ಮೈತ್ರಿ ಬಲಪಡಿಸಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವತ್ತ ಒಗ್ಗಟ್ಟಿನ ಹೋರಾಟ
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರನ್ನು ಭೇಟಿ ಮಾಡಿ ರಾಜ್ಯದ ಪ್ರಚಲಿತ ರಾಜಕೀಯ ವಿದ್ಯಮಾನಗಳು, ಕಾಂಗ್ರೆಸ್ ಸರ್ಕಾರದ ಆಡಳಿತ ಹಾಗೂ ಮುಂಬರುವ ರಾಜಕೀಯ ಬೆಳವಣಿಗೆಗಳ ಕುರಿತು ಸುದೀರ್ಘ ಚರ್ಚೆ ನಡೆಸಿದರು.
“ದೇವೇಗೌಡರು ರಾಜ್ಯದ ಪ್ರಸ್ತುತ ರಾಜಕೀಯ ಪರಿಸ್ಥಿತಿಯ ಕುರಿತು ಅನೇಕ ಮಹತ್ವದ ಸಲಹೆಗಳನ್ನು ನೀಡಿದ್ದಾರೆ. ಕರ್ನಾಟಕದಲ್ಲಿ ಉತ್ತಮ ಆಡಳಿತ ಮತ್ತು ರಾಜಕೀಯ ಸ್ಥಿರತೆ ನೆಲೆಸಬೇಕು ಎಂಬುದು ಎಲ್ಲರ ಅಪೇಕ್ಷೆ. ಆ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಅವರು ಸಲಹೆ ನೀಡಿದ್ದಾರೆ. ಪ್ರಸ್ತುತ ಕಾಂಗ್ರೆಸ್ ಸರ್ಕಾರದ ಆಡಳಿತದ ಬಗ್ಗೆ ಅವರಿಗೂ ಅಸಮಾಧಾನವಿದ್ದು, ಆದಷ್ಟು ಶೀಘ್ರವಾಗಿ ಈ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ನಾವೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರ ಸಲಹೆಗಳು ನನ್ನ ಅಭಿಪ್ರಾಯಕ್ಕೂ ಪೂರಕವಾಗಿವೆ. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ವಿವಿಧ ವಿಚಾರಗಳ ಕುರಿತು ಸವಿಸ್ತಾರವಾಗಿ ಚರ್ಚೆ ನಡೆಸಿದ್ದೇವೆ,” ಎಂದು ಯಡಿಯೂರಪ್ಪ ತಿಳಿಸಿದರು.

ಮೈತ್ರಿ ಮತ್ತಷ್ಟು ಬಲಪಡಿಸುವ ಕುರಿತು ಚರ್ಚೆ
ಮುಂಬರುವ ಚುನಾವಣೆಗಳ ಹಿನ್ನೆಲೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ಮತ್ತಷ್ಟು ಬಲಪಡಿಸುವ ಕುರಿತು ಚರ್ಚೆಗಳು ನಡೆಯುತ್ತಿವೆ ಎಂದು ಯಡಿಯೂರಪ್ಪ ಹೇಳಿದರು. “ಈ ವಿಚಾರದಲ್ಲಿ ಅಂತಿಮ ತೀರ್ಮಾನವನ್ನು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಮಾಜಿ ಪ್ರಧಾನಿ ದೇವೇಗೌಡರು ಸೇರಿದಂತೆ ಪಕ್ಷದ ವರಿಷ್ಠರು ಕೈಗೊಳ್ಳಲಿದ್ದಾರೆ. ಅವರ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ.
ಈಗಾಗಲೇ ಬಿಜೆಪಿ ಮತ್ತು ಜೆಡಿಎಸ್ ನಡುವೆ ಉತ್ತಮ ಸಂಬಂಧವಿದೆ. ದೇವೇಗೌಡರು ಪ್ರಧಾನಮಂತ್ರಿಗಳೊಂದಿಗೆ ಮಾತುಕತೆ ನಡೆಸಿ ಮೈತ್ರಿಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮುಂದಾಗುತ್ತಾರೆ ಎಂಬ ವಿಶ್ವಾಸವಿದೆ. ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಟ ನಡೆಸುವ ಮೂಲಕ ಕರ್ನಾಟಕದಲ್ಲಿ ರಾಜಕೀಯವಾಗಿ ಮುನ್ನಡೆಯಬೇಕಿದೆ.
ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿಯೂ ಮೈತ್ರಿ ಮುಂದುವರಿಸುವ ಕುರಿತು ಆಶಯವಿದೆ. ಈ ಸಂಬಂಧ ಮುಂದಿನ ದಿನಗಳಲ್ಲಿ ಜೆಡಿಎಸ್ ನಾಯಕರು ಹಾಗೂ ಹೆಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಸಮಗ್ರವಾಗಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಅನಿವಾರ್ಯ ಕಾರಣಗಳಿಂದಾಗಿ ಕುಮಾರಸ್ವಾಮಿ ಅವರು ಇಂದಿನ ಭೇಟಿಗೆ ಆಗಮಿಸಲು ಸಾಧ್ಯವಾಗಿಲ್ಲ,” ಎಂದರು.

ಕಾಂಗ್ರೆಸ್ನ ಆಂತರಿಕ ಗೊಂದಲ, ಆರ್ಥಿಕ ಸಂಕಷ್ಟ
ರಾಜ್ಯ ಕಾಂಗ್ರೆಸ್ನಲ್ಲಿನ ಆಂತರಿಕ ಭಿನ್ನಮತ, ಕಚ್ಚಾಟ ಹಾಗೂ ನಾಯಕತ್ವದ ಗೊಂದಲಗಳನ್ನು ಗಮನಿಸಿದರೆ ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ಎಂಬ ವಾತಾವರಣ ನಿರ್ಮಾಣವಾಗಿದೆ ಎಂದು ಯಡಿಯೂರಪ್ಪ ಅಭಿಪ್ರಾಯಪಟ್ಟರು. “ಮುಖ್ಯಮಂತ್ರಿ ಬದಲಾವಣೆ ಅಥವಾ ಮಧ್ಯಂತರ ಚುನಾವಣೆಯ ಸಾಧ್ಯತೆಗಳ ಬಗ್ಗೆ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ. ಕಾಂಗ್ರೆಸ್ ನಾಯಕರು ಪದೇಪದೇ ದೆಹಲಿಗೆ ತೆರಳಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ ಅವರ ಪಕ್ಷದೊಳಗಿನ ಗೊಂದಲದ ಸ್ವರೂಪ ಅರ್ಥವಾಗುತ್ತದೆ. ಕಾದು ನೋಡೋಣ.
ಆದರೆ, ರಾಜ್ಯದಲ್ಲಿ ಯಾರು ಮುಖ್ಯಮಂತ್ರಿಯಾಗುತ್ತಾರೆ, ಯಾರು ಅಧಿಕಾರದಲ್ಲಿ ಮುಂದುವರಿಯುತ್ತಾರೆ ಎಂಬುದಕ್ಕಿಂತ ಜನರ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತಿದೆಯೇ ಎಂಬುದು ಮುಖ್ಯ. ರಾಜ್ಯದ ಆರ್ಥಿಕ ಪರಿಸ್ಥಿತಿ ಅತ್ಯಂತ ಹದಗೆಟ್ಟಿದೆ. ಸರ್ಕಾರಿ ಸಾರಿಗೆ ಬಸ್ಗಳಿಗೆ ಡೀಸೆಲ್ ಹಾಕಲೂ ಹಣವಿಲ್ಲದಂತಹ ದುಸ್ಥಿತಿ ನಿರ್ಮಾಣವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಜನರು ತೆರಿಗೆ ರೂಪದಲ್ಲಿ ನೀಡಿದ ಹಣ ಎಲ್ಲಿ ಹೋಗುತ್ತಿದೆ ಎಂಬ ಪ್ರಶ್ನೆಗೆ ಸರ್ಕಾರ ಉತ್ತರಿಸಬೇಕಿದೆ.
ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರಕ್ಕೆ ರಾಜ್ಯದ ಅಭಿವೃದ್ಧಿ ಹಾಗೂ ಜನರ ಮೂಲಭೂತ ಸಮಸ್ಯೆಗಳ ಬಗ್ಗೆ ಗಮನಹರಿಸಲು ಸಾಧ್ಯವಾಗುತ್ತಿಲ್ಲ. ಕರ್ನಾಟಕ ಹಿಂದೆಂದೂ ಕಾಣದಂತಹ ಆರ್ಥಿಕ ಮತ್ತು ಆಡಳಿತಾತ್ಮಕ ಸಂಕಷ್ಟವನ್ನು ಎದುರಿಸುತ್ತಿದೆ. ಇದು ಅತ್ಯಂತ ನೋವಿನ ಸಂಗತಿ,” ಎಂದರು.
ಜನರ ಸಮಸ್ಯೆಗಳನ್ನು ಬದಿಗಿಟ್ಟು ಸ್ಟಿಂಗ್ ಆಪರೇಷನ್ ಚರ್ಚೆ
ರಾಜ್ಯದಲ್ಲಿ ರೈತರು, ಬಡವರು, ಕಾರ್ಮಿಕರು ಹಾಗೂ ಸಾರ್ವಜನಿಕರು ಅನೇಕ ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದರೆ ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಬದಲು ಕಾಂಗ್ರೆಸ್ ಸರ್ಕಾರದ ನಾಯಕರು ಆಂತರಿಕ ಕಚ್ಚಾಟ ಮತ್ತು ಸ್ಟಿಂಗ್ ಆಪರೇಷನ್ ವಿಚಾರಗಳಲ್ಲಿಯೇ ಕಾಲ ಕಳೆಯುತ್ತಿದ್ದಾರೆ ಎಂದು ಯಡಿಯೂರಪ್ಪ ಟೀಕಿಸಿದರು.
“ಜನರ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕಾದ ಸಂದರ್ಭದಲ್ಲಿ ರಾಜಕೀಯ ಗೊಂದಲಗಳೇ ಮುನ್ನೆಲೆಗೆ ಬರುತ್ತಿರುವುದು ದುರದೃಷ್ಟಕರ. ರಾಜ್ಯದ ಜನರು ಸರ್ಕಾರದ ಆಡಳಿತವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಬದಲು ಅಧಿಕಾರದ ಗೊಂದಲಗಳಲ್ಲಿ ಮುಳುಗಿರುವ ಸರ್ಕಾರದ ಬಗ್ಗೆ ಜನರು ಸೂಕ್ತ ಸಮಯದಲ್ಲಿ ತಮ್ಮ ತೀರ್ಮಾನವನ್ನು ಪ್ರಕಟಿಸಲಿದ್ದಾರೆ,” ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರಿಗೆ ಹಾಗೂ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ತಿಳಿಸಿದರು.











