ಬೆಂಗಳೂರು: ಯುನೆಸ್ಕೋ ವಿಶ್ವ ಪರಂಪರೆ ತಾಣವಾದ ಹಂಪಿಯ ಸ್ಮಾರಕಗಳ ಸಂರಕ್ಷಣಾ ಕಾರ್ಯಗಳು ಹಾಗೂ ರಾಜ್ಯ ಸರ್ಕಾರ, ಭಾರತೀಯ ಪುರಾತತ್ವ ಸಮೀಕ್ಷೆ (ASI) ಮತ್ತು ಇತರ ಸಂಸ್ಥೆಗಳ ನಡುವಿನ ಸಮನ್ವಯಕ್ಕೆ ಯುನೆಸ್ಕೋ ತಜ್ಞರ ತಂಡ ಮೆಚ್ಚುಗೆ ವ್ಯಕ್ತಪಡಿಸಿದೆ. ಹಂಪಿಯ ಪರಿಶೀಲನೆ ನಡೆಸಿರುವ ತಂಡವು ತನ್ನ ಅಂತಿಮ ವರದಿಯನ್ನು ಡಿಸೆಂಬರ್ ಮಧ್ಯಭಾಗದಲ್ಲಿ ಸಲ್ಲಿಸುವ ನಿರೀಕ್ಷೆಯಿದೆ.
ಹಂಪಿಯಲ್ಲಿ ಕ್ಷೇತ್ರ ಪರಿಶೀಲನೆ ನಡೆಸಿದ ಬಳಿಕ ಬುಧವಾರ ವಿಧಾನಸೌಧದಲ್ಲಿ ನಡೆದ ಸಮಾರೋಪ ಸಭೆಯಲ್ಲಿ ತಜ್ಞರು ತಮ್ಮ ಪ್ರಾಥಮಿಕ ಅಭಿಪ್ರಾಯಗಳನ್ನು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಹಂಚಿಕೊಂಡರು. ಹಂಪಿಯ ಪರಂಪರೆಯನ್ನು ದೀರ್ಘಕಾಲ ಸಂರಕ್ಷಿಸಲು ಸ್ಥಳೀಯ ಸಮುದಾಯದ ಪಾಲ್ಗೊಳ್ಳುವಿಕೆ, ತಜ್ಞ ಮಾನವ ಸಂಪನ್ಮೂಲ, ಹಣಕಾಸಿನ ನೆರವು ಹಾಗೂ ಬಲವಾದ ಆಡಳಿತ ವ್ಯವಸ್ಥೆ ಅಗತ್ಯವೆಂದು ಸಲಹೆ ನೀಡಿದರು.

ಕೀನ್ಯಾದ ಯುನೆಸ್ಕೋ ತಜ್ಞ ಪ್ರೊ. ಜಾರ್ಜ್ ಅಬುಂಗು ಅವರು ಹಂಪಿಯನ್ನು ಜಾಗತಿಕ ಮಹತ್ವದ ಅಪೂರ್ವ ಪರಂಪರೆ ತಾಣವೆಂದು ಬಣ್ಣಿಸಿ, ಸ್ಮಾರಕಗಳ ಸ್ಥಿತಿ ಮತ್ತು ಪ್ರಸ್ತುತ ನಡೆಯುತ್ತಿರುವ ಸಂರಕ್ಷಣಾ ಕಾರ್ಯಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ಪರಂಪರೆ ಸಂರಕ್ಷಣೆಯಲ್ಲಿ ಸ್ಥಳೀಯ ಸಮುದಾಯವೇ ಪ್ರಮುಖ ಪಾತ್ರ ವಹಿಸಬೇಕು ಎಂದು ಒತ್ತಿಹೇಳಿದ ಅವರು, ಸ್ಥಳೀಯರ ಭಾಗವಹಿಸುವಿಕೆ ಇಲ್ಲದೆ ಸುಸ್ಥಿರ ಸಂರಕ್ಷಣೆ ಸಾಧ್ಯವಿಲ್ಲ ಎಂದರು.
ಜಪಾನ್ನ ಯುನೆಸ್ಕೋ ತಜ್ಞ ಪ್ರೊ. ಇಚಿತಾ ಶಿಮೋಡಾ ಅವರು ಹಂಪಿಯನ್ನು ಕೇವಲ ಸ್ಮಾರಕಗಳ ಸಮೂಹವಾಗಿ ಪರಿಗಣಿಸದೆ, ಜೀವಂತ ಸಾಂಸ್ಕೃತಿಕ ತಾಣವಾಗಿ ಅಭಿವೃದ್ಧಿಪಡಿಸುವ ಅಗತ್ಯವನ್ನು ಪ್ರತಿಪಾದಿಸಿದರು. ಪರಂಪರೆಯ ಸಂರಕ್ಷಣೆ, ಪ್ರವಾಸೋದ್ಯಮದ ಬೆಳವಣಿಗೆ ಮತ್ತು ಸ್ಥಳೀಯರ ದೈನಂದಿನ ಬದುಕಿನ ನಡುವೆ ಸಮತೋಲನ ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಭಿವೃದ್ಧಿ ಆಯುಕ್ತೆ ಹಾಗೂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ಮಾತನಾಡಿ, ಹಂಪಿಯ ಸಾರ್ವತ್ರಿಕ ಮಹತ್ವದ ಪರಂಪರೆಯ ಮೌಲ್ಯವನ್ನು ಯಾವುದೇ ರಾಜಿ ಮಾಡಿಕೊಳ್ಳದೆ ಸಂರಕ್ಷಿಸುವುದು ಸರ್ಕಾರದ ಬದ್ಧತೆಯಾಗಿದೆ ಎಂದು ತಿಳಿಸಿದರು. ಈ ನಿಟ್ಟಿನಲ್ಲಿ ಸ್ಥಳೀಯ ಸಮುದಾಯದ ಸಹಭಾಗಿತ್ವ, ತಜ್ಞರ ಮಾರ್ಗದರ್ಶನ ಮತ್ತು ಬಲಿಷ್ಠ ಸಂಸ್ಥಾತ್ಮಕ ವ್ಯವಸ್ಥೆ ಅಗತ್ಯವೆಂದರು.

ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ್ ಮಾತನಾಡಿ, ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅವರ ಮಾರ್ಗದರ್ಶನದಲ್ಲಿ ಹಂಪಿಯ ಪ್ರವಾಸೋದ್ಯಮ ಅಭಿವೃದ್ಧಿಯು ಪರಂಪರೆ ಹಾಗೂ ಸ್ಥಳೀಯರ ಜೀವನೋಪಾಯಕ್ಕೆ ಧಕ್ಕೆಯಾಗದಂತೆ ಕೈಗೊಳ್ಳಲಾಗುವುದು ಎಂದು ಹೇಳಿದರು. ಮುಂದಿನ ಪ್ರವಾಸೋದ್ಯಮ ಮತ್ತು ಅಭಿವೃದ್ಧಿ ಯೋಜನೆಗಳಲ್ಲಿ ಪರಂಪರೆ ಪರಿಣಾಮ ಮೌಲ್ಯಮಾಪನ (Heritage Impact Assessment) ಕಡ್ಡಾಯವಾಗಿ ಅಳವಡಿಸುವ ನಿಲುವನ್ನು ಅವರು ಸ್ಪಷ್ಟಪಡಿಸಿದರು.
ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರವಾದ HWHAMAಗೆ ತಜ್ಞ ಸಿಬ್ಬಂದಿ ಮತ್ತು ಹಣಕಾಸಿನ ಬಲ ಒದಗಿಸುವುದು, ಪರಂಪರೆ ನಿರ್ವಹಣೆಯಲ್ಲಿ ಆಡಳಿತಾತ್ಮಕ ನಿರಂತರತೆ ಕಾಯ್ದುಕೊಳ್ಳುವುದು ಹಾಗೂ ಅಭಿವೃದ್ಧಿ ಯೋಜನೆಗಳನ್ನು ಪರಂಪರೆಯ ಮೇಲೆ ಉಂಟಾಗುವ ಪರಿಣಾಮಗಳ ಆಧಾರದಲ್ಲಿ ಪರಿಶೀಲಿಸುವುದು ಸೇರಿದಂತೆ ಹಲವು ಪ್ರಮುಖ ಸಲಹೆಗಳನ್ನು ತಜ್ಞರ ತಂಡ ನೀಡಿದೆ.
ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಬಿ.ಬಿ. ಕಾವೇರಿ, ASI ವಿಶ್ವ ಪರಂಪರೆ ತಾಣಗಳ ಹೆಚ್ಚುವರಿ ಮಹಾನಿರ್ದೇಶಕಿ ಜಾಹ್ನವಿ ಶರ್ಮಾ, ವಿಜಯನಗರ ಜಿಲ್ಲಾಧಿಕಾರಿ ಹಾಗೂ HWHAMA ಅಧ್ಯಕ್ಷೆ ಕವಿತಾ ಎಸ್. ಮನ್ನಿಕೇರಿ, ಪ್ರವಾಸೋದ್ಯಮ ಆಯುಕ್ತ ಶಿವಪ್ರಸಾದ್ ಸೇರಿದಂತೆ ASI, ಕೊಪ್ಪಳ ಜಿಲ್ಲಾಡಳಿತ, HWHAMA ಮತ್ತು ರಾಜ್ಯ ಪುರಾತತ್ವ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.











