಜು ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯಾವಳಿಯಲ್ಲಿ ಮುಖ್ಯಮಂತ್ರಿ ಮೊದಲ ಮಾರ್ಫಿಟ್ ಕುಸ್ತಿಯನ್ನು ಕೆಲವು ಸಮಯ ವೀಕ್ಷಿಸಿ ಕುಸ್ತಿಪಟುಗಳಿಗೆ ಪ್ರೋತ್ಸಾಹ ನೀಡಿದರು.

2025ನೇ ದಸರಾ ಕಂಠೀರವ ಪ್ರಶಸ್ತಿ ವಿಜೇತ ಬೆಳಗಾವಿಯ ಪೈಲ್ವಾನ್ ಕಾಮೇಶ್ ಪಾಟೀಲ್ ಮತ್ತು ಮಹಾರಾಷ್ಟ್ರದ ಪೈಲ್ವಾನ್ ಶ್ರೀಮಂತ್ ಭೋಸ್ಲೆ ನಡುವೆ ನಡೆದ ಮೊದಲ ಮಾರ್ಫಿಟ್ ಕುಸ್ತಿ ರೋಚಕವಾಗಿ ಸಾಗಿತು. ಪೈ. ಶ್ರೀನಿವಾಸ್ ಮತ್ತು ಪೈ. ಮಹೇಶ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.
ಪಂದ್ಯಾವಳಿ ಸ್ವಲ್ಪ ತಡವಾಗಿ ಆರಂಭವಾದರೂ, ಕ್ರೀಡಾಭಿಮಾನಿಗಳು ಶಿಳ್ಳೆ-ಚಪ್ಪಾಳೆಯೊಂದಿಗೆ ಕುಸ್ತಿಪಟುಗಳನ್ನು ಉತ್ತೇಜಿಸಿ ವಾತಾವರಣವನ್ನು ಉರಿದುಂಬಿಸಿದರು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ, ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಸಿ. ಪುಟ್ಟರಂಗಶೆಟ್ಟಿ, ಶಾಸಕರಾದ ಅನಿಲ್ ಚಿಕ್ಕಮಾದು, ಶ್ರೀವತ್ಸ, ಹರೀಶ್ ಗೌಡ, ಡಿ. ರವಿಶಂಕರ್, ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿ. ನರೇಂದ್ರ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ದಸರಾ ಕುಸ್ತಿ ಉಪಸಮಿತಿ ಅಧ್ಯಕ್ಷ ಶ್ರೀನಿವಾಸಗೌಡ, ವಿಶೇಷಾಧಿಕಾರಿ ಎಲ್. ನಾಗೇಶ್, ಕಾರ್ಯಾಧ್ಯಕ್ಷ ಎಂ. ಧರ್ಮೇಂದ್ರ, ಕಾರ್ಯದರ್ಶಿ ನರಸಿಂಹ ಮೂರ್ತಿ ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.











