ನವೆಂಬರ್ 1ರಂದು ಜಾಲಹಳ್ಳಿಯಲ್ಲಿ ಕುಮಾರಸ್ವಾಮಿ ಅವರಿಂದ ಸಮರ್ಪಣೆ
ನವದೆಹಲಿ: ಕನ್ನಡ ರಾಜ್ಯೋತ್ಸವದ ನಿಮಿತ್ತ ಕೇಂದ್ರ ಸರ್ಕಾರಿ ಸ್ವಾಮ್ಯದ ಹೆಚ್ಎಂಟಿ ಕಂಪನಿಯು ‘ಹೆಚ್ಎಂಟಿ ಕನ್ನಡಿಗ’ ಎಂಬ ನೂತನ ಸರಣಿಯ ವಿಶಿಷ್ಟ ಕೈಗಡಿಯಾರಗಳನ್ನು ತಯಾರಿಸಿದೆ. ಈ ಸರಣಿಯ ಗಡಿಯಾರಗಳನ್ನು ಭಾನುವಾರ ಸಂಜೆ ಬೆಂಗಳೂರಿನ ಜಾಲಹಳ್ಳಿ ಹೆಚ್ಎಂಟಿ ಆಟದ ಮೈದಾನದಲ್ಲಿ ನಡೆಯುವ ವರ್ಣರಂಜಿತ ಕಾರ್ಯಕ್ರಮದಲ್ಲಿ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಕನ್ನಡಿಗರಿಗೆ ಸಮರ್ಪಣೆ ಮಾಡಲಿದ್ದಾರೆ.
ಶನಿವಾರ ಬೆಳಿಗ್ಗೆ ನವದೆಹಲಿಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಸಚಿವ ಕುಮಾರಸ್ವಾಮಿ ಅವರು, “ಕರ್ನಾಟಕ 71ನೇ ರಾಜ್ಯೋತ್ಸವ ಸಂಭ್ರಮದಲ್ಲಿದೆ. ಕೇಂದ್ರ ಸರ್ಕಾರದ ಕಾರ್ಖಾನೆಯಾದರೂ ಮೊದಲಿನಿಂದಲೂ ಹೆಚ್ಎಂಟಿ ಕನ್ನಡ ನಾಡು-ನುಡಿ, ಸಂಸ್ಕೃತಿ ಮತ್ತು ಪರಂಪರೆಗೆ ತನ್ನದೇ ಆದ ವಿಶೇಷ ಕೊಡುಗೆಯನ್ನು ನೀಡುತ್ತಾ ಬಂದಿದೆ. ಅದಕ್ಕೆ ಪೂರಕವಾಗಿ ಈ ರಾಜ್ಯೋತ್ಸವಕ್ಕೆ ನೂತನ ಸರಣಿಯ ಐದು ಅತ್ಯುತ್ತಮ ಗುಣಮಟ್ಟದ ಕೈಗಡಿಯಾರಗಳನ್ನು ಕರ್ನಾಟಕಕ್ಕೆ ನೀಡುತ್ತಿದ್ದೇವೆ” ಎಂದು ಹೇಳಿದರು.

‘ಭಾರತದ ಸಮಯಪಾಲಕ’ ಹಾಗೂ ‘ಕರ್ನಾಟಕದ ಹೆಮ್ಮೆ’ ಎಂದೇ ಪ್ರಖ್ಯಾತವಾಗಿರುವ ಹೆಚ್ಎಂಟಿ ತಯಾರಿಸಿರುವ ಈ ನೂತನ ಸರಣಿ ಗಡಿಯಾರಗಳು ಚೈನ್ ಮತ್ತು ಬೆಲ್ಟ್ (ಸ್ಟ್ರ್ಯಾಪ್) ನಮೂನೆಗಳಲ್ಲಿ ಲಭ್ಯವಿರಲಿವೆ. ಇವುಗಳ ಬೆಲೆ ₹3,500ರಿಂದ ₹3,600ರವರೆಗೆ ಇರುತ್ತದೆ. ಅತ್ಯಾಧುನಿಕ ತಂತ್ರಜ್ಞಾನ ಹಾಗೂ ರೇಡಿಯಂ ಹೊಳಪು ಹೊಂದಿರುವ ಈ ಕೈಗಡಿಯಾರಗಳು ಕನ್ನಡಿಗರಿಗೆ ಇಷ್ಟವಾಗುತ್ತವೆ ಎಂಬ ವಿಶ್ವಾಸವಿದೆ ಎಂದು ಸಚಿವರು ತಿಳಿಸಿದರು. ಬೆಲ್ಟ್ ಗಡಿಯಾರಗಳಿಗೆ ಇಟಲಿಯ ಅಪ್ಪಟ ಚರ್ಮದ ಬೆಲ್ಟ್ಗಳನ್ನು ಅಳವಡಿಸಲಾಗಿದೆ ಎಂದು ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ಕೈಗಡಿಯಾರಗಳ ಬಿಡುಗಡೆಯೊಂದಿಗೆ ಕನ್ನಡಿಗರನ್ನು ಮನರಂಜಿಸಲು ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರಿಂದ ಸಂಗೀತ ಸಂಜೆಯೂ ಏರ್ಪಾಡಾಗಿದೆ. ಸುಮಾರು 25ರಿಂದ 30 ಪ್ರಮುಖ ಕನ್ನಡ ಸಂಘಟನೆಗಳ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಅವರೆಲ್ಲರೊಂದಿಗೆ ಶನಿವಾರ ನವದೆಹಲಿಯಿಂದಲೇ ಸಂವಾದ ನಡೆಸಿದ್ದೇನೆ. ಕನ್ನಡ ನಾಡು-ನುಡಿ ವಿಷಯದಲ್ಲಿ ಅವಿರತವಾಗಿ ಹೋರಾಟ ನಡೆಸುವ ಹೋರಾಟಗಾರರ ಸಹಕಾರವನ್ನು ಕೋರಿದ್ದೇನೆ ಎಂದು ಸಚಿವರು ಮಾಹಿತಿ ನೀಡಿದರು.
“ಬಾಲ್ಯದಿಂದಲೂ ನಾನು ಹೆಚ್ಎಂಟಿ ಗಡಿಯಾರಗಳ ಅಭಿಮಾನಿ. ಈ ಗಡಿಯಾರಗಳ ಬಗ್ಗೆ ಕನ್ನಡಿಗರಿಗೆ ಭಾವನಾತ್ಮಕ ಬಾಂಧವ್ಯವಿದೆ. ಇಂದಿಗೂ ಯುವಜನರು ಕಿಲೋಮೀಟರ್ಗಟ್ಟಲೆ ಸಾಲಾಗಿ ನಿಂತು ಹೆಚ್ಎಂಟಿ ವಾಚ್ಗಳನ್ನು ಖರೀದಿಸುತ್ತಿದ್ದಾರೆ. ಹೀಗಾಗಿ ಈ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಕೇಂದ್ರದ ನರೇಂದ್ರ ಮೋದಿ ಅವರ ಸರ್ಕಾರ ಅವಿರತವಾಗಿ ಪ್ರಯತ್ನ ಮಾಡುತ್ತಿದೆ. ಬೃಹತ್ ಕೈಗಾರಿಕೆ ಸಚಿವನಾಗಿ ನನ್ನ ಅಧೀನಕ್ಕೆ ಈ ಕಾರ್ಖಾನೆ ಬಂದಿದ್ದು, ಇದನ್ನು ಉಳಿಸಲು ನಾನು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ” ಎಂದು ಸಚಿವ ಕುಮಾರಸ್ವಾಮಿ ಅವರು ಹೇಳಿದರು.











