ಬೆಂಗಳೂರು: 2026ರ ಮೈಸೂರು ದಸರಾ ಮಹೋತ್ಸವದ ಸಂದರ್ಭದಲ್ಲಿ ರಾಜಮಾತೆ ಡಾ. ಪ್ರಮೋದಾ ದೇವಿ ಒಡೆಯರ್ ಅವರು ವ್ಯಕ್ತಪಡಿಸಿದ್ದ ಪತ್ರಿಕಾ ಪ್ರಕಟಣೆಗೆ ಸಂಬಂಧಿಸಿದಂತೆ ಮೈಸೂರು ನಗರ ಪೊಲೀಸ್ ಇಲಾಖೆ ಹಾಗೂ ಅರಣ್ಯ ಇಲಾಖೆ ಪ್ರತ್ಯೇಕವಾಗಿ ವಿವರವಾದ ಸ್ಪಷ್ಟನೆ ನೀಡಿವೆ. ಭದ್ರತಾ ವ್ಯವಸ್ಥೆ, ಅರಮನೆ ವಿಧಿವಿಧಾನಗಳು ಮತ್ತು ಅಂಬಾರಿ ಹೊರುವ ಆನೆಯ ಆಯ್ಕೆ ಪ್ರಕ್ರಿಯೆಯಲ್ಲಿ ಯಾವುದೇ ನಿಯಮಾತೀತ ಕ್ರಮಗಳಾಗಿಲ್ಲ ಎಂದು ಎರಡೂ ಇಲಾಖೆಗಳು ಸ್ಪಷ್ಟಪಡಿಸಿವೆ.
ಪೊಲೀಸ್ ಇಲಾಖೆಯ ಸ್ಪಷ್ಟನೆ
ಮೈಸೂರು ನಗರ ಪೊಲೀಸ್ ಆಯುಕ್ತರ ಕಚೇರಿಯು ಜಿಲ್ಲಾಧಿಕಾರಿಗಳಿಗೆ ವಿವರವಾದ ಅಭಿಪ್ರಾಯ ವರದಿ ಸಲ್ಲಿಸಿ, ದಸರಾ ಭದ್ರತೆ ಮತ್ತು ಆಚರಣೆಗಳ ಬಗ್ಗೆ ವಿವರಿಸಿದೆ.
ಕಳೆದ ಎರಡು ತಿಂಗಳುಗಳಿಂದ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮತ್ತು ಅರಮನೆ ಮಂಡಳಿ ಸೇರಿದಂತೆ ವಿವಿಧ ಇಲಾಖೆಗಳೊಂದಿಗೆ ನಿರಂತರ ಪೂರ್ವಭಾವಿ ಸಮನ್ವಯ ಸಭೆಗಳನ್ನು ನಡೆಸಿ, ಜಂಟಿ ಸಹಯೋಗದೊಂದಿಗೆ ದಸರಾ ಮಹೋತ್ಸವವನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ವಜ್ರಮುಷ್ಠಿ ಕಾಳಗ: ಪ್ರತಿವರ್ಷದಂತೆ ಜಟ್ಟಿ ಸಮುದಾಯದವರಿಗೆ ಬ್ರಹ್ಮಪುರಿ ದ್ವಾರದ ಮೂಲಕ ಪ್ರವೇಶ ಕಲ್ಪಿಸಲಾಗಿತ್ತು. ನಿಗದಿತ ಸಮಯಕ್ಕೆ ನಾಲ್ಕು ತಂಡಗಳ ಪೈಕಿ ಮೂರು ತಂಡಗಳು ಆಗಮಿಸಿದ್ದವು. ತಡವಾಗಿ ಬಂದ ಒಂದು ತಂಡ ಅಧಿಕೃತ ಪಾಸ್ ಇಲ್ಲದ ಸದಸ್ಯರನ್ನು ಒಳಗೆ ಬಿಡುವಂತೆ ಒತ್ತಾಯಿಸಿ ವಿಳಂಬ ಮಾಡಿ ಸ್ವತಃ ವಾಪಸ್ ತೆರಳಿತ್ತು.
ಅಂಬಾರಿ ಬಳಿ ಭದ್ರತೆ: ಅಂಬಾರಿ ಕಟ್ಟುವ ಸ್ಥಳದಲ್ಲಿ ಅನಾವಶ್ಯಕ ವ್ಯಕ್ತಿಗಳು ಅಥವಾ ಅಧಿಕಾರಿಗಳ ಕುಟುಂಬಸ್ಥರಿಗೆ ಪ್ರವೇಶ ಕಲ್ಪಿಸಿರಲಿಲ್ಲ. ಈ ಬಾರಿ ಹೊಸ ಆನೆ ನಿಯೋಜನೆಗೊಂಡಿದ್ದರಿಂದ ಅಗತ್ಯ ಕರ್ತವ್ಯ ಪಾಸ್ ಹೊಂದಿದ್ದ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು, 40 ಸಿಬ್ಬಂದಿಗಳ ‘ಚೀತಾ ಪಡೆ’ ಮತ್ತು ಕಾವಾಡಿಗಳು ಮಾತ್ರ ಸ್ಥಳದಲ್ಲಿದ್ದರು.
ನೂರಾರು ವರ್ಷಗಳ ಸಂಪ್ರದಾಯದಂತೆ ಪೊಲೀಸ್ ಆಯುಕ್ತರು ಅರಮನೆಯಿಂದ ಅಂಬಾರಿಯ ಸುರಕ್ಷತೆಯ ಬಗ್ಗೆ ಮುಚ್ಚಳಿಕೆ ನೀಡಿ ಸ್ವೀಕರಿಸಿದ್ದರು. ಜಂಬೂ ಸವಾರಿ ಮುಕ್ತಾಯಗೊಂಡ ನಂತರ ಅಂಬಾರಿಯನ್ನು ಸುರಕ್ಷಿತವಾಗಿ ಅರಮನೆಗೆ ಮರಳಿ ಹಸ್ತಾಂತರಿಸಲಾಗಿದೆ. ಅರಮನೆ ವತಿಯಿಂದ ಅಧಿಕೃತ ಡ್ಯೂಟಿ ಪಾಸ್ ಪಡೆದ ಪ್ರತಿನಿಧಿಗಳು ಅಂಬಾರಿಯನ್ನು ಕಟ್ಟುವ ಸಮಯದಿಂದ ಹಿಡಿದು ಮೆರವಣಿಗೆ ಮುಗಿಯುವವರೆಗೆ ಉಪಸ್ಥಿತರಿದ್ದರು.
ರಾಜಕುಟುಂಬದವರು ಹಾಗೂ ಅವರ ಅತಿಥಿಗಳಿಗೆ ಬ್ರಹ್ಮಪುರಿ ಗೇಟ್‌ನಲ್ಲಿ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿ ಕೇವಲ ಸಂಚಾರ ನಿರ್ವಹಣೆಗೆ ಅಗತ್ಯವಿದ್ದಷ್ಟು ಅಧಿಕಾರಿಗಳನ್ನು ಮಾತ್ರ ನಿಯೋಜಿಸಲಾಗಿತ್ತು.
ಅರಮನೆ ಆವರಣದಲ್ಲಿ ಜಂಬೂ ಸವಾರಿ ವೀಕ್ಷಿಸಲು ಬಂದ ಸುಮಾರು 50 ಸಾವಿರ ಪ್ರೇಕ್ಷಕರ ಸುಗಮ ಸಂಚಾರ ಮತ್ತು ಅನಧಿಕೃತ ಪ್ರವೇಶ ನಿಯಂತ್ರಣಕ್ಕಾಗಿ ಮುಂಚಿತವಾಗಿ ಸ್ಥಳ ಪರಿಶೀಲನೆ ನಡೆಸಲಾಗಿತ್ತು. ಧಾರ್ಮಿಕ ವಿಧಿವಿಧಾನಗಳಿಗೆ ಅಡ್ಡಿಯಾಗದಂತೆ ಅಗತ್ಯವಿದ್ದ ಕಡೆಗಳಲ್ಲಿ ಮಾತ್ರ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು.
ಈ ಬಾರಿ ಘನತೆವೆತ್ತ ರಾಜ್ಯಪಾಲರು, ಮುಖ್ಯಮಂತ್ರಿಗಳು, ಸಚಿವರು, ವಿದೇಶಿ ರಾಯಭಾರಿಗಳು, ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ನ್ಯಾಯಾಧೀಶರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಗಣ್ಯಾತಿಗಣ್ಯರು ಭಾಗವಹಿಸಿದ್ದರು. ಅವರ ಸೂಕ್ತ ಭದ್ರತೆ, ಕಾಲ್ತುಳಿತದಂತಹ ಘಟನೆಗಳ ತಡೆ ಮತ್ತು ಅರಮನೆಯ ಸಾಂಪ್ರದಾಯಿಕ ಚಟುವಟಿಕೆಗಳು ಸುಗಮವಾಗಿ ನಡೆಯುವಂತೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು ಎಂದು ಮೈಸೂರು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಅರಣ್ಯ ಇಲಾಖೆಯ ಸ್ಪಷ್ಟನೆ – ‘ಪ್ರಶಾಂತ’ ಆನೆ ಆಯ್ಕೆ
ಮೈಸೂರು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಅಂಬಾರಿ ಆನೆಯ ಆಯ್ಕೆ ಸಂಪೂರ್ಣ ವೈಜ್ಞಾನಿಕ ತಾಲೀಮು, ದೈಹಿಕ ಸಾಮರ್ಥ್ಯ ಮತ್ತು ಭದ್ರತಾ ನಿಯಮಗಳ ಅನ್ವಯ ನಡೆಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಬಾರಿ ವಿವಿಧ ಆನೆ ಶಿಬಿರಗಳಿಂದ ಒಟ್ಟು 13 ಆನೆಗಳು ಮೈಸೂರಿಗೆ ಆಗಮಿಸಿದ್ದವು. ಅರಮನೆ ಆವರಣದಲ್ಲಿ ನಿಯಮಿತ ತಾಲೀಮು ನೀಡಲಾಗಿದ್ದು, ಮಹೇಂದ್ರ, ಸುಗ್ರೀವ, ಧನಂಜಯ, ಏಕಲವ್ಯ ಮತ್ತು ಪ್ರಶಾಂತ ಆನೆಗಳಿಗೆ ಮರಳಿನ ಮೂಟೆಗಳನ್ನಿರಿಸಿದ ಮರದ ಅಂಬಾರಿ ಹೊರಿಸಿ ಭಾರ ಹೊರುವ ಸಾಮರ್ಥ್ಯವನ್ನು ಪರೀಕ್ಷಿಸಲಾಯಿತು.
ತಾಲೀಮಿನ ವೇಳೆ ‘ಮಹೇಂದ್ರ’ ಆನೆ ಆಯಾಸಗೊಂಡು ಮುಂದೆ ಸಾಗಲು ಹಿಂಜರಿಯುತ್ತಿದ್ದುದು ಕಂಡುಬಂದಿತು. ಆದರೆ ಪ್ರಶಾಂತ, ಸುಗ್ರೀವ, ಧನಂಜಯ ಮತ್ತು ಏಕಲವ್ಯ ಆನೆಗಳು ಸೆಪ್ಟೆಂಬರ್ 25ರಿಂದ ಅಕ್ಟೋಬರ್ 13ರವರೆಗೆ ನೀಡಲಾದ ಭಾರ ಹೊರುವ ತಾಲೀಮಿಗೆ ಅತ್ಯುತ್ತಮವಾಗಿ ಸ್ಪಂದಿಸಿದವು. ಆನೆಗಳ ಆರೋಗ್ಯ, ಭಾರ ಹೊರುವ ಸಮತೋಲನ, ನಡಿಗೆಯ ವೇಗ ಮತ್ತು ಸಾರ್ವಜನಿಕರ ಸುರಕ್ಷತೆಯನ್ನು ಮುನ್ನೆಲೆಯಿಟ್ಟುಕೊಂಡು ‘ಪ್ರಶಾಂತ’ ಆನೆಯನ್ನು ಅಂತಿಮವಾಗಿ ಆಯ್ಕೆ ಮಾಡಲಾಯಿತು.
ಹಿಂದಿನಿಂದಲೂ ಅಂಬಾರಿ ಆನೆ ಆಯ್ಕೆಯ ಕುರಿತು ಅರಮನೆಗೆ ಅಥವಾ ರಾಜಮಾತೆಯವರಿಗೆ ಲಿಖಿತ ವರದಿ ಸಲ್ಲಿಸುವ ಔಪಚಾರಿಕ ಪದ್ಧತಿ ಇಲಾಖೆಯಲ್ಲಿ ಜಾರಿಯಲ್ಲಿಲ್ಲ. ಆದಾಗ್ಯೂ, ಸೆಪ್ಟೆಂಬರ್ 1 ಮತ್ತು 3ರಂದು ಅರಣ್ಯಾಧಿಕಾರಿಗಳು ಮೊದಲ ತಂಡದ 9 ಆನೆಗಳೊಂದಿಗೆ ಅರಮನೆಗೆ ಭೇಟಿ ನೀಡಿ ರಾಜಮಾತೆಯವರೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದರು. ಅಕ್ಟೋಬರ್ 11 ಮತ್ತು 12ರಂದು (ಸಂಜೆ 5:44ಕ್ಕೆ) ರಾಜಮಾತೆಯವರಿಗೆ ದೂರವಾಣಿ ಕರೆ ಮಾಡಿ ಆಯ್ಕೆ ಪ್ರಕ್ರಿಯೆಯ ಸಂಪೂರ್ಣ ವಿವರಗಳನ್ನು ವೈಯಕ್ತಿಕವಾಗಿ ವಿವರಿಸಲಾಗಿತ್ತು.
ಅಕ್ಟೋಬರ್ 13ರಂದು ಮೈಸೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ವಲಯ ಅರಣ್ಯಾಧಿಕಾರಿಗಳು, ಪಶುವೈದ್ಯಾಧಿಕಾರಿಗಳು, ಮಾವುತರು ಮತ್ತು ಕಾವಾಡಿಗಳೊಂದಿಗೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ತಾಲೀಮಿನ ವರದಿಗಳನ್ನು ಚರ್ಚಿಸಿ, ಹಿರಿಯ ಅಧಿಕಾರಿಗಳ ಅನುಮೋದನೆಯೊಂದಿಗೆ ಪ್ರಶಾಂತ ಆನೆಯ ಆಯ್ಕೆಯನ್ನು ಪತ್ರಿಕಾ ಪ್ರಕಟಣೆ ಮೂಲಕ ಸಾರ್ವಜನಿಕರಿಗೆ ತಿಳಿಸಲಾಯಿತು.
ಆದ್ದರಿಂದ ಅಂಬಾರಿ ಆನೆ ಆಯ್ಕೆ ಪ್ರಕ್ರಿಯೆಯಲ್ಲಿ ಇಲಾಖೆಯು ನಿಯಮಾನುಸಾರ ಕ್ರಮಗಳನ್ನು ಕೈಗೊಂಡಿದ್ದು, ರಾಜಮಾತೆಯವರಿಗೆ ಮಾಹಿತಿ ನೀಡಿಲ್ಲ ಎಂಬ ಅಭಿಪ್ರಾಯಕ್ಕೆ ಯಾವುದೇ ಆಸ್ಪದವಿಲ್ಲ ಎಂದು ಅರಣ್ಯ ಇಲಾಖೆ ಸ್ಪಷ್ಟಪಡಿಸಿದೆ.











