ಬೆಂಗಳೂರು: ಕರ್ನಾಟಕದಲ್ಲಿ 2027ರಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಪಾಲುದಾರ ರಾಷ್ಟ್ರವಾಗಿ ಭಾಗವಹಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸ್ವಿಟ್ಜರ್ಲ್ಯಾಂಡ್ಗೆ ಆಹ್ವಾನ ನೀಡಿದ್ದಾರೆ.
ಬುಧವಾರ ಗೃಹ ಕಚೇರಿ ಕೃಷ್ಣಾದಲ್ಲಿ ಭಾರತದ ಸ್ವಿಟ್ಜರ್ಲ್ಯಾಂಡ್ ರಾಯಭಾರಿ ಮಾಯಾ ಟಿಫಾಸಿ ಅವರೊಂದಿಗೆ ನಡೆದ ಸಭೆಯಲ್ಲಿ ರಾಜ್ಯದ ಹೂಡಿಕೆ ಅವಕಾಶಗಳು ಹಾಗೂ ಉಭಯ ದೇಶಗಳ ನಡುವಿನ ಸಹಕಾರದ ಕುರಿತು ಚರ್ಚಿಸಿದರು.

ಕರ್ನಾಟಕವು ಬಲವಾದ ಕೈಗಾರಿಕಾ ತಳಹದಿ, ಕೌಶಲ್ಯಯುತ ಮಾನವ ಸಂಪನ್ಮೂಲ ಮತ್ತು ನವೋದ್ಯಮಗಳಿಗೆ ಪೂರಕವಾದ ಪರಿಸರ ವ್ಯವಸ್ಥೆಯನ್ನು ಹೊಂದಿದೆ. ಸುರಂಗ ಮೂಲಸೌಕರ್ಯ, ಸುಧಾರಿತ ಉತ್ಪಾದನೆ, ಎಂಜಿನಿಯರಿಂಗ್, ಔಷಧ ತಯಾರಿಕೆ, ಆಹಾರ ಸಂಸ್ಕರಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸ್ವಿಸ್ ಕಂಪನಿಗಳಿಗೆ ಹೂಡಿಕೆ ಮಾಡಲು ವಿಫುಲ ಅವಕಾಶಗಳಿವೆ ಎಂದು ಶಿವಕುಮಾರ್ ತಿಳಿಸಿದರು.

ರಾಜ್ಯದಲ್ಲಿ ಸುಸ್ಥಿರ ಹೂಡಿಕೆ, ಕೈಗಾರಿಕಾ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸ್ವಿಸ್ ಇನ್ವೆಸ್ಟ್ಮೆಂಟ್ ಫಂಡ್ ಫಾರ್ ಎಮರ್ಜಿಂಗ್ ಮಾರ್ಕೆಟ್ಸ್ (SIFEM) ಕರ್ನಾಟಕದಲ್ಲಿ ಹೂಡಿಕೆ ಮಾಡುವಂತೆ ಅವರು ಮನವಿ ಮಾಡಿದರು.
ಪ್ರಸ್ತುತ ಕರ್ನಾಟಕದಲ್ಲಿ ಸುಮಾರು 40 ಸ್ವಿಸ್ ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದು, 20 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ಒದಗಿಸಿವೆ. ಬೆಂಗಳೂರು–ಜ್ಯೂರಿಚ್ ನಡುವಿನ ನೇರ ವಿಮಾನ ಸಂಪರ್ಕ ಆರಂಭವಾಗುವುದರಿಂದ ವ್ಯಾಪಾರ ಹಾಗೂ ಜನರ ನಡುವಿನ ಸಂಬಂಧಗಳು ಮತ್ತಷ್ಟು ಬಲಗೊಳ್ಳಲಿವೆ ಎಂದು ಹೇಳಿದರು.
ಇದೇ ವೇಳೆ, ಸ್ವಿಟ್ಜರ್ಲ್ಯಾಂಡ್ನ ಪ್ರಸಿದ್ಧ ಆತಿಥ್ಯ ಶಿಕ್ಷಣ ಸಂಸ್ಥೆಗಳ ಅನುಭವದ ಆಧಾರದ ಮೇಲೆ ಕರ್ನಾಟಕದಲ್ಲಿ ಉನ್ನತ ಮಟ್ಟದ ಆತಿಥ್ಯ ತರಬೇತಿ ಸಂಸ್ಥೆ ಸ್ಥಾಪಿಸುವ ಸಾಧ್ಯತೆಗಳ ಬಗ್ಗೆಯೂ ಚರ್ಚಿಸಲಾಯಿತು.

ದಾವೋಸ್ ಎಐ ಶೃಂಗಸಭೆಗೆ ಆಹ್ವಾನ
2027ರಲ್ಲಿ ಸ್ವಿಟ್ಜರ್ಲ್ಯಾಂಡ್ನ ದಾವೋಸ್ನಲ್ಲಿ ನಡೆಯಲಿರುವ ಎಐ ಶೃಂಗಸಭೆಯಲ್ಲಿ ಭಾಗವಹಿಸುವಂತೆ ರಾಯಭಾರಿ ಮಾಯಾ ಟಿಫಾಸಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಆಹ್ವಾನ ನೀಡಿದರು. ಅಲ್ಲದೆ, ಸ್ವಿಟ್ಜರ್ಲ್ಯಾಂಡ್ನ ಉತ್ತಮ ಪದ್ಧತಿಗಳನ್ನು ತಿಳಿದುಕೊಳ್ಳಲು ಅಧ್ಯಯನ ಪ್ರವಾಸಗಳನ್ನು ಆಯೋಜಿಸುವುದು ಹಾಗೂ ಎರಡೂ ದೇಶಗಳ ಸಾಂಸ್ಕೃತಿಕ ಪರಂಪರೆಯ ವಿನಿಮಯಕ್ಕೆ ಉತ್ತೇಜನ ನೀಡುವ ಕುರಿತು ಸಲಹೆ ನೀಡಿದರು.











